ಜಿಲ್ಲೆಗೆ ಪ್ರಾತಿನಿಧ್ಯ ಕೊಡಿಸಲು ಶ್ರಮಪಡುವೆ

Oplus_131072
ಯಳಂದೂರು ಪಟ್ಟಣದ ತಾಲೂಕು ಪಂಚಾಯಿತಿ ಕಚೇರಿಯಲ್ಲಿ ಶನಿವಾರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಯಿತು. ಶಾಸಕ ಎ.ಆರ್. ಕೃಷ್ಣಮೂರ್ತಿ, ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಎಸ್. ಜಯಣ್ಣ, ಎಚ್.ವಿ. ಚಂದ್ರು ಸೇರಿದಂತೆ ಅನೇಕರು ಇದ್ದರು.
Published on

ಯಳಂದೂರು: ಜಿಲ್ಲೆಯಲ್ಲಿ ಎಲ್ಲ ವರ್ಗದ ಜನರೂ ಇದ್ದಾರೆ. ಇಲ್ಲಿ ಪ್ರತಿಭಾವಂತರಿಗೆ ಕೊರತೆ ಇಲ್ಲ. ಮಾಧ್ಯಮ ಅಕಾಡೆಮಿ ಪ್ರಶಸ್ತಿ, ನಾಟಕ ಅಕಾಡೆಮಿಯಲ್ಲಿ ಸೂಕ್ತ ಸ್ಥಾನಮಾನ ಸೇರಿದಂತೆ ಜಿಲ್ಲೆಯನ್ನು ಎಲ್ಲ ಕ್ಷೇತ್ರಗಳಲ್ಲೂ ಗುರುತಿಸಿ, ಪ್ರಾತಿನಿಧ್ಯ ಕೊಡಿಸಲು ನಾನು ಶ್ರಮ ಪಡುತ್ತೇನೆ ಎಂದು ಶಾಸಕ ಎ.ಆರ್. ಕೃಷ್ಣಮೂರ್ತಿ ತಿಳಿಸಿದರು.


ಶನಿವಾರ ಪಟ್ಟಣದ ತಾಲೂಕು ಪಂಚಾಯಿತಿ ಕಚೇರಿಯಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆಯಲ್ಲಿ ಮಾತನಾಡಿದರು.
ಜಿಲ್ಲೆಗೆ ಸೂಕ್ತ ಪ್ರಾತಿನಿಧ್ಯ ಸಿಗುತ್ತಿಲ್ಲ ಎಂಬ ಪತ್ರಕರ್ತರ ಕೂಗಿಗೆ ನಾನು ಧ್ವನಿಯಾಗುತ್ತೇನೆ. ಯಳಂದೂರು ಪಟ್ಟಣದ ಆಶ್ರಯ ಬಡಾವಣೆಯಲ್ಲಿ ಪತ್ರಕರ್ತರ ಭವನ ಹಾಗೂ ಶಿಕ್ಷಕರ ಭವನಕ್ಕೆ ಸೂಕ್ತ ನಿವೇಶನ ನೀಡಲು ಪಂಚಾಯಿತಿಯಲ್ಲಿ ಸಭೆ ನಡೆಸಿ ನಿರ್ಣಯ ಕೈಗೊಳ್ಳಲಾಗಿದೆ. ಪತ್ರಿಕಾ ರಂಗ ಸಂವಿಧಾನದ ನಾಲ್ಕನೇ ಅಂಗವಾಗಿದೆ. ನಮ್ಮನ್ನು ತಿದ್ದುವ ಕೆಲಸವನ್ನು ಮಾಡುವ ಪತ್ರಕರ್ತರ ನೆರವಿಗೆ ರಾಜ್ಯ ಸರ್ಕಾರದಿಂದ ಸೂಕ್ತ ಸ್ಪಂದನೆ ನೀಡಿದ್ದು, ಇನ್ನಷ್ಟು ಸೌಲಭ್ಯ ಕೊಡಿಸಲು ಶ್ರಮಿಸುತ್ತೇನೆ ಎಂದರು.
ಪಟ್ಟಣಕ್ಕೆ ಈಗಾಗಲೇ 35 ಕೋಟಿ ರೂ.ಗಳು ಸುಸಜ್ಜಿತ ಆಸ್ಪತ್ರೆ ನಿರ್ಮಾಣಕ್ಕೆ ಬಿಡುಗಡೆಯಾಗಿದೆ. ಟೆಂಡರ್ ಪ್ರಕ್ರಿಯೆ ಮುಗಿದ ಕೂಡಲೇ ಇದಕ್ಕೆ ಭೂಮಿಪೂಜೆ ನೆರವೇರಿಸಲಾಗುವುದು. ಡಯಾಲಿಸಿಸ್ ಕೇಂದ್ರ ಈಗಾಗಲೇ ಕಾರ್ಯನಿರ್ವಹಿಸುತ್ತಿದೆ. ಇಲ್ಲಿ ಕ್ರೀಡಾಂಗಣ ನಿರ್ಮಾಣ, ಅಗ್ನಿಶಾಮಕ ಠಾಣೆ, ಯಳಂದೂರು, ಬಿಳಿಗಿರಿರಂಗನಬೆಟ್ಟ, ಸಂತೆಮರಹಳ್ಳಿಯಲ್ಲಿ ಬಸ್ ನಿಲ್ದಾಣ, ಬೆಟ್ಟ, ವೈ.ಕೆ.ಮೋಳೆ, ಕೊಮಾರನಪುರ, ಕೊಳ್ಳೇಗಾಲದಿಂದ ಬೆಟ್ಟಕ್ಕೆ ತೆರಳುವ ರಸ್ತೆಗಳ ನಿರ್ಮಾಣಕ್ಕೂ ಈಗಾಗಲೇ ಯೋಜನೆ ಸಿದ್ಧಪಡಿಸಿಕೊಳ್ಳಲಾಗಿದ್ದು ಈ ಕಾಮಗಾರಿಯನ್ನೂ ಶೀಘ್ರದಲ್ಲೇ ಆರಂಭಿಸಲಾಗುವುದು ಎಂದರು.

ರಾಜ್ಯಪಾಲಕರು ಕೇಂದ್ರದ ಕೈಗೊಂಬೆ
ರಾಜ್ಯಪಾಲರು ಕೇಂದ್ರದ ಕೈಗೊಂಬೆಯಾಗಿದ್ದಾರೆ. ವಿನಾಕಾರಣ ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ ವಿರುದ್ಧ ಮುಡಾ ವಿಚಾರದಲ್ಲಿ ಗೊಂದಲ ಮೂಡಿಸುವ ಕೆಲಸವನ್ನು ಮಾಡಲಾಗುತ್ತಿದೆ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ತಮ್ಮ ಸರ್ಕಾರ ಇಲ್ಲದ ರಾಜ್ಯಗಳಲ್ಲಿ ಇಂತಹ ಅಸ್ತ್ರ ಉಪಯೋಗಿಸಿ ಸಂವಿಧಾನಬಾಹಿರ, ವಾಮಮಾರ್ಗದ ಮೂಲಕ ಜನರನ್ನು ದಿಕ್ಕುತಪ್ಪಿಸುವ ಕೆಲಸ ಮಾಡುತ್ತಿದೆ. ನಾವು ಕೂಡ ಮುಖ್ಯಮಂತ್ರಿಗಳ ಬೆಂಬಲಕ್ಕೆ ನಿಲ್ಲುತ್ತೇವೆ ಎಂದರು.


ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಎಸ್. ಜಯಣ್ಣ ಮಾತನಾಡಿ, ಪತ್ರಕರ್ತರು ತಮ್ಮ ಜವಾಬ್ದಾರಿಯನ್ನು ಅರಿತು ಉತ್ತಮ ಸಮಾಜ ನಿರ್ಮಾಣಕ್ಕೆ ಸಹಕರಿಸಬೇಕು. ಸಮಾಜದ ಡೊಂಕುಗಳನ್ನು ತಿದ್ದುವ ಕೆಲಸವನ್ನು ಮಾಡಬೇಕು. ರಾಜ್ಯದಲ್ಲಿ ಅರಾಜಕತೆಯನ್ನು ಸೃಷ್ಟಿಸಲು ಬಿಜೆಪಿ ಇಲ್ಲಸಲ್ಲದ ಆರೋಪವನ್ನು ಮುಖ್ಯಮಂತ್ರಿಗಳ ವಿರುದ್ಧ ಮಾಡುತ್ತಿದೆ. ಇದು ರಾಜಕೀಯ ಪಿತೂರಿಯಾಗಿದ್ದು ಎಲ್ಲರೂ ಇದನ್ನು ಧಿಕ್ಕರಿಸುವ ಕೆಲಸವನ್ನು ಮಾಡಬೇಕು ಎಂದರು.


ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ದೇವರಾಜು ಕಪ್ಪಸೋಗೆ ಮಾತನಾಡಿದರು.
ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಅಂಬಳೆ ವೀರಭದ್ರನಾಯಕ, ಗ್ಯಾರಂಟಿ ಯೋಜನೆ ಅನುಷ್ಠಾನದ ಜಿಲ್ಲಾಧ್ಯಕ್ಷ ಎಚ್.ವಿ. ಚಂದ್ರು ಮಾತನಾಡಿದರು. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಅಬ್ರಹಾಂ ಡಿಸಿಲ್ವ, ಪ್ರೀತಿ ಮಲ್ಲಿಕ್, ಸುಜಾದ್ ಬೇಗ್, ರುದ್ರಯ್ಯ, ಮಾಂಬಳ್ಳಿ ವಿಷ್ಣು, ಲಕ್ಷ್ಮಣ ರನ್ನು ಸನ್ಮಾನಿಸಲಾಯಿತು.
ಪತ್ರಕರ್ತರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಕ್ಕೂರು ಪ್ರಸಾದ್, ರಾಜ್ಯ ಮಂಡಳಿ ಸದಸ್ಯ ಗೂಳೀಪುರ ನಂದೀಶ್, ಪಪಂ ಮುಖ್ಯಾಧಿಕಾರಿ ಮಹೇಶ್‌ಕುಮಾರ್, ವೈದ್ಯಾಧಿಕಾರಿ ಡಾ.ಶ್ರೀಧರ್ ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net