ಯುವಕರು ಕೈಗಾರಿಕೆಗೆ ಮುಂದಾದರೆ ತರಬೇತಿ ನೀಡಲು ಸಿದ್ಧ

22jkd nirani
ಜಮಖಂಡಿ ನಗರದ ವೀರಶೈವ ಪಂಚಮಸಾಲಿ ಸಮಾಜದ ಸಮುದಾಯ ಭವನದಲ್ಲಿ ನಡೆದ ಕಾರ್ಯಕ್ರಮವನ್ನು ಮಾಜಿ ಸಚಿವ ಮುರುಗೇಶ ನಿರಾಣಿ ಉದ್ಘಾಟಿಸಿದರು. ಬಿಡಿಸಿಸಿ ಮಾಜಿ ನಿರ್ದೇಶಕ, ಕಾಂಗ್ರೆಸ್ ಮುಖಂಡ ಬಿ.ಎಸ್. ಸಿಂಧೂರ, ಸಮಾಜದ ಅಧ್ಯಕ್ಷ ಪಿ.ಎನ್. ಪಾಟೀಲ, ಆಲಗೂರ ಧರಿದೇವರ ಮಠದ ಲಕ್ಷ್ಮಣ ಮುತ್ಯಾ ಇತರರಿದ್ದರು.
Published on

ಜಮಖಂಡಿ: ರೈತರ ಮಕ್ಕಳು ಉದ್ಯಮಿಗಳಾಗಿ ಬೆಳೆಯಬೇಕು. ಕೈಗಾರಿಕೆ ಮಾಡಲು ಯುವಕರು ಮುಂದೆ ಬಂದರೆ ಅವರಿಗೆ ಎಲ್ಲ ರೀತಿಯ ತರಬೇತಿ ನೀಡಲು ಸಿದ್ಧ ಎಂದು ಕೈಗಾರಿಕೆ ಮಾಜಿ ಸಚಿವ ಮುರುಗೇಶ ನಿರಾಣಿ ಹೇಳಿದರು.

ನಗರದ ಪಂಚಮಸಾಲಿ ಸಮುದಾಯ ಭವನದಲ್ಲಿ ತಾಲೂಕು ವೀರಶೈವ ಪಂಚಮಸಾಲಿ ಸಂಘ, ರಾಣಿ ಚನ್ನಮ್ಮ ವಿವಿಧೋದ್ದೇಶ ಸಹಕಾರಿ ಸಂಘದ ಆಶ್ರಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಚುನಾಯಿತ ಪ್ರತಿನಿಧಿಗಳಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಗಂಡು, ಹೆಣ್ಣು ಎಂದು ತಾರತಮ್ಯ ಮಾಡದೆ ಎಲ್ಲ ಮಕ್ಕಳಿಗೂ ಪದವಿಯವರೆಗೂ ಶಿಕ್ಷಣ ಕೊಡಿಸಬೇಕು. ಇದರಿಂದ ಕೃಷಿ ಸೇರಿ ಯಾವುದೇ ಕ್ಷೇತ್ರದಲ್ಲಿದ್ದರೂ ಅದರಲ್ಲಿ ಬಹಳಷ್ಟು ಜ್ಞಾನ ಬೆಳೆಯುತ್ತದೆ. ಕಷ್ಟಪಟ್ಟು ಶ್ರಮದಿಂದ ದುಡಿದರೆ ಆರ್ಥಿಕವಾಗಿ ಬೆಳೆಯಲು ಸಾಧ್ಯ. ನಾನು 10 ಲಕ್ಷ ರೂ.ದಿಂದ ಪ್ರಾರಂಭಿಸಿದ 500 ಟನ್ ನುರಿಸುವ ಕಾರ್ಖಾನೆಯಿಂದ ಇಂದು ಇಡಿ ದೇಶದಲ್ಲೇ ಅತಿ ಹೆಚ್ಚು ಒಂದು ಲಕ್ಷ ಟನ್ ಕಬ್ಬು ನುರಿಸುವಷ್ಟರ ಮಟ್ಟಿಗೆ, 400 ಎಂ.ವಿ. ವಿದ್ಯುತ್ ಉತ್ಪಾದನೆ, ಸಿಎನ್‌ಜಿ, ಎಥೆನಾಲ್ ಸೇರಿ ಹಲವಾರು ಉತ್ಪನ್ನಗಳು ನಮ್ಮಲ್ಲೇ ಉತ್ಪಾದಿಸುತ್ತಿದ್ದೇವೆ ಎಂದರು.
ದುಡಿಯುವ ಕೈಗಳು ಕಡಿಮೆಯಾಗುತ್ತಿವೆ. ತಿನ್ನುವ ಬಾಯಿಗಳು ಹೆಚ್ಚಾಗುತ್ತಿವೆ. ಇದ್ದಂತ ಭೂಮಿಯಲ್ಲಿ ಹೆಚ್ಚು ಬೆಳೆಯುವ ತಂತ್ರಜ್ಞಾನ ಬೆಳೆಸಿಕೊಳ್ಳಬೇಕು. ಪ್ರತಿ ಎಕರೆಗೆ 100 ಟನ್‌ಗೂ ಅಧಿಕ ಕಬ್ಬು ಬೆಳೆಸುವ ರೈತರಿಂದ ಕಡಿಮೆ ಬೆಳೆಯುವ ರೈತರು ಮಾಹಿತಿ ತರಬೇತಿ ಪಡೆದುಕೊಳ್ಳಬೇಕು ಎಂದರು.

ಬರುವ ದಿನಗಳಲ್ಲಿ ಅಂದಾಜು 500 ಟ್ರಾೃಕ್ಟರ್‌ಗಳಿಗೆ ಸಿಎನ್‌ಸಿ ಅಳವಡಿಸಲಾಗುವುದು. ಇದರಿಂದ ರೈತರ ಇಂಧನಕ್ಕಾಗಿ ಬಳಸುತಿದ್ದ ವೆಚ್ಚ ಶೇ. 50ರಷ್ಟು ಕಡಿಮೆಯಾಗಲಿದೆ. ನಮ್ಮ ಸಮಾಜಕ್ಕೆ ಸಂಖ್ಯಾನುಗುಣವಾಗಿ ಸ್ಥಾನಮಾನಗಳು ದೊರೆತಿಲ್ಲ. ರಾಜ್ಯದಲ್ಲಿ ಬಹುಸಂಖ್ಯೆ ಹೊಂದಿದ್ದರೂ ಪ್ರತಿ ಕ್ಷೇತ್ರದಲ್ಲಿ ವಂಚಿತರಾಗುತ್ತಿದ್ದೇವೆ ಎಂದರು.
ಲಕ್ಷ್ಮೀ ಹೆಬ್ಬಾಳಕರ ಅವರು ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ 2ಎ ಮಿಸಲಾತಿ ನೀಡಿ ಕುಂದಾ ನೀಡುತ್ತೇವೆ ಎಂದಿದ್ದರು. ಆದರೆ ಸರ್ಕಾರ ಬಂದು 18 ತಿಂಗಳು ಕಳೆದರೂ ಇಲ್ಲಿಯವರೆಗೂ ಅವರು ಒಂದು ಮಾತೂ ಆಡಿಲ್ಲ. ಕೇಂದ್ರ ಸರ್ಕಾರದಲ್ಲಿ 2ಎ ಮೀಸಲಾತಿ ಬಗ್ಗೆ ಸಂಬಂಧಿಸಿದ ಸಚಿವರ ಗಮನಕ್ಕೆ ತರಲಾಗುವುದು ಎಂದು ತಿಳಿಸಿದರು.
ಜಕನೂರ ಕಮರಿಮಠದ ಸಿದ್ಧಲಿಂಗ ದೇವರು ಮಾತನಾಡಿ, ವಿದ್ಯಾರ್ಥಿಗಳು ನೌಕರಿಗಾಗಿ ಶಿಕ್ಷಣ ಪಡೆಯದೆ ಶಾಶ್ವತ ಬದುಕು ಕಟ್ಟಿಕೊಳ್ಳಲು ಶಿಕ್ಷಣ ಅತಿ ಅವಶ್ಯವಾಗಿದೆ. ಮಕ್ಕಳಲ್ಲಿ ಸಂಸ್ಕಾರ, ಸಂಸ್ಕೃತಿ ಮೈಗೂಡಿಸಿಕೊಳ್ಳುವಂತೆ ಪಾಲಕರು ಕಾಳಜಿ ವಹಿಸಬೇಕು ಎಂದರು.

ಬಿಡಿಸಿಸಿ ಮಾಜಿ ನಿರ್ದೇಶಕ, ಕಾಂಗ್ರೆಸ್ ಮುಖಂಡ ಬಿ.ಎಸ್. ಸಿಂಧೂರ ಮಾತನಾಡಿ, ಸಮಾಜ ಒಗ್ಗಟ್ಟಿನಿಂದ ಇರಬೇಕು. ಸಮಾಜದ ಕೆಲಸ ಕಾರ್ಯಗಳಿಗೆ ಕೈ ಜೋಡಿಸಲು ಆಗದಿದ್ದರೆ ಸುಮ್ಮನಿರಬೇಕು. ವಿರೋಧಿಸುವ ಕಾರ್ಯ ಮಾಡಬಾರದು. ಸಮಾಜದ ಮಕ್ಕಳು ಉನ್ನತ ಹುದ್ದೆ ಅಲಂಕರಿಸಬೇಕು. ಆ ನಿಟ್ಟಿನಲ್ಲಿ ಪಾಲಕರು ತಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕೆಂದು ತಿಳಿಸಿದರಲ್ಲದೆ, ಮುಂದಿನ ಮುಖ್ಯಮಂತ್ರಿ ಮಾಜಿ ಸಚಿವ ಮುರುಗೇಶ ನಿರಾಣಿ ಆಗಲಿದ್ದಾರೆ ಎಂದರು.

ಸಮಾಜದ ಅಧ್ಯಕ್ಷ ಪಿ.ಎನ್. ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಆಲಗೂರ ಧರಿದೇವರ ಮಠದ ಲಕ್ಷ್ಮಣ ಮುತ್ಯಾ, ಸಿ.ಪಿ. ಜನವಾಡ, ಅಪ್ಪಸಾಬ ಚೌಗಲಾ, ಎ.ಎಸ್. ಜನಗೌಡ, ಭೀಮಶಿ ಮಗದುಮ್, ಸುರೇಶಗೌಡ ಪಾಟೀಲ, ರಾಜು ಕೋವಳ್ಳಿ, ಬಿ.ಎಂ. ಪಾಟೀಲ, ಬಸವರಾಜ ಬಳಿಗಾರ, ಪ್ರಕಾಶ ಪಾಟೀಲ, ಪ್ರಭು ಜನವಾಡ, ಕಾಡಪ್ಪ ಗಡಾದ, ಹಣಮಂತ ಪಾಟೀಲ, ಜಯಶ್ರೀ ಬಾಡಗಿ, ಶಶಿಕಲಾ ಬಿರಾದಾರ, ಮಹಾಂತೇಶ ನರಸನಗೌಡರ, ಸುನೀತಾ ಬಳಿಗಾರ, ವಿನಾಯಕ ಕಾಸಾರ, ಸಂಗಪ್ಪ ಸಂತಿ ಇತರರಿದ್ದರು.

ಶೀತಲ, ಪರಮೇಶ್ವರ ತೇಲಿ, ಮಲ್ಲಿಕಾರ್ಜುನ ನಾವಿ ರೈತ ಗೀತೆ ಹಾಡಿದರು. ಬ್ಯಾಂಕ್ ಅಧ್ಯಕ್ಷ ಡಾ. ಸದಾಶಿವ ಬಾಲಪ್ಪನವರ ಸ್ವಾಗತಿಸಿದರು. ಪಿ.ಎಂ. ಝುಲಪಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಗಿರೀಶ ಮನಗೂಳಿ, ವಿಮಲಾ ಕುಬಕಡ್ಡಿ ನಿರೂಪಿಸಿದರು. ಸಂಗಮೇಶ ಕೌಜಲಗಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net