ಬಿಜೆಪಿಯವರ ಅಂತೆ ಕಂತೆ ಹೇಳಿಕೆಗೆ ಉತ್ತರಿಸುವುದಿಲ್ಲ : ಸಚಿವ ಡಾ.ಎಚ್.ಸಿ. ಮಹದೇವಪ್ಪ

Mahadevappa
Published on

ಮೈಸೂರು: ಬಿಜೆಪಿ ನಾಯಕರು ಸುಮ್ಮನೇ ರಾಜಕಾರಣಕೋಸ್ಕರ ರಾಜಕೀಯ ಮಾತುಗಳನ್ನಾಡುತ್ತಾರೆ. ಅವರ ಮಾತುಗಳಿಗೆ ಮಹತ್ವ ಕೊಡುವ ಅವಶ್ಯಕತೆ ಇಲ್ಲ. ರಾಜ್ಯದಲ್ಲಿ ಸಿದ್ದರಾಮಯ್ಯ ನಾಯಕತ್ವ ಗಟ್ಟಿಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಹೇಳಿದರು.

ರಾಜ್ಯದಲ್ಲಿ ಮಹಾರಾಷ್ಟ್ರದ ಏಕನಾಥ್ ಸಿಂಧೆ ಮಾದರಿ ಸರ್ಕಾರ ರಚನೆಯಾಗಲಿದೆ ಎಂಬ ಬಿಜೆಪಿ ನಾಯಕರೇ ಹೇಳಿಕೆಗೆ ನಗರದಲ್ಲಿ ಶನಿವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಾ ತಿರುಗೇಟು ನೀಡಿದರು. ರಾಜ್ಯದಲ್ಲಿ ಸಿದ್ದರಾಮಯ್ಯ ಮಾದರಿ ಇದೆಯೇ ಹೊರತು ಸಿಂಧೆ ಮಾದರಿ ಬರಲು ಸಾಧ್ಯವಿಲ್ಲ. ಬಿಜೆಪಿಯವರ ಅಂತೆ-ಕಂತೆಗಳ ಹೇಳಿಕೆಗೆ ನಾನು ಉತ್ತರಿಸುವುದಿಲ್ಲ ಎಂದರು.

ಯಾವ ಕಾರಣಕ್ಕೆ ಈಶಾ ಫೌಂಡೇಷನ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಈಗಾಗಲೇ ಸ್ಪಷ್ಟನೆ ನೀಡಿದ್ದಾರೆ. ಈ ವಿಚಾರವಾಗಿ ಸಚಿವ ಕೆ.ಎನ್.ರಾಜಣ್ಣ ಏನು ಹೇಳಿದ್ದಾರೋ ಗೊತ್ತಿಲ್ಲ. ಬೇರೆಯವರ ವಿಚಾರಗಳಿಗೆ ನಾನು ಉತ್ತರ ಕೊಡಲು ಬಯಸುವುದಿಲ್ಲ ಎಂದರು.

ಎಸ್‌ಸಿಎಸ್‌ಪಿ-ಟಿಎಸ್‌ಪಿ ಯೋಜನೆಯ ಅನುದಾನವನ್ನು ಗ್ಯಾರಂಟಿ ಯೋಜನೆಗಳಿಗೆ ದುರ್ಬಳಕೆ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ. ಬಿಜೆಪಿ ನಾಯಕರು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿ ಜನಸಂಖ್ಯೆಗೆ ಅನುಗುಣವಾಗಿ ಅನುದಾನ ಮೀಸಲಿಡುವಂತೆ ಮಾಡಬೇಕು. ಜನರ ಮುಂದೆ ಬಿಜೆಪಿ ನಾಯಕರು ನಾಟಕ ಮಾಡುವುದನ್ನು ನಿಲ್ಲಿಸಬೇಕು ಎಂದು ಟೀಕಿಸಿದರು.

ದೇಶದಲ್ಲೇ ದಲಿತರ ಜನಸಂಖ್ಯೆಗೆ ಅನುಗುಣವಾಗಿ ಅನುದಾನ ಖರ್ಚು ಮಾಡಬೇಕು ಎನ್ನುವ ಕಾರಣಕ್ಕಾಗಿ ಎಸ್‌ಸಿಎಸ್‌ಪಿ- ಟಿಎಸ್‌ಪಿ ಕಾಯ್ದೆಯನ್ನು ಜಾರಿಗೆ ತರಲಾಗಿದೆ. ಮೊದಲು ಸಮಾಜ ಕಲ್ಯಾಣ ಇಲಾಖೆಗೆ 5 ರಿಂದ 8 ಸಾವಿರ ಕೋಟಿ ಮೀಸಲಿಡಲಾಗುತ್ತಿತ್ತು. ಆದರೆ, ಈಗ 25 ಸಾವಿರ ಕೋಟಿ ರೂ. ಮೀಸಲಿಡಲಾಗುತ್ತಿದೆ. ಡೀಮ್ಡ್ ಎಕ್ಸಿಪಿಂಡೀಚರ್‌ನಲ್ಲಿ 7(ಎ) 7(ಬಿ) 7(ಸಿ) ಇರುತ್ತದೆ. ಅದರಲ್ಲಿ ಸಾಮಾನ್ಯ ವರ್ಗದ ಜನರು ಇರುವ ಕಡೆಗಳಲ್ಲಿ 7(ಬಿ)ನಲ್ಲಿ ಬಳಸಲು ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದರು.

ಕೇಂದ್ರ ಸರ್ಕಾರ ಮಂಡಿಸಿರುವ ಬಜೆಟ್‌ನಲ್ಲಿ ಎಸ್‌ಸಿ-ಎಸ್ಟಿ ಜನಸಂಖ್ಯೆಯ ಆಧಾರದ ಮೇಲೆ 10 ಲಕ್ಷ ಕೋಟಿ ರೂ. ಮೀಸಲಿಡಬೇಕಿತ್ತಾದರೂ 1 ಲಕ್ಷ ಕೋಟಿ ಅನುದಾನ ಇಟ್ಟಿದೆ. ದೇಶದ ಅನೇಕ ರಾಜ್ಯಗಳಲ್ಲಿ ಬಿಜೆಪಿ ಸರ್ಕಾರಗಳೇ ಆಡಳಿತದಲ್ಲಿದ್ದರೂ ಖರ್ಚು ಮಾಡುತ್ತಿಲ್ಲ. ಮೊದಲು ಬಿಜೆಪಿ ನಾಯಕರು ಕೇಂದ್ರದ ನಾಯಕರ ಮೇಲೆ ಒತ್ತಡ ಹೇರಿ ಹೆಚ್ಚಿನ ಅನುದಾನ ಬಿಡುಗಡೆಗೆ ಒತ್ತಾಯಿಸಿದರೆ ಉತ್ತಮ ಎಂದು ಲೇವಡಿ ಮಾಡಿದರು. ಬಿಜೆಪಿ ನಾಯಕರು ರಾಜಕಾರಣಕ್ಕಾಗಿ ಪ್ರವಾಸ ಮಾಡುತ್ತಿದ್ದಾರೆ. ಗ್ಯಾರಂಟಿ ಯೋಜನೆಗಳಿಗೆ ಅನುದಾನ ಖರ್ಚು ಮಾಡಿ ದುರ್ಬಳಕೆ ಮಾಡುತ್ತಿಲ್ಲ ಎಂದು ಸಮರ್ಥಿಸಿಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net