ಗೋಕುಲ ರಸ್ತೆ ಬಸ್ ನಿಲ್ದಾಣ ಮೇಲ್ದರ್ಜೆಗೆ

BUS
Published on

ಹುಬ್ಬಳ್ಳಿ: ನಗರ ಭೂಸಾರಿಗೆ ನಿರ್ದೇಶನಾಲಯ (ಡಲ್ಟ್)ದ ಆರ್ಥಿಕ ನೆರವಿನಿಂದ ಇಲ್ಲಿಯ ಗೋಕುಲ ರಸ್ತೆ ಬಸ್ ನಿಲ್ದಾಣವನ್ನು 23.48 ಕೋಟಿ ರೂ. ವೆಚ್ಚದಲ್ಲಿ ಮೇಲ್ದರ್ಜೆಗೆ ಏರಿಸಲಾಗುವುದು ಎಂದು ಮುಜರಾಯಿ ಮತ್ತು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.

ಇಲ್ಲಿಯ ಹೊಸೂರು ಪ್ರಾದೇಶಿಕ ಬಸ್ ನಿಲ್ದಾಣದಲ್ಲಿ ಭಾನುವಾರ ಸಂಜೆ 50 ಹೊಸ ಬಸ್​ಗಳಿಗೆ ಚಾಲನೆ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಲ್ಟ್ ನೆರವಿನಿಂದಲೇ ಧಾರವಾಡ ಬಸ್ ನಿಲ್ದಾಣವನ್ನು 13 ಕೋಟಿ ರೂ. ವೆಚ್ಚದಲ್ಲಿ ಪುನರ್ ನಿರ್ಮಾಣ ಮಾಡಲಾಗುವುದು ಎಂದರು.

ಹುಬ್ಬಳ್ಳಿ-ಧಾರವಾಡಕ್ಕೆ 100 ಹೊಸ ಸಾಮಾನ್ಯ ಬಸ್​ಗಳನ್ನು, 4 ಮಲ್ಟಿ ಎಕ್ಸೆಲ್ ಐಷಾರಾಮಿ ಹಾಗೂ 20 ನಾನ್ ಎಸಿ ಬಸ್​ಗಳನ್ನು ನೀಡಲಾಗುವುದು. ಇಲೆಕ್ಟ್ರಿಕಲ್ ಬಸ್​ಗಳ ಸಂಚಾರಕ್ಕೆ ಪೂರಕವಾದ ಇಲೆಕ್ಟ್ರಿಫಿಕೇಶನ್ ವ್ಯವಸ್ಥೆ ರೂಪಿಸಲು ವಾಕರಸಾ ಸಂಸ್ಥೆಗೆ 15 ಕೋಟಿ ರೂ. ಒದಗಿಸಲಾಗುವುದು ಎಂದು ಹೇಳಿದರು.

2018ರ ಬಳಿಕ ಸಾರಿಗೆ ನಿಗಮಗಳು ಒಂದೇ ಒಂದು ಹೊಸ ಬಸ್ ಖರೀದಿಸಿರಲಿಲ್ಲ. ಕಳೆದ ವರ್ಷದ ಕೊನೆಯಲ್ಲಿ ಈ ಸಂಬಂಧ ಪೇಪರ್ ವರ್ಕ್ ಆಗಿವೆ. 2016ರ ಬಳಿಕ ಹೊಸ ನೇಮಕಾತಿಯೂ ನಡೆದಿರಲಿಲ್ಲ. ಕಳೆದ 7 ವರ್ಷಗಳಲ್ಲಿ 10ರಿಂದ 12 ಸಾವಿರ ಅಧಿಕಾರಿ-ಸಿಬ್ಬಂದಿ ನಿವೃತ್ತಿಯಾಗಿದ್ದಾರೆ. ನಾವು ಈಗ 1300 ಸಿಬ್ಬಂದಿ ನೇಮಕಾತಿ ಮಾಡಿಕೊಳ್ಳುತ್ತಿದ್ದೇವೆ ಎಂದರು.

ಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯ ಕಲ್ಪಿಸುವ ಶಕ್ತಿ ಯೋಜನೆಯಡಿ ಎದುರಾಗುವ ಆದಾಯ ಕೊರತೆಯನ್ನು ರಾಜ್ಯ ಸರ್ಕಾರವು ಸಾರಿಗೆ ನಿಗಮಗಳಿಗೆ ಕಾಲಕಾಲಕ್ಕೆ ಬಿಡುಗಡೆ ಮಾಡಲಿದೆ. ನಿಗಮಗಳಿಗೆ ಆರ್ಥಿಕ ನಷ್ಟ ಉಂಟಾಗುವುದಿಲ್ಲ. ಸರ್ಕಾರದ ಬಳಿ ಹಣವಿದೆ. ನಾವು ಹೊಸ ಬಸ್​ಗಳನ್ನು ಖರೀದಿಸುತ್ತಿದ್ದೇವೆ ಎಂದು ಸಮರ್ಥಿಸಿಕೊಂಡರು.

ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್, ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಂ ಅಹ್ಮದ್, ಶಾಸಕರಾದ ಪ್ರಸಾದ ಅಬ್ಬಯ್ಯ, ಅರವಿಂದ ಬೆಲ್ಲದ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸದಾನಂದ ಡಂಗನವರ, ವಾಕರಸಾ ಸಂಸ್ಥೆಯ ಎಂಡಿ ಎಸ್. ಭರತ್, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net