

ಹನೂರು: ಶಾಲೆಯ ಜಾಗದ ಸಮಸ್ಯೆ ಬಗೆಹರಿಸುವುದರ ಜತೆಗೆ ಮೂಲ ಸೌಕರ್ಯ ಒದಗಿಸುವಂತೆ ಒತ್ತಾಯಿಸಿ ತಾಲೂಕಿನ ಪೆದ್ದನಪಾಳ್ಯ ಗ್ರಾಮದ ಪಾಲಕರು ಮಕ್ಕಳನ್ನು ಶಾಲೆಗೆ ಸೋಮವಾರ ಕಳುಹಿಸದೆ ಉಳಿಸಿಕೊಂಡಿದ್ದು, ಜಿಲ್ಲಾಧಿಕಾರಿ ಆಗಮಿಸಬೇಕೆಂದು ಪಟ್ಟು ಹಿಡಿದಿದ್ದಾರೆ.
ಗ್ರಾಮದಲ್ಲಿ ಶಾಲಾ ಜಾಗಕ್ಕೆ ಸಂಬಂಧಿಸಿದಂತೆ ಮಾರ್ಕಂಡ ಅವರು ಧಾವೆ ಹೂಡಿದ್ದು, ಪ್ರಕರಣ ನ್ಯಾಯಾಲಯದಲ್ಲಿದೆ. ಶಾಲೆ ತೀವ್ರ ಶಿಥಿಲಗೊಂಡಿದ್ದರೂ ಕೊಠಡಿ ನಿರ್ಮಿಸಲು ಸಾಧ್ಯವಾಗಿಲ್ಲ. ಶಾಲಾ ಆವರಣದಲ್ಲಿ ಗಿಡಗಂಟಿ ಬೆಳೆದು ನಿಂತಿದ್ದರೂ ತೆರೆವುಗೊಳಿಸಲು ಸಾಧ್ಯವಾಗಿಲ್ಲ. ಇತ್ತ ಕುಡಿಯುವ ನೀರು ಹಾಗೂ ಶೌಚಗೃಹವಿಲ್ಲದ ಪರಿಣಾಮ ಪಾಲಕರು ಆ.11 ರಿಂದ ಮಕ್ಕಳನ್ನು ಶಾಲೆಗೆ ಕಳಹಿಸದೆ ಪ್ರತಿಭಟನೆ ನಡೆಸಿದ್ದರು.
ಈ ಹಿನ್ನೆಲೆಯಲ್ಲಿ ಆ.14 ಜಿಪಂ ಸಿಇಒ ಮೋನಾರೋತ್, ಡಿಡಿಪಿಐ ರಾಮಚಂದ್ರರಾಜೇ ಅರಸ್, ತಹಸೀಲ್ದಾರ್ ಕೆ.ಎನ್ ಚೈತ್ರಾ, ಬಿಇಒ ಗುರುಲಿಂಗಯ್ಯ ಹಾಗೂ ತಾಪಂ ಇಒ ಉಮೇಶ್ ಅವರು ಗ್ರಾಮಕ್ಕೆ ಭೇಟಿ ನೀಡಿದ್ದರು. ಕೋರ್ಟ್‌ನಲ್ಲಿರುವ ಶಾಲಾ ಜಾಗದ ಸಮಸ್ಯೆಯನ್ನು ಬಗೆಹರಿಸುವಂತೆ ಗ್ರಾಮಸ್ಥರು ಈ ವೇಳೆ ಮನವಿ ಮಾಡಿದ್ದರು. ಈ ವೇಳೆ ಅಧಿಕಾರಿಗಳು ಸಮಸ್ಯೆ ಬಗೆಹರಿಯುವವರೆಗೂ ಮಕ್ಕಳ ಶಿಕ್ಷಣಕ್ಕೆ ತೊಂದರೆಯಾಗದಂತೆ ಪಯಾರ್ಯವಾಗಿ ಶಾಲೆಗೆ ಜಾಗ ನಿಗದಿಪಡಿಸುವಂತೆ ಗ್ರಾಮಸ್ಥರಿಗೆ ಸೂಚಿಸಿದ್ದರು. ದುಸ್ಥಿತಿ ಅರಿತ ಸಿಇಒ ಅವರು ಪ್ರಸ್ತುತ ಶಾಲಾ ಕಟ್ಟಡದಲ್ಲಿ ಮಕ್ಕಳನ್ನು ಕೂರಿಸಿ ತರಗತಿ ಆರಂಭಿಸುವುದು ಬೇಡ ಎಂದು ತಿಳಿಸಿದ್ದರು.
ಹೀಗಿರುವಾಗ ಸೋಮವಾರ ಶಿಕ್ಷಕರು ಕೆಲ ವಿದ್ಯಾರ್ಥಿಗಳನ್ನು ಶಾಲೆಗೆ ಕರೆ ತಂದಿದ್ದರು. ಈ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಗ್ರಾಮಸ್ಥರು, ಶಾಲೆಗೆ ತೆರಳಿ ಶಿಕ್ಷಕರನ್ನು ತರಾಟೆಗೆ ತೆಗೆದುಕೊಂಡರು. ಮಕ್ಕಳನ್ನು ದೇಗುಲದ ಮುಂಭಾಗಕ್ಕೆ ಕರೆತಂದು ಕೂರಿಸಿದರು. ಸುದ್ದಿ ತಿಳಿದು ಬಿಇಒ ಗುರುಲಿಂಗಯ್ಯ ಅವರು ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಸ್ಥರೊಂದಿಗೆ ಮಾತುಕತೆ ನಡೆಸಿದರು. ಶಾಲಾ ಜಾಗದ ಸಮಸ್ಯೆ ಬಗೆಹರಿಯುವವರೆಗೂ ಸಮೀಪದ ಶಾಲೆಗೆ ಕಳುಹಿಸುವಂತೆ ಮನವಿ ಮಾಡಿದರು. ಆದರೆ ಇದಕ್ಕೊಪ್ಪದ ಗ್ರಾಮಸ್ಥರು ಜಿಲ್ಲಾಧಿಕಾರಿ ಗ್ರಾಮಕ್ಕೆ ಆಗಮಿಸಿ ಸಮಸ್ಯೆ ಬಗೆಹರಿಸುವವರೆಗೂ ಯಾವುದೇ ಕಾರಣಕ್ಕೂ ಶಾಲೆಗೆ ಕಳುಹಿಸುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಬಗ್ಗೆ ಬಿಇಒ ಅವರು ಹಿರಿಯ ಅಧಿಕಾರಿಗಳಿಗೆ ವರದಿ ಸಲ್ಲಿಸಿದ್ದು, ಶಾಲಾ ಸಮಸ್ಯೆಯಿಂದ ಮಕ್ಕಳು ಒಂದು ವಾರದಿಂದ ಶಿಕ್ಷಣ ವಂಚಿತರಾಗಿದ್ದಾರೆ. ಆದ್ದರಿಂದ ಅಧಿಕಾರಿಗಳು ಈ ಬಗ್ಗೆ ಅಗತ್ಯ ಕ್ರಮವಹಿಸಬೇಕಿದೆ.