ಹುಳಿಯಾರು ಅಭಿವೃದ್ಧಿಗೆ ಸಂಕಲ್ಪ : ಬಿಜೆಪಿ ಅಭ್ಯರ್ಥಿ ಜೆ.ಸಿ.ಮಾಧುಸ್ವಾಮಿ ಭರವಸೆ

BJP MADHUSWAMI CAMPAIGN
Published on

ಹುಳಿಯಾರು: ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರಿಗೆ 5 ವರ್ಷಗಳಲ್ಲಿ ಬಹಳಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ. ಮಾಡಬೇಕಾದ ಕೆಲಸಗಳು ಇನ್ನೂ ಇದೆ. ಮುಖ್ಯವಾಗಿ ಸುಂದರ ಪಟ್ಟಣ ಮಾಡುವ ಸಂಕಲ್ಪ ಹೊಂದಿದ್ದೇನೆ. ಇವುಗಳ ಸಾಕಾರಕ್ಕೆ ಮತ್ತೊಮ್ಮೆ ನನ್ನನ್ನು ಗೆಲ್ಲಿಸಿ ಶಕ್ತಿ ತುಂಬುವಂತೆ ಬಿಜೆಪಿ ಅಭ್ಯರ್ಥಿ ಜೆ.ಸಿ.ಮಾಧುಸ್ವಾಮಿ ಮನವಿ ಮಾಡಿದರು.

ಹುಳಿಯಾರು ಪಟ್ಟಣದಲ್ಲಿ ಸೋಮವಾರ ಮತಯಾಚಿಸಿ ಮಾತನಾಡಿದ ಅವರು, ಹುಳಿಯಾರು ಪಟ್ಟಣಕ್ಕೆ ಬಾಡಿಗೆ ಬರುವವರೇ ಇರಲಿಲ್ಲ. ಈಗ ನೀರು, ರಸ್ತೆ, ಚರಂಡಿ, ವಿದ್ಯುತ್ ಕ್ಷೇತ್ರದಲ್ಲಿ ಅಭಿವೃದ್ಧಿಯಾಗಿರುವುದು ಕಂಡು ಹುಳಿಯಾರು ಪಟ್ಟಣದಲ್ಲಿ ವಾಸಿಸಲು ಜನ ಇಚ್ಚಿಸುತ್ತಿದ್ದಾರೆ ಎಂದರು.

ಹುಳಿಯಾರಿನಿಂದ ಚಿಕ್ಕನಾಯಕನಹಳ್ಳಿ ರಸ್ತೆ, ಶಿರಾ ರಸ್ತೆ, ಅಣೆಕಟ್ಟೆ ರಸ್ತೆ, ಗವಿರಂಗಾಪುರ ರಸ್ತೆ, ತಿಪಟೂರು ರಸ್ತೆ, ಹಿರಿಯೂರು ರಸ್ತೆ, ಶಿರಾ ರಸ್ತೆ ಸೇರಿ ಎಲ್ಲ ದಿಕ್ಕುಗಳ ರಸ್ತೆಯನ್ನೂ ಅಭಿವೃದ್ಧಿಪಡಿಸಿದ್ದು ಇವೆಲ್ಲ ಒಬ್ಬ ವ್ಯಕ್ತಿಯಿಂದ ಮಾಡಲು ಸಾಧ್ಯವಾಯ್ತ ಎನ್ನುವ ಪ್ರಶ್ನೆ ಉದ್ಭವವಾಗುತ್ತದೆ. ಹುಳಿಯಾರಿಗೆ ರಸ್ತೆ, ನೀರು, ವಿದ್ಯುತ್, ಪ್ರವಾಸಿ ಮಂದಿರ, ಪಟ್ಟಣ ಪಂಚಾಯಿತಿ ಕಟ್ಟಡ, ಪೊಲೀಸ್ ಸ್ಟೇಷನ್ ಹೀಗೆ ಪಟ್ಟಣವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಿದ್ದು, ನಿಮ್ಮ ಕಣ್ಮುಂದೆ ಇರುವ ಸತ್ಯ ಒಪ್ಪಿಕೊಂಡು, ಆಲೋಚಿಸಿ, ಆತ್ಮಸಾಕ್ಷಿಯಾಗಿ ಮತ ಚಲಾಯಿಸಿ ಎಂದು ಕೇಳಿಕೊಂಡರು.

ಹುಳಿಯಾರಿಗೆ ಮಾಡಬೇಕಾದ ಕೆಲಸಗಳು ಇನ್ನೂ ಬಹಳಷ್ಟಿದೆ. ಕೆರೆ ದಡದಲ್ಲಿರುವ ನಿರಾಶ್ರಿತರಿಗೆ ಪುನರ್ವಸತಿ ಕಲ್ಪಿಸಬೇಕಿದೆ. ಬಡವರಿಗೆ ಮನೆಗಳನ್ನು ಕಟ್ಟಿಕೊಡಬೇಕಿದೆ, ಬೋರನಕಣಿವೆ ಜಲಾಶಯಕ್ಕೆ ಭದ್ರಾ ನೀರು ಹರಿಸಬೇಕಿದೆ. ನಾನು ಪಾರದರ್ಶಕ ಆಡಳಿತ ಮಾಡಿದ್ದೇನೆ. ಬೂಟಾಟಿಕೆ, ಪೊಳ್ಳು ಆಶ್ವಾಸನೆ ಕೊಡಲ್ಲ. ಆಗಿರುವ ಕೆಲಸಗಳನ್ನು ಮನಗಂಡು ಮತಕೊಡಿ. ನನಗೆ ಶಕ್ತಿ ಕೊಡದೆ ಹೋದರೆ ಹುಳಿಯಾರು ಆಸ್ಪತ್ರೆ ಆಗುತ್ತೋ ಇಲ್ಲವೋ ಗೊತ್ತಿಲ್ಲ. ಈ ಹೋಬಳಿಗೆ ಭದ್ರಾ ನೀರು ಹರಿಯುತ್ತದೋ ಇಲ್ಲವೋ ಗೊತ್ತಿಲ್ಲ. ಬೋರನಕಣಿವೆಯಿಂದ 5 ಪಂಚಾಯಿತಿಯ ಮನೆಮನೆಗೆ ನೀರು ಪೂರೈಕೆ ಆಗುತ್ತದೋ ಇಲ್ಲವೋ ಗೊತ್ತಿಲ್ಲ. ಏಕೆಂದರೆ ಹಿಂದೆ ಗೆದ್ದವರಾರೂ ಇದನ್ನು ತಲೆಗೆ ಹಾಕಿಕೊಂಡು ಮಾಡಿರಲಿಲ್ಲ. ಇವೆಲ್ಲವನ್ನೂ ಪೂರ್ಣ ಮಾಡಲು ನನ್ನನ್ನು ಅನಿವಾರ್ಯವಾಗಿ ನೀವು ಗೆಲ್ಲಿಸಬೇಕಿದೆ ಎಂದರು.

ಪ್ರಗತಿಯ ದೃಷ್ಟಿಯಿಂದ ಜೆಸಿಎಂ ಗೆಲ್ಲಬೇಕು

ಮಾಧುಸ್ವಾಮಿ ಅವರಂತ ಧೀಮಂತ ನಾಯಕರು, ಕಳಂಕರಹಿತ ಹಿರಿಯ ಮುತ್ಸದ್ಧಿ ರಾಜಕಾರಣಿ ರಾಜ್ಯ ರಾಜಕಾರಣಕ್ಕೆ ಅವಶ್ಯವಿದ್ದು, ಈ ಚುನಾವಣೆಯಲ್ಲಿ ಅವರನ್ನು ಬಹುಮತಗಳಿಂದ ಗೆಲ್ಲಿಸಿಕೊಡುವಂತೆ ತಿಪಟೂರಿನ ಕುಮಾರ್ ಆಸ್ಪತ್ರೆ ಡಾ.ಶ್ರೀಧರ್ ಮನವಿ ಮಾಡಿದರು.

ಹುಳಿಯಾರು ಪಟ್ಟಣದಲ್ಲಿ ಭಾನುವಾರ ಬಿಜೆಪಿ ಅಭ್ಯರ್ಥಿ ಜೆ.ಸಿ.ಮಾಧುಸ್ವಾಮಿ ಪರ ಮತಯಾಚಿಸಿ ಮಾತನಾಡಿದರು. ಚಿಕ್ಕನಾಯಕನಹಳ್ಳಿ ಕ್ಷೇತ್ರದ ಅಭಿವೃದ್ಧಿಯ ಜತೆಗೆ ರಾಜ್ಯದ ಅಭಿವೃದ್ಧಿಗೆ ಮಾಧುಸ್ವಾಮಿ ಅವಶ್ಯಕವಿದೆ. ತಮ್ಮ ಪಾಂಡಿತ್ಯದ ಮೂಲಕ ಸದನವನ್ನು ಅರ್ಥಪೂರ್ಣವಾಗಿ ನಡೆಸಿ ಜನಪರ ಕಾನೂನು ಜಾರಿಗೆ ತರಲು ಮಾಧುಸ್ವಾಮಿ ಗೆಲ್ಲಬೇಕಿದೆ. ಸರ್ಕಾರ ಜಾರಿಗೆ ತರುವ ಯೋಜನೆಗಳು ಹಳ್ಳಹಿಡಿಯದಂತೆ ಅನುಷ್ಟಾನ ಮಾಡಲು ಮಾಧುಸ್ವಾಮಿ ಅವರಿಗೆ ಅಧಿಕಾರ ಬೇಕಿದೆ ಎಂದರು.

ರಾಜ್ಯದ ನೀರಾವರಿ ಸಚಿವರಾಗಿ ಮಾಧುಸ್ವಾಮಿ ನಿಸ್ಪಕ್ಷಪಾತವಾಗಿ ಕೆಲಸ ಮಾಡಿದ್ದಾರೆ. ಮಾಧುಸ್ವಾಮಿ ಅವರಿಂದ ಅನುಕೂಲ ಪಡೆದಿರುವ ಜೆಡಿಎಸ್‌ನ ಗೌರಿಶಂಕರ್, ಅರಸೀಕೆರೆಯ ಶಿವಲಿಂಗೇಗೌಡ ಅವರಂತೆ ಅನೇಕ ವಿರೋಧ ಪಕ್ಷದ ಶಾಸಕರು ಸಾರ್ವಜನಿಕವಾಗಿ ಪ್ರಶಂಸಿಸಿರುವುದು ನಿದರ್ಶನವಾಗಿದೆ. ಹಾಗಾಗಿ ಜಾತಿ, ಹಣ, ಅನುಕಂಪಕ್ಕೆ ಮಾರುಹೋಗದೆ ಅಭಿವೃದ್ಧಿಯಾಗಿ ಹಗಲಿರುಳು ಶ್ರಮಿಸುವ ಮಾಧುಸ್ವಾಮಿ ಅವರಿಗೆ ಮತಚಲಾಯಿಸಿ. | ಡಾ.ಶ್ರೀಧರ್, ತಿಪಟೂರಿನ ಕುಮಾರ್ ಆಸ್ಪತ್ರೆ

ಬೈಕ್ ರ್ಯಾಲಿ: ಹುಳಿಯಾರಿನಿಂದ ಚಿಕ್ಕನಾಯಕನಹಳ್ಳಿಗೆ ಸಚಿವ ಜೆ.ಸಿ.ಮಾಧುಸ್ವಾಮಿ ಪರ ಮತಯಾಚಿಸಿ ಬೆಂಬಲಿಗರು ಸೋಮವಾರ ಬೈಕ್ ರ್ಯಾಲಿ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net