ನಗರಸಭೆಗೆ ಸಿಗುವುದೇ ಪಾಲಿಕೆ ಪಟ್ಟ?

FotoJet (1)
Published on

ಎನ್​.ಮುನಿವೆಂಕಟೇಗೌಡ ಕೋಲಾರ

ಕೋಲಾರ ನಗರಸಭೆಯನ್ನು ಮಹಾನಗರಪಾಲಿಕೆಯನ್ನಾಗಿ ಮೇಲ್ದರ್ಜೆಗೇರಿಸಲು ಕಸರತ್ತು ಬಿರುಸುಗೊಂಡಿದೆ.

ಇದಕ್ಕೆ ಪೂರಕವೆಂಬಂತೆ ಈ ಹಿಂದಿನ ಜಿಲ್ಲಾಧಿಕಾರಿ ಅಕ್ರಂಪಾಷಾ ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕರಿಗೆ ಪತ್ರ ಬರೆದು ಸ್ಥಿತಿಗತಿ ವಿವರಿಸಿದ್ದು, ನಗರದೊಂದಿಗೆ ಹೊರವಲಯದ 8 ಗ್ರಾಪಂಗಳ ಸೇರ್ಪಡೆಗೆ ಸ್ಯಾಟಲೈಟ್​ ನಕ್ಷೆ ಹಾಗೂ ದಾಖಲೆ ಕಳುಹಿಸಿಕೊಟ್ಟಿದ್ದು, ಸರ್ಕಾರದಿಂದ ಗ್ರೀನ್​ ಸಿಗ್ನಲ್​ ಸಿಗುವ ಮಾತುಗಳು ವ್ಯಾಪಕವಾಗಿವೆ.

ನಗರ ಅಭಿವೃದ್ಧಿ ದೃಷ್ಟಿಯಿಂದ ಸುಮಾರು 15 ಕಿಮೀ ವ್ಯಾಪ್ತಿಯಲ್ಲಿ 8 ಗ್ರಾಮ ಪಂಚಾಯಿತಿಗಳನ್ನು ಸೇರ್ಪಡೆ ಮಾಡಿದರೆ ಜನಸಂಖ್ಯೆ 3,02,106 ಆಗಲಿದೆ. ಈ ಮೂಲಕ ಕೋಲಾರ ನಗರಸಭೆಯನ್ನು ಮಹಾನಗರಪಾಲಿಕೆಯನ್ನಾಗಿ ಮೇಲ್ದರ್ಜೆಗೇರಿಸುವ ಪ್ರಸ್ತಾವನೆಯನ್ನು ಅಗತ್ಯ ದಾಖಲೆಗಳ ಸಮೇತ ಅಕ್ರಂಪಾಷಾ ಸರ್ಕಾರಕ್ಕೆ ಸಲ್ಲಿಸಿದ್ದಾರೆ.

ಕೋಲಾರದ ಜನಸಂಖ್ಯೆ 2011ರ ಜನಗಣತಿಯ ಪ್ರಕಾರ 1,38,462 ಜನಸಂಖ್ಯೆ ಇದ್ದು, 18.13 ಚದರ ಕಿಲೋಮೀಟರ್​ ವ್ಯಾಪ್ತಿ ಹೊಂದಿದೆ. 2024ರ ನಿರೀಕ್ಷಿತ ಜನಸಂಖ್ಯೆಯು 1,99,207 ಇದ್ದು, ಜನಸಾಂದ್ರತೆಯ ಪ್ರತಿ ಚದರ ಕಿ.ಮೀಟರ್​ ಗೆ 7.632 ಹೊಂದಿದೆ ಎಂದು ಅಂದಾಜಿಸಲಾಗಿದೆ.

ಕೋಲಾರ ಬೆಂಗಳೂರು ನಗರಕ್ಕೆ 66 ಕಿ.ಮೀ ಅಂತರದಲ್ಲಿದ್ದು, ರಾಷ್ಟ್ರೀಯ ಹೆದ್ದಾರಿ 75 ಹಾದು ಹೋಗಿದೆ. ಚೆನ್ನೆ$ ಮತ್ತು ತಿರುಪತಿ ಸಂಪರ್ಕಿಸುತ್ತದೆ. ನಗರದಿಂದ 15 ಕಿಮೀ ಅಂತರದಲ್ಲಿ ನರಸಾಪುರ ಕೈಗಾರಿಕಾ ಪ್ರದೇಶವಿದೆ. ಆ್ಯಪಲ್​, ಹೋಂಡಾ, ಮಹೇಂದ್ರ, ಏರೋಸ್ಪೇಸ್​ ಸೇರಿ ಪ್ರಸಿದ್ಧ ಕಂಪನಿಗಳು ಕಾರ್ಯನಿರ್ವಹಿಸುತ್ತಿವೆ.

ಇದಲ್ಲದೆ ಶ್ರೀದೇವರಾಜು ಅರಸು ವೈದ್ಯಕಿಯ ಕಾಲೇಜು, ಆರ್​.ಎಲ್​.ಜಾಲಪ್ಪ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ, ಬೆಂಗಳೂರು ಉತ್ತರ ವಿಶ್ವವಿದ್ಯಾಲಯ, ಸಿ.ಬೈರೇಗೌಡ ತಾಂತ್ರಿಕ ಮಹಾ ವಿದ್ಯಾಲಯ, ತೋಟಗಾರಿಕೆ ಕಾಲೇಜು ಇದ್ದು, ಸುತ್ತಮುತ್ತ ಹಲವು ಪ್ರಸಿದ್ಧ ಪ್ರವಾಸಿ ತಾಣಗಳಿದ್ದು, ನಿತ್ಯ ಸಾವಿರಾರು ಪ್ರವಾಸಿಗರು ಬರುತ್ತಾರೆ. ಕೋಲಾರ ನಗರದ ಪ್ಲೋಟಿಂಗ್​ ಜನಸಂಖ್ಯೆ ಸುಮಾರು 15 ಸಾವಿರದಷ್ಟು ಹೆಚ್ಚಳವಾಗುತ್ತದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಬೆಂಗಳೂರು ಸಮೀಪವಿದ್ದರೂ ಕೋಲಾರ ನಗರ ಅಭಿವೃದ್ಧಿಯಲ್ಲಿ ಹಿನ್ನಡೆಯಾಗಿದೆ. ನಗರದ ರಸ್ತೆಗಳಾಗಲೀ, ಚರಂಡಿ ವ್ಯವಸ್ಥೆ, ತ್ಯಾಜ್ಯ ನಿರ್ವಹಣೆ, ಶುದ್ಧ ಕುಡಿಯುವ ನೀರಿನ ಪೂರೈಕೆ ವ್ಯವಸ್ಥೆಗಳು ಸಮರ್ಪಕವಾಗಿಲ್ಲ. ಈ ನಿಟ್ಟಿನಲ್ಲಿ ಮಾಜಿ ಸಭಾಪತಿ ವಿ.ಆರ್​.ಸುದರ್ಶನ್​ ಕೂಡ ಪೌರಾಡಳಿತ ಇಲಾಖೆಗೆ ಪತ್ರ ಬರೆದು ನಗರಪಾಲಿಕೆ ಪಟ್ಟಕ್ಕೆ ಕೋರಿದ್ದರು. ಈಗ ಜಿಲ್ಲಾಡಳಿತ ಪತ್ರ ಸರ್ಕಾರಕ್ಕೆ ತಲುಪಿದ್ದು, ಹಲವು ನಿರೀೆ ಹುಟ್ಟುಹಾಕಿದೆ.

ದೂರ ಸಂವೇದಿ ಅನ್ವಯಿಕ ಕೇಂದ್ರಕ್ಕೂ ಪತ್ರ

ಇತ್ತೀಚೆಗಷ್ಟೆ ಗ್ರಾಮಗಳ ನಕ್ಷೆ ಕೋರಿ ಜಿಲ್ಲಾಧಿಕಾರಿ ಬೆಂಗಳೂರಿನ ಯಲಹಂಕದಲ್ಲಿರುವ ಕರ್ನಾಟಕ ದೂರ ಸಂವೇದಿ ಅನ್ವಯಿಕ ಕೇಂದ್ರಕ್ಕೆ ಪತ್ರ ಬರೆದಿದ್ದು, ನಗರದಿಂದ ಸುಮಾರು 15 ಕಿಮೀ ವ್ಯಾಪ್ತಿಯಲ್ಲಿ ಬರುವ ಹೊನ್ನೇನಹಳ್ಳಿ, ಅರಹಳ್ಳಿ, ಕೊಂಡರಾಜನಹಳ್ಳಿ, ದೊಡ್ಡಹಸಾಳ, ಅರಾಭಿಕೊತ್ತನೂರು, ಸೂಲೂರು, ನರಸಾಪುರ, ಬೆಳ್ಳೂರು ಗ್ರಾಮಪಂಚಾಯಿತಿಗಳ ಸ್ಯಾಟಲೈಟ್​ ನಕ್ಷೆ ಕಳುಹಿಸಿಕೊಡುವಂತೆ ಕೋರಿರುವುದೂ ಕೋಲಾರಕ್ಕೆ ಮಹಾನಗರಪಾಲಿಕೆಯ ಪಟ್ಟ ದೊರಕುವ ಸಮಯ ಹತ್ತಿರವಾಗಿರುವುದಕ್ಕೆ ಸಾಯಾಗಿದೆ.

ಮಾನದಂಡ ಪೂರೈಸಲು ಕಸರತ್ತು

ಮಹಾನಗರಪಾಲಿಕೆಯಾಗಿ ರೂಪುಗೊಳ್ಳಲು ಬೇಕಿರುವ ನಿಗದಿತ ಮಾನದಂಡಗಳನ್ನು ಸದ್ಯಕ್ಕೆ ಕೋಲಾರ ನಗರಸಭೆ ತಲುಪಿಲ್ಲ. ಕನಿಷ್ಠ 3 ಲಕ್ಷ ಜನಸಂಖ್ಯೆ ಇರಬೇಕು. ಈ ನಿಟ್ಟಿನಲ್ಲಿ ನಗರ ಸಮೀಪದ ಪಂಚಾಯಿತಿಗಳನ್ನು ಸೇರಿಸಲು ಕಸರತ್ತು ನಡೆದಿದೆ. ಒಟ್ಟು ವಿಸ್ತೀರ್ಣ, ಜನಸಂಖ್ಯೆ ಆದಾಯ, ಕಮರ್ಷಿಯಲ್​ ಸ್ಥಿತಿಗತಿಯ ಬಗ್ಗೆ ಸರ್ಕಾರಕ್ಕೆ ವರದಿ ನೀಡಲಾಗಿದೆ. ಪಾಲಿಕೆ ಪಟ್ಟ ಒಲಿದರೆ ನಗರದ ಅಭಿವೃದ್ಧಿಗೆ ಅನುದಾನ ಹೆಚ್ಚು ಬರುತ್ತದೆ ಎಂಬ ನಿಟ್ಟಿನಲ್ಲಿ ನಗರಸಭಾ ಸದಸ್ಯರು ಕೂಡ ಈ ಪ್ರಯತ್ನಕ್ಕೆ ಕೈ ಜೋಡಿಸಿದ್ದಾರೆ.

ವಿಲೀನಕ್ಕೆ ವಿರೋಧ

ಕೋಲಾರ ನಗರವನ್ನೇ ಅಭಿವೃದ್ಧಿಪಡಿಸಲು ನಗರಸಭೆಯಿಂದ ಸಾಧ್ಯವಾಗಿಲ್ಲ. ಮಹಾನಗರಪಾಲಿಕೆಗೆ ಪಂಚಾಯಿತಿ ಸೇರ್ಪಡೆ ಮಾಡಿಕೊಂಡರೆ ಆ ಗ್ರಾಮಗಳಿಗೆ ನಗರದ ಗತಿಯೇ ಬರುತ್ತದೆ ಎಂದು ಪಂಚಾಯಿತಿಗಳ ಸಾರ್ವಜನಿಕರು ಮತ್ತು ಜನಪ್ರತಿನಿಧಿಗಳು ವಿಲೀನ ಪ್ರಕ್ರಿಯೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ನಗರಸಾಪುರ, ಬೆಳ್ಳೂರು, ಅರಾಭಿಕೊತ್ತನೂರು, ಸೂಲೂರು ಗ್ರಾಮ ಪಂಚಾಯಿತಿಗಳು ಈಗಾಗಲೇ ಮಹಾನಗರಪಾಲಿಕೆಗೆ ಸೇರ್ಪಡೆ ಮಾಡಿಕೊಳ್ಳುವುದಕ್ಕೆ ವಿರೋಧ ವ್ಯಕ್ತಪಡಿಸುತ್ತಿವೆ. ಇದರ ನಡುವೆ, ನರಸಾಪುರ ಕೈಗಾರಿಕಾ ಪ್ರಾಂಗಣವಾಗಿರುವುದರಿಂದ ನರಸಾಪುರ ಮತ್ತು ಬೆಳ್ಳೂರು ಪಂಚಾಯಿತಿಗಳನ್ನು ಪಟ್ಟಣಪಂಚಾಯಿತಿಯನ್ನಾಗಿಸಲು ಅಲ್ಲಿನ ಜನಪ್ರತಿನಿಧಿಗಳು ಸರ್ಕಾರ ಮತ್ತು ಶಾಸಕರಿಗೆ ಮನವಿ ಸಲ್ಲಿಸಿದ್ದಾರೆ.

"ಮಹಾನಗರಪಾಲಿಕೆಯನ್ನಾಗಿ ಮೇಲ್ದರ್ಜೆಗೇರಿಸಬೇಕಾದರೆ ನಗರಕ್ಕೆ ಹೊಂದಿಕೊಂಡ ಪಂಚಾಯಿತಿಗಳನ್ನೂ ಸೇರಿಸಿಬೇಕಾಗುತ್ತದೆ. ಶೇ.50ಕ್ಕೂ ಹೆಚ್ಚು ಕೃಷಿ ಭೂಮಿ ಹೊಂದಿರುವ ಪಂಚಾಯಿತಿ ವ್ಯಾಪ್ತಿಯನ್ನು ಸೇರಿಸಿಕೊಳ್ಳಲು ಕೆಲವು ಕಾನೂನು ತೊಡಕುಗಳು ಎದುರಾಗುತ್ತವೆ. ಈಗಾಗಲೇ ಕೆಲವು ಗ್ರಾಮಪಂಚಾಯಿತಿಗಳ ಜನಪ್ರತಿನಿಧಿಗಳು ಮತ್ತು ಮುಖಂಡರು ಸೇರ್ಪಡೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಮುಂದಿನ ಭಾನುವಾರ ಈ ಸಂಬಂಧ ಗ್ರಾಮ ಪಂಚಾಯಿತಿ ಮತ್ತು ಕೋಲಾರ ನಗರದ ಜನಪ್ರತಿನಿಧಿಗಳ, ಮುಖಂಡರು, ಚಿಂತಕರ ಸಭೆ ಕರೆದು ಸಾಧಕ&ಬಾಧಕ ಚರ್ಚೆ ಮಾಡಲಾಗುವುದು."

 -ಮುರಳೀಗೌಡ, ನಗರಸಭಾ ಸದಸ್ಯ ಕೋಲಾರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net