

ನೆಲಮಂಗಲ: ಸಮಸ್ಯೆಗಳಿಗೆ ಪರಿಹಾರ ದೊರಕಿಸಿಕೊಡುವ ಪ್ರತಿನಿಧಿಯನ್ನು ಶಿಕ್ಷಕರು ಆಯ್ಕೆ ಮಾಡಿಕೊಳ್ಳಬೇಕು ಎಂದು ಮಾಜಿ ಸಚಿವ ಅಂಜನಾಮೂರ್ತಿ ತಿಳಿಸಿದರು.
ನಗರದ ಸದಾಶಿವ ನಗರದ ಗೃಹಕಚೇರಿಯಲ್ಲಿ ಬೆಂಗಳೂರು ಶಿಕ್ಷಕರ ಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಮುಖಂಡರ ಸಭೆಯಲ್ಲಿ ಮಾತನಾಡಿದರು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧಿಕಾರ ಅವಧಿಯಲ್ಲಿ ನೂರಾರು ಶಿಕ್ಷಣ ಸಂಸ್ಥೆಗಳ ಸ್ಥಾಪನೆ, ಶಿಕ್ಷಕರ ನೇಮಕ, ಶಿಕ್ಷಕರ ವೇತನ ಸೇರಿ ಶಿಕ್ಷಣ ಕ್ಷೇತ್ರಕ್ಕೆ ಅಪಾರವಾದ ಕೊಡುಗೆ ನೀಡಿದ್ದಾರೆ. ಆದ್ದರಿಂದ ಅ.28 ರಂದು ನಡೆಯುವ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಅಧಿಕ ಮತಗಳನ್ನು ನೀಡುವ ಮೂಲಕ ಬೆಂಬಲ ನೀಡಬೇಕಿದೆ ಎಂದರು.
ಕಾಂಗ್ರೆಸ್ ಅಭ್ಯರ್ಥಿ ಪ್ರವೀಣ್ ಪೀಟರ್ ಮಾತನಾಡಿ, ಸುಮಾರು 18 ವರ್ಷ ಶಿಕ್ಷಕರನ್ನು ಪ್ರತಿನಿಧಿಸಿದ್ದವರು ಶಿಕ್ಷಕರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸದಿರುವುದು ಬೇಸದ ಸಂಗತಿ. ಶಿಕ್ಷಕರಿಂದ ಚುನಾಯಿತರಾದವರು ಪಕ್ಷಾಂತರ ಮಾಡುತ್ತಿದ್ದಾರೆ. ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಅವರ ಮೊದಲ ಚುನಾವಣೆಯಾಗಿದ್ದು ಅವರ ಪರಿಶ್ರಮ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಬೆಂಬಲ ನೀಡಿದ್ದು ಇಂದು ಶಿಕ್ಷಕರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದೇನೆ ಎಂದರು.
ಹಿಂದಿನ ಪ್ರಭಾವಿ, ಶಿಕ್ಷಕರ ಪ್ರತಿನಿಧಿ ನಕಲಿ ಮತದಾರರ ಪಟ್ಟಿ ಸೃಷ್ಟಿಸಿದ್ದಾರೆ. ಶಿಕ್ಷಕ ಪರವಾಗಿ ನಿಲ್ಲಬೇಕಾದ ಕೆಲ ಶಿಕ್ಷಕರ ಸಂಘಟನೆಗಳು ರಾಜಕೀಯ ವ್ಯಕ್ತಿಗಳ ಕಪಿಮುಷ್ಟಿಯಲ್ಲಿವೆ. ಚುನಾವಣೆಯಲ್ಲಿ ತನ್ನನ್ನು ಆಯ್ಕೆ ಮಾಡಿದಲ್ಲಿ ಶಿಕ್ಷಕರ ಸಮಸ್ಯೆಗಳಿಗೆ ಪರಿಹಾರ ನೀಡುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಶ್ರಮಿಸುವುದಾಗಿ ತಿಳಿಸಿದರು.
ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಡಾ.ಬಿ.ರಂಗನಾಥ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಟಿ.ನಾಗರಾಜು, ಜಗದೀಶ್, ಮುಖಂಡರಾದ ರಂಗನಾಥ್, ನರಸಿಂಹಮೂರ್ತಿ, ಪುರುಷೋತಮ್ ಮತ್ತಿತರರು ಉಪಸ್ಥಿತರಿದರು.