ಕಾಂಗ್ರೆಸ್‌ಗೆ ಜೀವ ನೀಡಿದ ಜಯ

13MDK09
Published on

ಮಡಿಕೇರಿ:

ಹಿರಿಯರ ನಿರೀಕ್ಷೆಯನ್ನು ಯುವ ಜೋಡಿ ಹುಸಿ ಮಾಡಿಲ್ಲ. ಕೊಡಗಿನ ೩ ದಶಕಗಳ ಬಿಜೆಪಿ ಭದ್ರ ಕೋಟೆಯನ್ನು ಡಾ. ಮಂಥರ್ ಗೌಡ ಮತ್ತು ಎ.ಎಸ್. ಪೊನ್ನಣ್ಣ ಜೋಡಿ ಛಿದ್ರ ಮಾಡಿದೆ. ಈ ಮೂಲಕ ಜಿಲ್ಲೆಯ ಕಾಂಗ್ರೆಸ್‌ಗೆ ಮರು ಜೀವ ನೀಡಿದಂತಾಗಿದೆ.
ವಿರಾಜಪೇಟೆ ಕ್ಷೇತ್ರದಿಂದ ಎ.ಎಸ್. ಪೊನ್ನಣ್ಣ ಮತ್ತು ಮಡಿಕೇರಿ ಕ್ಷೇತ್ರದಿಂದ ಡಾ. ಮಂಥರ್ ಗೌಡ ಗೆಲುವು ಸಾಧಿಸುವ ಮೂಲಕ ಕೊಡಗಿನಲ್ಲಿ ಹೊಸ ದಾಖಲೆಯೊಂದನ್ನು ಬರೆದಿದ್ದಾರೆ. ಕಾಂಗ್ರೆಸ್ ದೌರ್ಬಲ್ಯಗಳನ್ನು ಬಳಸಿಕೊಂಡು ಸತತವಾಗಿ ಅಧಿಕಾರಕ್ಕೆ ಬರುತ್ತಿದ್ದ ಬಿಜೆಪಿ ಪಾರಮ್ಯಕ್ಕೆ ಈ ಇಬ್ಬರು ಯುವಕರು ಅಂತ್ಯ ಹಾಡಿದ್ದಾರೆ. ಸತತ ೫ ಬಾರಿ ಶಾಸಕರಾಗಿದ್ದ ಎಂ.ಪಿ. ಅಪ್ಪಚ್ಚು ರಂಜನ್ ಅವರಿಗೆ ಡಾ. ಮಂಥರ್ ಗೌಡ ಮಡಿಕೇರಿ ಕ್ಷೇತ್ರದಲ್ಲಿ ತಮ್ಮ ಮೊದಲ ಯತ್ನದಲ್ಲೇ ಸೋಲಿನ ರುಚಿ ತೋರಿಸಿದ್ದಾರೆ. ೪ ಬಾರಿ ಶಾಸಕರಾಗಿದ್ದ ಕೆ.ಜಿ. ಬೋಪಯ್ಯ ಅವರಿಗೆ ಎ.ಎಸ್. ಪೊನ್ನಣ್ಣ ಕೂಡ ತಮ್ಮ ಮೊದಲ ಯತ್ನದಲ್ಲೇ ವಿರಾಜಪೇಟೆ ಕ್ಷೇತ್ರದಲ್ಲಿ ಸೋಲಿಸಿದ್ದಾರೆ.

ಅಪ್ಪಚ್ಚು ರಂಜನ್ ಒಮ್ಮೆ ಮಂತ್ರಿ ಕೂಡ ಆಗಿದ್ದರು. ಕೆ.ಜಿ. ಬೋಪಯ್ಯ ವಿಧಾನಸಭೆ ಸ್ಪೀಕರ್ ಜವಾಬ್ದಾರಿ ನಿಭಾಯಿಸಿದ್ದವರು. ಈ ಇಬ್ಬರು ಘಟಾನುಘಟಿಗಳಿಗೆ ಹೊಸ ಮುಖಗಳನ್ನು ತರುವ ಮೂಲಕ ಕಾಂಗ್ರೆಸ್ ಮರ್ಮಾಘಾತ ನೀಡಿದೆ. ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್‌ಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಡಾ. ಮಂಥರ್ ಗೌಡ ಬಿಜೆಪಿ ಅಭ್ಯರ್ಥಿ ಸುಜಾ ಕುಶಾಲಪ್ಪ ಅವರಿಗೆ ತೀವ್ರ ಪೈಪೋಟಿ ನೀಡಿದ್ದರು. ಈ ಸಂದರ್ಭದಲ್ಲೇ ಅವರಿಗೆ ಕೊಡಗಿನ ರಾಜಕೀಯದ ಪರಿಚಯ ಆಗಿತ್ತು. ಹಾಗಾಗಿ ಮಡಿಕೇರಿ ವಿಧಾನಸಭಾ ಕ್ಷೇತ್ರವನ್ನು ಗಂಭೀರವಾಗಿ ತೆಗೆದುಕೊಂಡು ಚುನಾವಣೆಯಲ್ಲಿ ಸ್ಪರ್ಧಿಸುವುದಕ್ಕೆ ಅಗತ್ಯ ತಾಲೀಮು ನಡೆಸಿದ್ದರು. ಎಲ್ಲಾ ಸಿದ್ಧತೆಗಳ ಜೊತೆಗೆ ಕಣಕ್ಕಿಳಿದು ಇದೀಗ ವಿಜಯದ ಮಾಲೆ ಧರಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಹೈಕೋರ್ಟ್ ಹಿರಿಯ ವಕೀಲ ಎ.ಎಸ್. ಪೊನ್ನಣ್ಣ ಸಮಾಜ ಸೇವಾ ಚಟುವಟಿಕೆಗಳ ಮೂಲಕ ಕೊಡಗಿನ ರಾಜಕೀಯ ಪ್ರವೇಶಕ್ಕೆ ಅಡಿಪಾಯ ಹಾಕಿದರು. ಕಳೆದ ಮೂರು ವರ್ಷಗಳಿಂದ ಸತತವಾಗಿ ವಿರಾಜಪೇಟೆ ಕ್ಷೇತ್ರದಾದ್ಯಂತ ಸಂಚರಿಸಿ ಕ್ಷೇತ್ರ ಪರಿಚಯ ಮಾಡಿಕೊಳ್ಳುವುದರ ಜೊತೆಗೆ ಪಕ್ಷವನ್ನೂ ಸಂಘಟಿಸಿದರು. ಜನರಿಗೂ ಹತ್ತಿರವಾದರು. ಈ ಮೂಲಕ ಈಗ ವಿರಾಜಪೇಟೆ ಶಾಸಕರೂ ಆಗಿದ್ದಾರೆ.

ಮಡಿಕೇರಿ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಡಾ. ಮಂಥರ್ ಗೌಡ ೮೪,೮೭೯ ಮತಗಳನ್ನು ಪಡೆದರೆ ಸಮೀಪದ ಪ್ರತಿಸ್ಪರ್ಧಿ ೫ ಬಾರಿಯ ಶಾಸಕ ಬಿಜೆಪಿಯ ಅಪ್ಪಚ್ಚುರಂಜನ್ ೮೦,೪೭೭ ಮತಗಳನ್ನು ಪಡೆದು ೪,೪೦೨ ಮತಗಳ ಅಂತರದಿಂದ ಸೋಲು ಕಂಡಿದ್ದಾರೆ. ಮತದಾನಕ್ಕೆ ಒಂದು ದಿನ ಮೊದಲು ಶಸ್ತ್ರತ್ಯಾಗ ಮಾಡಿದ್ದ ಜೆಡಿಎಸ್ ಅಭ್ಯರ್ಥಿ ನಾಪಂಡ ಮುತ್ತಪ್ಪ ೬,೨೩೩ ಮತಗಳನ್ನು ಪಡೆಯಲಷ್ಟೇ ಸಾಧ್ಯವಾಗಿದೆ.
ವಿರಾಜಪೇಟೆ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಎ.ಎಸ್. ಪೊನ್ನಣ್ಣ ೮೩,೭೯೧ ಮತಗಳನ್ನು ಪಡೆದರೆ, ಸಮೀಪದ ಪ್ರತಿಸ್ಪರ್ಧಿ ಮಾಜಿ ಸ್ಪೀಕರ್, ೪ ಬಾರಿಯ ಶಾಸಕ ಬಿಜೆಪಿಯ ಕೆ.ಜಿ. ಬೋಪಯ್ಯ ೭೯,೫೦೦ ಮತಗಳನ್ನು ಪಡೆದು ೪,೨೯೧ ಮತಗಳ ಅಂತರದಿಂದ ಸೋತಿದ್ದಾರೆ. ಕಣದಲ್ಲಿ ಇದ್ದನ ಜೆಡಿಎಸ್ ಅಭ್ಯರ್ಥಿ ಮನ್ಸೂರ್ ಅಲಿ ಎಂ.ಎ. ಕೇವಲ ೧,೧೨೧ ಮತಗಳನ್ನು ಮಾತ್ರ ಪಡೆದುಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net