ತೆರವಾಗುವುದೇ ಪಾದಚಾರಿ ಮಾರ್ಗ?

26 vikram 6
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಜನರು ಸುಗಮವಾಗಿ ಓಡಾಡುವ ನಿಟ್ಟಿನಲ್ಲಿ ಪ್ರತಿ ರಸ್ತೆಯಲ್ಲಿ ಪಾದಚಾರಿ ಮಾರ್ಗ (ಫುಟ್​ಪಾತ್​) ನಿರ್ಮಿಸಲಾಗಿದೆ. ಆದರೆ ಈ ಮಾರ್ಗಗಳು ಡಬ್ಬಾ ಅಂಗಡಿ, ಬೀದಿ ಬದಿ ವ್ಯಾಪಾರಸ್ಥರಿಗೆ ಸೀಮಿತವಾಗಿ, ಜನರು ರಸ್ತೆಯಲ್ಲಿ ವಾಹನಗಳ ಮಧ್ಯೆ ಸಂಚರಿಸುವ ಸ್ಥಿತಿ ನಿರ್ಮಾಣವಾಗಿದೆ.

ಇಷ್ಟೆಲ್ಲ ಇದ್ದರೂ ಪಾಲಿಕೆ ಅಧಿಕಾರಿಗಳು ಮಾತ್ರ ವ್ಯಾಪಾರಸ್ಥರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಮುಂದಾಗುತ್ತಿಲ್ಲ. ಆಗೊಮ್ಮೆ ಈಗೊಮ್ಮೆ ಹೆಸರಿಗೆ ತೆರವು ಕಾರ್ಯಾಚರಣೆ ನಡೆಸಿ ಒಂದೆರೆಡು ದಿನಗಳ ಕಾಲ ಅಬ್ಬರಿಸಿ ಸುಮ್ಮನಾಗುತ್ತಿದ್ದಾರೆ. ವ್ಯಾಪಾರಸ್ಥರು ಕಾರ್ಯಾಚರಣೆ ಸ್ಥಗಿತಕ್ಕೆ ಅಧಿಕಾರಿಗಳ ಮೇಲೆ ಒತ್ತಡ ಹೇರಿಸುವ ಕೆಲಸವೂ ನಿರಂತರವಾಗಿದೆ. ಇದೇ ಕಾರಣಕ್ಕೆ ನಗರ ಮಾರುಕಟ್ಟೆ, ರಸ್ತೆಗಳ ಅಭಿವೃದ್ಧಿಯೂ ಮರೀಚಿಕೆಯಾಗಿದೆ.

ನೆಹರು ಮಾರುಕಟ್ಟೆ, ಅಕ್ಕಿ ಪೇಟೆ, ಕಾಮತ್​ ಹೋಟೆಲ್​ ಎದುರಿನ ರಸ್ತೆ ಸೇರಿ ಮಾರುಕಟ್ಟೆ ಬಹುತೇಕ ಜಾಗವನ್ನು ಬೀದಿ ಬದಿ ವ್ಯಾಪಾರಸ್ಥರು, ಡಬ್ಬಾ ಅಂಗಡಿಕಾರರು ಅತಿಕ್ರಮಿಸಿದ್ದಾರೆ. ಹೀಗಾಗಿ ವಾಹನ ನಿಲುಗಡೆ ಇರಲಿ ಜನರು ಸುಸೂತ್ರವಾಗಿ ಸಂಚರಿಸುವುದೂ ಕಷ್ಟ. ಇನ್ನು ಹಬ್ಬದ ಸಂದರ್ಭದಲ್ಲಂತೂ ಹೇಳತೀರದಾಗಿದೆ. ದೀಪಾವಳಿ ನಿಮಿತ್ತ ಆಕಾಶಬುಟ್ಟಿ ಸೇರಿ ಇತರೆ ಅಲಂಕಾರಿಕ ವಸ್ತುಗಳನ್ನು ಮಾರಾಟ ಮಾಡುವವರು ಇಡೀ ಪಾದಚಾರಿ ಮಾರ್ಗವನ್ನೇ ಅತಿಕ್ರಮಿಸಿದ್ದರೂ ಕೇಳುವವರಿಲ್ಲದಂತಾಗಿದೆ.

ಜನರಿಂದ ಸಾಕಷ್ಟು ದೂರುಗಳನ್ನು ಸಲ್ಲಿಸಿದ್ದಲ್ಲದೆ, ಆಕ್ರೋಶ ವ್ಯಕ್ತಪಡಿಸಿದ್ದರಿಂದ ಕೆಲ ತಿಂಗಳುಗಳ ಹಿಂದೆ ಪಾಲಿಕೆ ಅಧಿಕಾರಿಗಳು ತೆರವು ಕಾರ್ಯ ನಡೆಸಿದ್ದರು. ಆದರೆ ಆ ಕಾರ್ಯಕ್ಕೆ ವಿರೋಧ ವ್ಯಕ್ತವಾಗಿದ್ದರಿಂದ ತೆರವು ಕಾರ್ಯ ಸ್ಥಗಿತವಾಗಿತ್ತು. ಅದಾದ ಬಳಿಕವೂ ಕಾರ್ಯಾಚರಣೆ ಮತ್ತೆ ಆರಂಭವಾಗಲಿದೆ ಎಂಬ ಮಾತು ಅಧಿಕಾರಿ ವಲಯದಲ್ಲಿ ಕೇಳಿ ಬಂದಿತ್ತು. ಆದರೆ ಇನ್ನೂ ಆರಂಭವಾಗಿಲ್ಲ.

ಬೀದಿ ಬದಿ ವ್ಯಾಪಾರಸ್ಥರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಎಪಿಎಂಸಿ ಹಾಗೂ ದನದ ಮಾರುಕಟ್ಟೆ ಬಳಿ ಮತ್ತು ಡಬ್ಬಾ ಅಂಗಡಿಗಳಿಗೆ ಸಿಎಸ್​ಐ ಕಾಲೇಜು, ಸೂಪರ್​ ಮಾರುಕಟ್ಟೆ ಇತರ ಕಡೆ ಜಾಗ ಗುರುತಿಸಲಾಗಿತ್ತು. ಆದರೆ ವ್ಯಾಪಾರಸ್ಥರ ಮನವೊಲಿಸಿ ಅಲ್ಲಿ ಕಳುಹಿಸುವಲ್ಲಿ ಪಾಲಿಕೆ ಸಂರ್ಪೂಣ ವಿಫಲವಾಗಿದೆ.

ಫುಟ್​ಪಾತ್​, ಪಾರ್ಕಿಂಗ್ ಜಾಗ ಅತಿಕ್ರಮಣ ತೆರವು ವಿಚಾರದಲ್ಲಿ ಜನ ಪ್ರತಿನಿಧಿಗಳು ಪಕ್ಷ ಮರೆತು ನಿಲುವು ತಾಳಬೇಕಿದೆ. ತೆರವು ಕಾರ್ಯ ಪ್ರಾರಂಭಿಸುತ್ತಿದ್ದಂತೆ ಯಾರದ್ದೋ ಒತ್ತಡ ಬರುತ್ತದೆ. ಇರಿಸಿದ ಹೆಜ್ಜೆ ಹಿಂದೆ ಸರಿಯುತ್ತದೆ. ಜನಪ್ರತಿನಿಧಿಗಳ ಪರೋಕ್ಷ ಬೆಂಬಲ ಪ್ರತಿಭಟನೆ ರೂಪ ತಾಳುತ್ತದೆ. ಅಲ್ಲಿಗೆ ಉದ್ದೇಶಿತ ಕಾರ್ಯಾಚರಣೆ ಅರ್ಥ ಕಳೆದುಕೊಳ್ಳುವಂತಾಗುತ್ತದೆ.

ಬೀದಿ ಬದಿ ವ್ಯಾಪಾರಿಗಳಿಗೆ ಗುರುತಿಸಿದ ಜಾಗೆಗಳಲ್ಲೇ ವ್ಯಾಪಾರ ನಡೆಸುವಂತೆ ಮಾಡಲು ಗಂಭೀರ ಚಿಂತನೆ ನಡೆಸಬೇಕಿದೆ. ಜನರಿಗೂ ದೂರವಾಗದಂತೆ, ವ್ಯಾಪಾರಿಗಳಿಗೂ ತೊಂದರೆ ಆಗದಂತೆ ವ್ಯವಸ್ಥಿತ ರೀತಿ ಸೌಲಭ್ಯ ನೀಡಬೇಕು. ಹೀಗೆ ನೆನಪಾದಾಗ ಮಾತ್ರ ಅಬ್ಬರಿಸುವ ಅಧಿಕಾರಿಗಳು ಒಂದು ಸಮಯ ನಿಗದಿ ಮಾಡಿ ಸ್ಪೆಶಲ್​ ಡ್ರೈವ್ ನಡೆಸುವ ಮೂಲಕ ಎಲ್ಲ ಅತಿಕ್ರಮಣ ತೆರವು ಮಾಡಬೇಕಲ್ಲದೆ, ಮತ್ತೆ ಅತಿಕ್ರಮಣವಾಗದಂತೆ ಎಚ್ಚರಿಕೆ ವಹಿಸಬೇಕು ಎಂಬುದು ಜನರ ಆಶಯ. ಇನ್ನಾದರೂ ಅಧಿಕಾರಿಗಳು ಒಂದು ದಿನದ ನಾಟಕ ಬಿಟ್ಟು ಶಾಶ್ವತ ಪರಿಹಾರ ಕಂಡುಕೊಳ್ಳುವರೇ ಕಾದು ನೋಡಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net