ಚುನಾವಣೆಗೆ ಇನ್ಮುಂದೆ ಸ್ಪರ್ಧಿಸೊಲ್ಲ: ಬಿ.ಆರ್.ಪಾಟೀಲ್

Advisor to Chief Minister BR Patil
ಮುಖ್ಯಮಂತ್ರಿಗಳ ಸಲಹೆಗಾರ ಬಿ.ಆರ್.ಪಾಟೀಲ್
Published on

ಶಿವಮೊಗ್ಗ: ಚುನಾವಣೆಗೆ 10 ಬಾರಿ ಸ್ಪರ್ಧೆ ಮಾಡಿದ್ದೇನೆ. ಐದು ಬಾರಿ ಗೆದ್ದಿದ್ದು ಅಷ್ಟೇ ಬಾರಿ ಸೋತಿದ್ದೇನೆ. ಮುಂದಿನ ಚುನಾವಣೆ ನಿಲ್ಲಬಾರದು ಎಂದು ತೀರ್ಮಾನ ಮಾಡಿದ್ದೇನೆ ಎಂದು ಮುಖ್ಯಮಂತ್ರಿಗಳ ಸಲಹೆಗಾರ ಬಿ.ಆರ್.ಪಾಟೀಲ್ ಸ್ಪಷ್ಟಪಡಿಸಿದರು.

ನಗರದಲ್ಲಿ ಶನಿವಾರ ಜಿಲ್ಲಾ ಜಾಗೃತ ಮತದಾರರ ವೇದಿಕೆಯಿಂದ ಚುನಾವಣೆ ಸುಧಾರಣೆ ಕುರಿತು ಏರ್ಪಡಿಸಿದ್ದ ಸಂವಾದದಲ್ಲಿ ಮಾತನಾಡಿ, ಮತದಾನದ ಬಗ್ಗೆ ಸಾಕಷ್ಟು ಅನುಮಾನಗಳಿವೆ. ಹಾಗಾಗಿ ಐಪಿ ಪ್ಯಾಡ್ ಕೊಡಬೇಕು ಅಥವಾ ಬ್ಯಾಲೇಟ್ ಮೇಲೆ ಚುನಾವಣೆ ಆಗಬೇಕಿದೆ ಎಂಬುದು ನನ್ನ ಅಭಿಪ್ರಾಯ. ರಾಜ್ಯಸಭೆ ಚುನಾವಣೆ ನಡೆಯುತ್ತದೆ. ಎಷ್ಟೋ ಶಾಸಕರೇ ಅಡ್ಡ ಮತದಾನ ಮಾಡುವ ಆತಂಕ ಎದುರಾಗಿದೆ. ಜನಪ್ರತಿನಿಧಿಗಳ ಮಾನದಂಡ ಜನರೇ ಆಗಿದ್ದಾರೆ. ಶಾಸಕರು ಮನೆ ಅಥವಾ ಮದುವೆ ಕಾರ್ಯಕ್ರಮಗಳಿಗೆ ಬಂದಾಗ ಸಂಭ್ರಮಿಸುವುದಕ್ಕಿಂತ ಸದನದಲ್ಲಿ ಜನರ ಸಮಸ್ಯೆಗಳ ಧ್ವನಿ ಎತ್ತುವಂತೆ ಮಾಡಬೇಕಿದೆ ಎಂದರು.
ಕಳೆದ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಕೇವಲ 670 ಮತಗಳಿಂದ ಸೋತಿದ್ದೆ. ಚುನಾವಣಾ ಅಧಿಕಾರಿಯೊಬ್ಬರು ಇವಿಎಂ ಯಂತ್ರಕ್ಕೆ ಟೋಪಿ ಮತ್ತು ಕನ್ನಡಕ ಹಾಕಿರುವ ಫೋಟೋಗೆ ಅನುಮತಿ ಕೊಡಲಿಲ್ಲ. ಸಾಮಾನ್ಯವಾಗಿ ಟೋಪಿ ಹಾಕಿದರೆ ಮಾತ್ರ ನಮ್ಮ ಭಾಗದ ಜನರು ನನ್ನನ್ನು ತಕ್ಷಣ ಗುರುತಿಸುತ್ತಾರೆ. ನನ್ನ ದುರ್ದೈವ ಟೋಪಿ ಮತ್ತು ಕನ್ನಡಕ ಹಾಕದೇ ಫೋಟೋವನ್ನು ಆಯೋಗಕ್ಕೆ ನೀಡಿದೆ. ಚುನಾವಣೆಯಲ್ಲಿ ಜನರು ನನ್ನ ಗುರುತಿಸಲೇ ಇಲ್ಲ. ಮತ್ತೊಂದೆಡೆ ನಾಮಪತ್ರ ಸಲ್ಲಿಸಿದ ಬಳಿಕ ಪ್ರತಿಪಕ್ಷದವರು ತಮ್ಮದೇ ಜಾತಿಯವರನ್ನು ನಿಲ್ಲಿಸುತ್ತಾರೆ ಅಥವಾ ಒಂದೇ ಹೆಸರಿರುವ ಮತ್ತೊಬ್ಬರನ್ನು ನಿಲ್ಲಿಸುತ್ತಾರೆ. ಇಲ್ಲವೇ ಹಣ ಇದ್ದವರನ್ನು ನಿಲ್ಲಿಸುತ್ತಾರೆ. ಪಕ್ಷಾತೀತ ಚುನಾವಣೆ ಎನ್ನುತ್ತೇವೆ. ಆದರೆ ಪಕ್ಷದ ಪರವಾಗಿ ಕೆಲಸ ಮಾಡುತ್ತೇವೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net