

ಶಿವಮೊಗ್ಗ: ಜಿಲ್ಲಾ ಪೊಲೀಸರು ನನ್ನ ವಿರುದ್ಧ ಎರಡು ಎಫ್‌ಐಆರ್ ದಾಖಲಿಸಿದ್ದಾರೆ. ಎರಡು ಜಾಮೀನು ರಹಿತ ವಾರೆಂಟ್ ಬಂದಿದೆ. ಹಿಂದುತ್ವ ರಕ್ಷಣೆ ಮಾಡುವ ವಿಷಯದಲ್ಲಿ ನನ್ನ ವಿರುದ್ಧ ಇನ್ನೂ 100 ಎಫ್‌ಐಆರ್ ಹಾಕಿದರೂ ಜಗ್ಗುವುದಿಲ್ಲ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಹೇಳಿದರು.
ಕೋಮು ಸಾಮರಸ್ಯ ಕದಡುವ ಹೇಳಿಕೆ ಎಂದು ನನ್ನ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ಗೆ ಪೊಲೀಸರ ಸ್ವಯಂಪ್ರೇರಣೆ ಕಾರಣವೋ ಅಥವಾ ಕಾಂಗ್ರೆಸ್ ಕಾರಣವೋ ಎಂಬುದು ತಿಳಿದಿಲ್ಲ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ವಕ್ಫ್ ಹಾಗೂ ಬಾಂಗ್ಲಾದಲ್ಲಿ ಹಿಂದುಗಳ ಮೇಲಿನ ಹಲ್ಲೆ ಖಂಡಿಸಿ ನಾನು ಮಾತನಾಡಿದ್ದು ತಪ್ಪೇ? ಕಲಬುರಗಿಯ ಆಳಂದ ತಾಲೂಕಿನ ಬೀರಲಿಂಗೇಶ್ವರ ದೇವಸ್ಥಾನದ ಜಾಗವನ್ನು ಮಾತ್ರ ವಕ್ಫ್‌ನಿಂದ ಬಿಡಿಸಿಕೊಡಲಾಗಿದೆ. ಬೇರೆಲ್ಲೂ ವಕ್ಫ್ ಜಾಗವನ್ನು ದೇವಸ್ಥಾನಗಳಿಗೆ ಮರಳಿಸಿಲ್ಲ. ಹೀಗಾಗಿ ಹಿಂದುಗಳು ದಂಗೆ ಏಳಬಹುದು ಎಂದಿದ್ದೆ. ಇದರಲ್ಲಿ ತಪ್ಪೇನಿದೆ? ಎಂದು ಪ್ರಶ್ನಿಸಿದರು.
ಬಾಂಗ್ಲಾ ಮುಸಲ್ಮಾನರ ಬಗ್ಗೆ ಮಾತನಾಡಿದರೆ ಕಾಂಗ್ರೆಸ್, ಎಸ್ಪಿ ಹಾಗೂ ಎಸ್‌ಡಿಪಿಐನವರಿಗೆ ಸಮಸ್ಯೆಯೇನು? ಈಗಲೂ ನಾನು ಬಾಂಗ್ಲಾ ಮುಸಲ್ಮಾನರ ರಾಕ್ಷಸೀ ಕೃತ್ಯವನ್ನು ಖಂಡಿಸುತ್ತೇನೆ. ನನ್ನ ಹೇಳಿಕೆಯಿಂದ ಹಿಂದೆ ಸರಿಯುವುದಿಲ್ಲ. ಕೇಸ್‌ಗಳಿಗೆ ಹೆದರುವುದಿಲ್ಲ. ಬಾಂಗ್ಲಾ ಮುಸಲ್ಮಾನರ ಪರ ಯಾರೂ ನಿಲ್ಲಬಾರದು ಎಂದು ಹೇಳಿದರು.
ನಾನು ಸಮಾಜದಲ್ಲಿ ಅಶಾಂತಿ ಮೂಡಿಸುವ ಪ್ರಯತ್ನ ಮಾಡಿಲ್ಲ. ಜಿಲ್ಲಾ ರಕ್ಷಣಾಧಿಕಾರಿಗಳು ಯಾರನ್ನೋ ತೃಪ್ತಿಪಡಿಸಲು ನನ್ನ ಮೇಲೆ ಕೇಸು ಹಾಕಿದ್ದಾರೆ. ದೇಶ, ಧರ್ಮದ್ರೋಹ ಮಾಡುವವರ ವಿರುದ್ಧ ನಿರಂತರ ಹೋರಾಟ ಮಾಡುತ್ತೇನೆ, ಇದೇ ರೀತಿ ಮಾತನಾಡುತ್ತೇನೆ ಎಂದರು.
ಹಿಂದುತ್ವ ಎನ್ನುವುದು ರೋಗ ಎಂದು ಜಮ್ಮು-ಕಾಶ್ಮೀರ ಮಾಜಿ ಸಿಎಂ ಮೆಹಬೂಬ ಮುಫ್ತಿ ಅವರ ಪುತ್ರಿ ಇಲ್ತಿಜಾ ಮಸ್ತಿ ಹೇಳಿದ್ದಾರೆ. ಹಾಗಿದ್ದರೆ ಇಸ್ಲಾಂ ಅಂದರೆ ಏನು? ಎಂದು ಈಶ್ವರಪ್ಪ ಪ್ರಶ್ನಿಸಿದರು. ಆಕೆಯ ಹೇಳಿಕೆಯನ್ನು ಯಾವ ಮುಸಲ್ಮಾನರೂ ಖಂಡಿಸಲಿಲ್ಲ. ಕಾಂಗ್ರೆಸ್‌ನವರು ತುಟಿ ಬಿಚ್ಚಲಿಲ್ಲ. ಆಕೆ ಹಿಂದು ಧರ್ಮದ ಬಗ್ಗೆ ಹೇಳಿದ್ದನ್ನು ಬೇರೆ ಯಾರಾದರೂ ಮುಸ್ಲಿಂ ಧರ್ಮದ ಬಗ್ಗೆ ಹೇಳಿದ್ದರೆ ದೇಶ ಹೊತ್ತಿ ಉರಿಯುತ್ತಿತ್ತು ಎಂದು ಅಭಿಪ್ರಾಯಪಟ್ಟರು.
ಡಿಸಿಸಿ ಬ್ಯಾಂಕ್ ನಿರ್ದೇಶಕ ಮಹಾಲಿಂಗಯ್ಯ ಶಾಸ್ತ್ರಿ, ಪಾಲಿಕೆ ಮಾಜಿ ಸದಸ್ಯ ಇ.ವಿಶ್ವಾಸ್, ರಾಷ್ಟ್ರ ಭಕ್ತರ ಬಳಗದ ಮುಖಂಡರಾದ ಬಾಲು, ಜಾದವ್ ಸುದ್ದಿಗೋಷ್ಠಿಯಲ್ಲಿದ್ದರು.