ಪ್ರತಾಪ್ ಸಿಂಹಗೆ ಟಿಕೆಟ್ ತಪ್ಪಲಿದೆಯೇ?

mysore-parliamentary-constituency-map
Published on

ಮಂಜುನಾಥ ತಿಮ್ಮಯ್ಯ ಮೈಸೂರು

ಹ್ಯಾಟ್ರಿಕ್ ಜಯದ ಕನಸು ಕಾಣುತ್ತಿರುವ ಸಂಸದ ಪ್ರತಾಪ್ ಸಿಂಹ ಅವರಿಗೆ ಈ ಸಲ ಬಿಜೆಪಿ ಟಿಕೆಟ್ ಕೈತಪ್ಪಲಿದೆಯೇ?

ರಾಜಕೀಯ ವಲಯದಲ್ಲಿ ಸಂಚಲನ ಸೃಷ್ಟಿಸಿರುವ ಪ್ರಶ್ನೆ ಇದು. ಬಿಜೆಪಿ ಪಡಸಾಲೆಯಲ್ಲೂ ಈ ಕುರಿತು ಗುಸುಗುಸು ಜೋರಾಗಿದೆ. ಸಾರ್ವಜನಿಕ ವಲಯದಲ್ಲಿ ಚರ್ಚೆ ಗರಿಗೆದರಿದೆ.

ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಿಂದ 2014, 2019ರ ಚುನಾವಣೆಯಲ್ಲಿ ಸುಲಭವಾಗಿ ಜಯ ಕಂಡಿರುವ ಪ್ರತಾಪ್ ಸಿಂಹ, ಮತ್ತೊಂದು ಚುನಾವಣಾ ಸ್ಪರ್ಧೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಈಗಾಗಲೇ ರಿಪೋರ್ಟ್ ಕಾರ್ಡ್ ಹೆಸರಿನಲ್ಲಿ ಪ್ರಚಾರವನ್ನು ಕೈಗೊಂಡಿದ್ದಾರೆ. ಈ ನಡುವೆ, ಇವರಿಗೆ ಟಿಕೆಟ್ ನಿರಾಕರಿಸಲಾಗುತ್ತಿದೆ ಎಂಬ ಮಾತು ದಟ್ಟವಾಗಿ ಹರಿದಾಡುತ್ತಿದೆ.

ಸಿಂಹ ಅವರಿಗೆ ಬರಸಿಡಿಲು


ಪ್ರತಾಪ್‌ಸಿಂಹ ಪರ ಸ್ಥಳೀಯ ಮುಖಂಡರಿಂದ ರಾಜ್ಯ ನಾಯಕರವರೆಗೂ ಒಲವು ಇಲ್ಲ. ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂಪ್ಪ ಅವರು ಸಹ ಈ ಸಲ ಬದಲಾವಣೆ ಮಾಡಲು ಆಲೋಚನೆ ಮಾಡಿದ್ದಾರೆ. ಅದಕ್ಕಾಗಿ ಪ್ರತಾಪ್‌ಸಿಂಹ ಬದಲು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರನ್ನು ಈ ಕ್ಷೇತ್ರದಿಂದ ಕಣಕ್ಕೆ ಇಳಿಸಲು ಪ್ರಯತ್ನಗಳು ಜೋರಾಗಿದೆ. ಈ ಬೆಳವಣಿಗೆಯಿಂದ ಸಿಂಹ ಅವರಿಗೆ ಬರಸಿಡಿಲು ಬಡಿದಂತಾಗಿದೆ. ಪಕ್ಷದಲ್ಲಿರುವ ಅವರ ವಿರೋಧಿಗಳ ಮುಖದಲ್ಲಿ ಮಂದಹಾಸ ಮೂಡಿದೆ.


ಪ್ರತಾಪ್‌ಸಿಂಹ ಮೇಲೆ ಬಿಜೆಪಿ ಕೆಲ ಸ್ಥಳೀಯ ನಾಯಕರು, ಮುಖಂಡರ ಸಿಟ್ಟಿದೆ. ‘ಸುಖಾಸುಮ್ಮನೆ ಎಲ್ಲ ವಿಷಯಗಳಿಗೂ ಪ್ರತಿಕ್ರಿಯೆ ಕೊಡುತ್ತಾರೆ. ಅನೇಕ ವಿವಾದಗಳನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಸ್ವಪಕ್ಷೀಯರ ವಿರುದ್ಧ ಬಾಯಿಗೆ ಬಂದಂತೆ ಮಾತನಾಡುತ್ತಾರೆ. ಸ್ಥಳೀಯ ನಾಯಕರು, ಕಾರ್ಯಕರ್ತರನ್ನು ಲೆಕ್ಕಕ್ಕೆ ತೆಗೆದುಕೊಳ್ಳಲ್ಲ. ಯಾರಿಗೂ ಗೌರವ ಕೊಡಲ್ಲ. ಹೀಗಾಗಿ, ಇವರ ಪರ ಚುನಾವಣೆಯಲ್ಲಿ ಕೆಲಸ ಮಾಡಲು ಯಾರಿಗೂ ಮನಸ್ಸಿಲ್ಲ. ಈ ಹಿನ್ನೆಲೆಯಲ್ಲಿ ಬೇರೆ ಅಭ್ಯರ್ಥಿ ಹುಡುಕಾಟ ನಡೆದಿದ್ದು, ಯದುವೀರ ಅವರನ್ನು ಕಣಕ್ಕಿಳಿಸುವ ಬಗ್ಗೆ ಗಂಭೀರ ಚರ್ಚೆ ನಡೆಸಲಾಗುತ್ತಿದೆ’ ಎಂದು ಬಿಜೆಪಿ ಮುಖಂಡರೊಬ್ಬರು ತಿಳಿಸಿದರು.


ಬಿಜೆಪಿ ಪ್ರಬಲ ದಲಿತ ಮುಖಂಡರೊಬ್ಬರು ‘ಪ್ರತಾಪ್‌ಸಿಂಹಗೆ ಟಿಕೆಟ್ ಕೊಡಬೇಡಿ’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನೇರವಾಗಿ ತಿಳಿಸಿದ್ದಾರೆ. ಮಹಿಷ ದಸರಾ ಸೇರಿದಂತೆ ಇನ್ನಿತರ ವಿಷಯದಲ್ಲಿ ದಲಿತರನ್ನು ಕೆರಳಿಸುವ ರೀತಿಯಲ್ಲಿ ಪ್ರತಾಪ್‌ಸಿಂಹ ಮಾತನಾಡಿದ್ದಾರೆ. ಇದರ ಪರಿಣಾಮ ಚುನಾವಣೆ ಆಗಲಿದೆ ಎಂದು ಸೂಚ್ಯವಾಗಿ ಹೇಳಿದ್ದಾರೆ ಎಂದು ತಿಳಿದು ಬಂದಿದೆ.

ಕಾರ್ಯಕರ್ತರು, ಸ್ಥಳೀಯ ನಾಯಕರ ನಿರ್ಲಕ್ಷ್ಯ

ಕಮಲ ಪಾಳಯದಲ್ಲಿ ಸಂಸದರ ವಿರುದ್ಧ ಅಸಮಾಧಾನ ಹೊಗೆ ಮೊದಲಿನಿಂದಲೂ ಇದೆ. ಅದೀಗ ತೀವ್ರವಾಗಿ ಹಬ್ಬಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ವಿಧಾನಸಭಾ ಕ್ಷೇತ್ರಗಳ ಬಿಜೆಪಿ ಅಭ್ಯರ್ಥಿ ಪರ ಸರಿಯಾಗಿ ಕೆಲಸ ಮಾಡಲಿಲ್ಲ. ಪ್ರಚಾರವನ್ನೂ ಪರಿಣಾಮಕಾರಿಯಾಗಿ ಮಾಡಲಿಲ್ಲ.

ಇವರ ಕ್ಷೇತ್ರ ವ್ಯಾಪ್ತಿಗೆ ಬರದ ಚಾಮರಾಜನಗರ ಲೋಕಸಭಾ ಕ್ಷೇತ್ರಕ್ಕೆ ಸೇರುವ ವರುಣ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಪರ ನಿತ್ಯ ಮತಪ್ರಚಾರ ಮಾಡಿದ ಪ್ರತಾಪ್‌ಸಿಂಹ, ಉಳಿದ ಕ್ಷೇತ್ರಗಳನ್ನು ನಿರ್ಲಕ್ಷೃ ಮಾಡಿದ್ದರು. ಇದರ ಫಲವಾಗಿ ಪಕ್ಷಕ್ಕೆ ಹಿನ್ನಡೆಯಾಗಿದೆ.


ಟಿ.ಎಸ್.ಶ್ರೀವತ್ಸ ಹೊರತುಪಡಿಸಿ ಉಳಿದ ಮಾಜಿ ಶಾಸಕರು, ಮುಖಂಡರೊಂದಿಗೆ ಇವರ ಸಂಬಂಧ ಸಹ ಅಷ್ಟಕ್ಕೆ ಅಷ್ಟೇ. ಎದುರಿಗೆ ಸಿಕ್ಕಾಗ ಚೆನ್ನಾಗಿ ಮಾತನಾಡುವ ನಾಯಕರು, ಇವರ ಬೆನ್ನಹಿಂದೆ ಸಂಸದರ ವಿರುದ್ಧ ಅಸಮಾಧಾನ ಹೊರಹಾಕುತ್ತಾರೆ. ಅವರಿಗೆ ಟಿಕೆಟ್ ತಪ್ಪಿಸುವ ಕೆಲಸವನ್ನು ತೆರೆಮರೆಯಲ್ಲಿ ಪ್ರಬಲವಾಗಿ ಮಾಡಿಕೊಂಡು ಬಂದಿದ್ದಾರೆ. ಇದರ ಭಾಗವಾಗಿಯೇ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಮಾಜಿ ಶಾಸಕ ಸಾ.ರಾ.ಮಹೇಶ್ ಹೆಸರು ತೇಲಿಬಿಡಲಾಯಿತು.

ಇದು ಗುರಿಮುಟ್ಟಲಿಲ್ಲ. ಹೀಗೆ ವಿವಿಧ ಪ್ರಯತ್ನಗಳು ಮಾಡಲಾಗುತ್ತಿದೆ. ಇದರಲ್ಲಿ ಯಶಸ್ಸು ಸಿಗಬಹುದು, ಸಿಗದೇ ಇರಬಹುದು. ಆದರೆ, ಈ ಬೆಳವಣಿಗೆಗಳು ಈ ಕ್ಷೇತ್ರದ ಚುನಾವಣೆಯ ಮೇಲಂತೂ ಪರಿಣಾಮ ಬೀರಬಹುದು ಎಂದು ಪಕ್ಷದ ಮುಖಂಡರೊಬ್ಬರು ಆತಂಕ ವ್ಯಕ್ತಪಡಿಸಿದರು

ಟಿಕೆಟ್ ಕೈ ತಪ್ಪುವ ಭೀತಿ ಹಿನ್ನೆಲೆಯಲ್ಲಿ ಪ್ರತಾಪ್‌ಸಿಂಹ ಪರ ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಶುರುವಾಗಿದೆ. ‘ಮತ್ತೊಮ್ಮೆ ಪ್ರತಾಪ್‌ಸಿಂಹ’, ‘ಟಿಕೆಟ್ ನೀಡದಿದ್ದರೆ ಹೋರಾಟ’, ನೋಟ ಚಲಾವಣೆ’ ಎಂಬ ಪೋಸ್ಟರ್‌ಗಳು ಕಾಣಿಸಿಕೊಂಡಿವೆ.

ಯದುವೀರರ ನಿರ್ಧಾರ ಕುತೂಹಲ


ರಾಜವಂಶಸ್ಥ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಉತ್ತರಾಧಿಕಾರಿಯಾದ ಬಳಿಕ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರನ್ನು ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷಗಳು ರಾಜಕೀಯ ರಂಗಕ್ಕೆ ಸೆಳೆಯಲು ಪ್ರಯತ್ನಿಸಿವೆ. ಆದರೆ, ಇದಕ್ಕೆ ಪ್ರತಿಕ್ರಿಯಿಸಿರುವ ಅವರು ‘ರಾಜಕೀಯದಲ್ಲಿ ನನಗೆ ಆಸಕ್ತಿ ಇಲ್ಲ. ನಾನು ಬರುವುದಿಲ್ಲ’ ಎಂದು ಅನೇಕ ಬಾರಿ ಬಹಿರಂಗವಾಗಿಯೇ ಹೇಳಿದ್ದಾರೆ.

ಅದಾಗಿಯೂ, ಪ್ರತಿ ಲೋಕಸಭಾ ಚುನಾವಣೆಯಲ್ಲಿ ಅವರ ಹೆಸರು ತೇಲಿಬಿಡಲಾಗುತ್ತದೆ. ಅದು ಈ ಸಲವೂ ಪುನರಾವರ್ತನೆಯಾಗಿದೆ. ದೇಶದಲ್ಲಿ ಪ್ರಜಾಪ್ರಭುತ್ವ ಜಾರಿಯಾದ ಬಳಿಕ ಮೈಸೂರು ಸಂಸ್ಥಾನದ ಕೊನೆಯ ರಾಜ ಜಯಚಾಮರಾಜೇಂದ್ರ ಒಡೆಯರ್ ಅವರು ರಾಜ್ಯಪಾಲರಾಗಿ ಕಾರ್ಯನಿರ್ವಹಿಸಿದ್ದರು. ಇವರ ಪುತ್ರ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ರಾಜಕೀಯವನ್ನು ಪ್ರವೇಶಿಸಿದ್ದರು.

1984, 1989, 1996, 1999ರಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಲೋಕಸಭಾ ಚುನಾವಣೆಯಲ್ಲಿ ಗೆದ್ದು ಸಂಸದರಾಗಿದ್ದರು. ಬಳಿಕ ರಾಜಕೀಯದಿಂದ ದೂರವಾದರು. ಅವರ ನಿಧನದ ಬಳಿಕ ಅವರ ಪತ್ನಿ ಪ್ರಮೋದಾದೇವಿ ಒಡೆಯರ್ ರಾಜಕೀಯರಂಗ ಪ್ರವೇಶಿಸಲು ಹಿಂದೇಟು ಹಾಕಿದರು. ಈಗ ಯದುವೀರ ಯಾವ ನಿರ್ಧಾರ ಕೈಗೊಳ್ಳುತ್ತಾರೆ ಎಂಬ ಕುತೂಹಲ ಮೂಡಿದೆ.

ಜಿ.ಟಿ.ದೇವೇಗೌಡರಿಗೆ ಕೈ ಗಾಳ

ಜೆಡಿಎಸ್ ಕೋರ್ ಸಮಿತಿಯ ಅಧ್ಯಕ್ಷ, ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಅವರಿಗೆ ಕಾಂಗ್ರೆಸ್ ಗಾಳ ಹಾಕಿದೆ. ಮೈಸೂರು-ಕೊಡಗು ಲೋಕಸಭಾ ಕ್ಷೇತ್ರ ಕಾಂಗ್ರೆಸ್ ಅಭ್ಯರ್ಥಿ ಆಗಿ ಸ್ಪರ್ಧೆ ಮಾಡುವಂತೆ ಅವರಿಗೆ ಆಫರ್ ನೀಡಿದೆ. ಅವರ ಪುತ್ರ ಪ್ರತಿನಿಧಿಸುವ ಹುಣಸೂರು ಕ್ಷೇತ್ರದ 200 ಕೋಟಿ ರೂ. ಅಭಿವೃದ್ಧಿ ಕಾಮಗಾರಿಗೆ ಅನುದಾನ ನೀಡುವ ಭರವಸೆಯನ್ನೂ ನೀಡಲಾಗಿದೆ. ಆದರೆ, ಇದಕ್ಕೆ ಜಿಟಿಡಿ ಮನಸ್ಸು ಮಾಡಿಲ್ಲ. ಪ್ರತಾಪ್‌ಸಿಂಹ ಟಿಕೆಟ್ ತಪ್ಪಿ ರಾಜವಂಶಸ್ಥ ಯದುವೀರ ಬಿಜೆಪಿ ಅಭ್ಯರ್ಥಿಯಾದರೆ ಚುನಾವಣೆ ಬಹಳ ಕಷ್ಟವಾಗುತ್ತದೆ ಎಂಬ ಆತಂಕದಲ್ಲಿ ಅವರು ಕೈ ಆಹ್ವಾನವನ್ನು ಸದ್ಯಕ್ಕೆ ತಿರಸ್ಕರಿಸಿದ್ದಾರೆ.

========

ನಾನು ಯಾವುದೇ ಕಾರಣಕ್ಕೂ ಕಾಂಗ್ರೆಸ್ ಸೇರಲ್ಲ. ಕಾಂಗ್ರೆಸ್ ಸೇರುವ ಹಂತ ಯಾವ ಸಂದರ್ಭವೂ ಉದ್ಭವವಾಗಿಲ್ಲ.
ಜಿ.ಟಿ.ದೇವೇಗೌಡ, ಶಾಸಕರು

ಯಾರೋ ಒಂದಷ್ಟು ಜನರು ಅಸೂಯೆಗೆ ನನ್ನ ವಿರುದ್ಧ ಮಾತನಾಡುತ್ತಾರೆ. ಸಂಸದರ ಟಿಕೆಟ್ ನಿರ್ಧಾರ ಮಾಡುವುದು ಕ್ಷೇತ್ರದ ಜನರು. ಪಕ್ಷದ ಹೈಕಮಾಂಡ್ ನನ್ನ ಕೆಲಸವನ್ನು ನೋಡಿ ನನಗೆ ಟಿಕೆಟ್ ನೀಡುವ ವಿಶ್ವಾಸ ಹೊಂದಿದ್ದೇನೆ.
ಪ್ರತಾಪ್ ಸಿಂಹ, ಸಂಸದ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net