ವ್ಯಸನಮುಕ್ತರಾಗಲು ದೃಢಸಂಕಲ್ಪ ಅಗತ್ಯ: ಡಾ.ಡಿ.ವೀರೇಂದ್ರ ಹೆಗ್ಗಡೆ ಅಭಿಮತ

Published on

ಬೆಳ್ತಂಗಡಿ: ಮದ್ಯವರ್ಜನ ಶಿಬಿರಗಳು ದುಶ್ಚಟ ಬಿಡಲು ಸಂಕಲ್ಪ ಮಾಡಿಸುವ ವ್ಯವಸ್ಥೆ ಹೊಂದಿದ್ದು, ವ್ಯಸನಮುಕ್ತರಾಗಲು ಅತ್ಯಗತ್ಯ. ಆದ್ದರಿಂದ ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ದೃಢ ಸಂಕಲ್ಪದೊಂದಿಗೆ ದುಶ್ಚಟದಿಂದ ಬಿಡುಗಡೆಯಾಗಬೇಕು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಹೇಳಿದರು.

ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವ್ಯಸನಮುಕ್ತಿ ಮತ್ತು ಸಂಶೋಧನಾ ಕೇಂದ್ರದಲ್ಲಿ ನಡೆಯುತ್ತಿರುವ 207ನೇ ವಿಶೇಷ ಮದ್ಯವರ್ಜನ ಶಿಬಿರದ 5ನೇ ದಿನದಂದು ರಾಜ್ಯದ ವಿವಿಧ ಜಿಲ್ಲೆಗಳಿಂದ ಬಂದಿರುವ 58 ಮಂದಿ ಶಿಬಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.

ಜೀವನದಲ್ಲಿ ಪ್ರತಿಯೊಬ್ಬರೂ ಸಂಪತ್ತು ಗಳಿಸುವುದರಲ್ಲಿ ತುಂಬಾ ಕಷ್ಟ ಪಡುತ್ತಾರೆ. ಇದಕ್ಕಾಗಿ ಶ್ರಮ, ಅದೃಷ್ಟ, ಸಾಧನೆ, ದೇವರ ಅನುಗ್ರಹ ಬೇಕಾಗುತ್ತದೆ. ಹೀಗೆ ಗಳಿಸಿದ್ದನ್ನು ಉಳಿಸುವುದೂ ಬಹಳ ಕಷ್ಟದ ಕೆಲಸ. ಗೃಹಿಣಿಯಾದವಳು ಅದನ್ನು ಉಳಿಸಿ, ಬೆಳೆಸುತ್ತಾಳೆ. ಬೆಳೆಸುವ ಸಂದರ್ಭದಲ್ಲಿ ಮನೆ ನಿಭಾಯಿಸುವುದು ಮುಂತಾದ ಅನೇಕ ಹೊಣೆಗಾರಿಕೆಗಳು ಬರುತ್ತವೆ. ಸಂಸಾರದಲ್ಲಿ ನೆಮ್ಮದಿ ಮತ್ತು ಆರೋಗ್ಯಕ್ಕೆ ತುಂಬಾ ಬೆಲೆ ಇದೆ. ಆರೋಗ್ಯವನ್ನು ಉಳಿಸಿಕೊಳ್ಳುವಂಥದ್ದು ಎಂದರೆ ಆರೋಗ್ಯ ಲಕ್ಷ್ಮೀ, ಭಾಗ್ಯಲಕ್ಷ್ಮೀ ಇದ್ದಂತೆ. ದುಶ್ಚಟಗಳನ್ನು ಅಂಟಿಸಿಕೊಂಡವನಿಗೆ ಅದನ್ನು ದೂರ ಮಾಡಿಕೊಳ್ಳುವುದು ಬಹಳ ಕಷ್ಟದ ಕೆಲಸ. ಮದ್ಯಪಾನದ ಚಟಗಳು ಬೇಡ ಎಂದು ನಿರ್ಣಯಿಸಿದರೂ ಬೆನ್ನು ಬಿಡದ ಬೇತಾಳದಂತೆ ಅಂಟಿಕೊಂಡಿರುತ್ತದೆ. ಇವರಿಗೆ ಮದ್ಯವರ್ಜನ ಶಿಬಿರಗಳು ಸಹಾಯಕಾರಿ ಎಂದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಗೆಳತಿ ಕಾರ್ಯಕ್ರಮದ ಅಧ್ಯಕ್ಷೆ ಶ್ರದ್ಧಾ ಅಮಿತ್ ಉಪಸ್ಥಿತರಿದ್ದರು.
8 ದಿನದ ಕಾರ್ಯಕ್ರಮದಲ್ಲಿ ಉಪಯುಕ್ತ ಮಾಹಿತಿ, ಗುಂಪು ಸಲಹೆ, ವೈಯಕ್ತಿಕ ಸಲಹೆ, ಮನೋ ವೈದ್ಯಕೀಯ ಚಿಕಿತ್ಸೆ, ಆಧ್ಯಾತ್ಮಿಕ ಚಿಂತನೆ, ಯೋಗ, ಇನ್ನಿತರ ಚಟುವಟಿಕೆಗಳೊಂದಿಗೆ ಶಿಬಿರ ನಡೆಯಿತು. ಕಾರ್ಯಕ್ರಮಕ್ಕೆ ಪ್ರಾದೇಶಿಕ ನಿರ್ದೇಶಕ ವಿವೇಕ್ ವಿ.ಪಾಸ್ ಮಾರ್ಗದರ್ಶನದಲ್ಲಿ ಯೋಜನಾಧಿಕಾರಿ ಮೋಹನ್ ಕೆ., ಶಿಬಿರಾಧಿಕಾರಿ ದಿವಾಕರ ಪೂಜಾರಿ,ಆರೋಗ್ಯ ಸಹಾಯಕಿ ನೇತ್ರಾವತಿ ಸಹಕರಿಸಿದರು. ಮುಂದಿನ ವಿಶೇಷ ಶಿಬಿರ ಸೆ.4ರಂದು ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net