ನಾಲ್ವಡಿ ಅಭಿವೃದ್ಧಿ ವಿಚಾರವನ್ನು ಪ್ರತಾಪ್ ಸಿಂಹಗೆ ಹೋಲಿಸುತ್ತಾರೆಯೇ?

mysore
Published on

ಮೈಸೂರು: ‘ನಾಲ್ವಡಿ ಕೃಷ್ಣರಾಜ ಒಡೆಯರ್ ಕಾಲದ ಅಭಿವೃದ್ಧಿಯನ್ನು ಮೈಸೂರು -ಕೊಡಗು ಲೋಕಸಭಾ ಕ್ಷೇತ್ರವು ಕಳೆದ 10 ವರ್ಷಗಳಲ್ಲಿ ಕಂಡಿದೆ’ ಎಂಬ ಬಿಜೆಪಿ ಶಾಸಕ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿಕೆ ವಿರುದ್ಧ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ ಕಿಡಿಕಾರಿದ್ದಾರೆ.


ಇವರಿಗೆ ನಾಲ್ವಡಿ ಯಾರು ಗೊತ್ತಾ? ಅವರ ಬಗ್ಗೆ ನಿಮಗೇನು ತಿಳಿದಿದೆ ? ಅವರು ಕೊಟ್ಟ ಕೊಡುಗೆಗಳು ಮತ್ತು ಅಭಿವೃದ್ಧಿ ವಿಚಾರಗಳನ್ನು ಪ್ರತಾಪ್ ಸಿಂಹಗೆ ಹೋಲಿಸುತ್ತಾರೆಯೇ? ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಗುಡುಗಿದರು.


ಬಿಜೆಪಿ ಅವರು ಸುಳ್ಳು ಹೇಳುವಲ್ಲಿ ನಿಸ್ಸೀಮರು. ಸುಳ್ಳೇ ನಿಮ್ಮ ಮನೆ ದೇವರು ಎಂದು ನಿಮ್ಮ ಮಾತಿನಿಂದ ತಿಳಿಯುತ್ತದೆ. ಅಶ್ವತ್ಥನಾರಾಯಣ ಅವರು ಸುಳ್ಳು ಹೇಳುವುದರಲ್ಲಿ 3ನೇ ಸ್ಥಾನದಲ್ಲಿದ್ದರು. ಈ ಹೇಳಿಕೆ ಮೂಲಕ 2ನೇ ಸ್ಥಾನಕ್ಕೆ ಬಂದಿದ್ದಾರೆ ಎಂದು ಹರಿಹಾಯ್ದರು.


ಚುನಾವಣೆ ಬಾಂಡ್‌ಗಳ ಬಗ್ಗೆ ಸುಪ್ರೀಂಕೋರ್ಟ್ ಐತಿಹಾಸಿಕ ತೀರ್ಪು ನೀಡಿದೆ. ಇದು 2018ರಲ್ಲಿ ಪ್ರಧಾನಿ ನರೇಂದ್ರ ಮೋದಿ ಜಾರಿಗೆ ತಂದಿದ್ದ ಕಾನೂನು. ಬಾಂಡ್ ಮುಖಾಂತರ ಮಾಹಿತಿ ಗೌಪ್ಯವಾಗಿಟ್ಟು ಸಾವಿರಾರು ಕೋಟಿ ರೂ. ಪಕ್ಷಕ್ಕೆ ದೇಣಿಗೆ ಪಡೆದಿದ್ದಾರೆ. ಈಗ ಆ ಎಲ್ಲ ಮಾಹಿತಿಯನ್ನು ಬಹಿರಂಗಪಡಿಸುವಂತೆ ಕೋರ್ಟ್ ಸೂಚಿಸಿದೆ. ಅದಾನಿ, ಅಂಬಾನಿ ಸೇರಿ ಯಾರು ಎಷ್ಟು ಹಣವನ್ನು ಬಿಜೆಪಿಗೆ ಕೊಟ್ಟಿದ್ದಾರೆ ಎಂಬುದು ಈಗ ಬಯಲಾಗಲಿದೆ ಎಂದು ಹೇಳಿದರು.


ಕೇವಲ 10 ವರ್ಷದಲ್ಲಿ ಬಿಜೆಪಿಗೆ 10 ಸಾವಿರ ಕೋಟಿ ರೂ. ದೇಣಿಗೆ ಬಂದಿದೆ. ಕಾಂಗ್ರೆಸ್‌ಗೆ 1947ರಿಂದ ಇಲ್ಲಿಯ ತನಕ ಸಾವಿರ ಕೋಟಿ ರೂ. ದೇಣಿಗೆ ಬಂದಿದೆ. ಬಿಜೆಪಿಗೆ ಸುಪ್ರೀಂಕೋರ್ಟ್ ಮೇಲೆ ಕೋಪ ಬಂದಿರುವ ಹಾಗಿದೆ. ಆ ಕೋಪವನ್ನು ತೀರಿಸಿಕೊಳ್ಳಲು ಕಾಂಗ್ರೆಸನ್ನು ಟಾರ್ಗೆಟ್ ಮಾಡಿದೆ. ಕಾಂಗ್ರೆಸ್‌ನ ಅಕೌಂಟ್‌ಗಳನ್ನೆಲ್ಲ ಐಟಿ ಇಲಾಖೆ ಜಪ್ತಿ ಮಾಡಿದೆ. ಇದಕ್ಕೆ ನಿಖರವಾದ ಕಾರಣ ಕೊಟ್ಟಿಲ್ಲ. ಬಿಜೆಪಿಯವರು ಅಧಿಕಾರಕ್ಕೋಸ್ಕರ ಏನು ಬೇಕಾದರು ಮಾಡುತ್ತಾರೆ. 2014 ಮತ್ತು 2019ರಲ್ಲಿ ಜನ ಮೂರ್ಖರಾದರು. ಆದರೆ, ಅದು ಈಗ ಮರುಕಲಿಸಲ್ಲ ಎಂದರು.


ರಾಜ್ಯ ಸರ್ಕಾರದ ಬಜೆಟ್ ಸರ್ವಜನಾಂಗದ ಅಭಿವೃದ್ಧಿ ಪರವಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರರಿಗೆ ಬಜೆಟ್ ಬಗ್ಗೆ ಏನಾದರೂ ತಿಳಿದಿದೆಯೇ? ವಿಪಕ್ಷ ನಾಯಕ ಆರ್.ಅಶೋಕ್ ಈ ಬಗ್ಗೆ ನಿಮಗೆ ಅರಿವಿಲ್ಲ. ಬಜೆಟ್ ಬಗ್ಗೆ ಮೊದಲು ತಿಳಿಯಿರಿ ನಂತರ ಮಾತನಾಡಿ ಎಂದು ಕುಟುಕಿದರು.


ಕೇಂದ್ರ ವಿಪ್ತ ಸಚಿವೆ ನಿರ್ಮಲಾ ಸೀತಾರಾಮನ್ ಕೇವಲ 50 ನಿಮಿಷದಲ್ಲಿ ಬಜೆಟ್ ಪ್ರತಿಯನ್ನು ಓದಿ ಮುಗಿಸಿದಂತೆ ಅಂದ್ಕೊಂಡ್ರಾ? ಯಾರೋ ಪ್ರಿಪೇರ್ ಮಾಡಿರುವ ಬಜೆಟ್ ಪೇಪರ್ ಅಲ್ಲ. ಸ್ವತಃ ಸಿದ್ದರಾಮಯ್ಯ ಅವರೇ ನಿಂತು ಪ್ರತಿ ಬಜೆಟ್‌ನ ಪ್ರತಿ ಪುಟಗಳನ್ನು ಓದಿದ್ದಾರೆ ಎಂದು ಹೇಳಿದರು.


ಮೈಸೂರು ಭಾಗಕ್ಕೆ ಅನುದಾನ ನೀಡಿರುವ ಬಗ್ಗೆ ಹೇಳುವುದಾದರೆ ಕೆ.ಆರ್.ಎಸ್. ಬೃಂದಾವನವನ್ನು ಡಿಸ್ನಿಲ್ಯಾಂಡ್ ಮಾದರಿ ರೂಪುಗೊಳಿಸಲು ಮುಂದಾಗಿದ್ದು, ಕಾವೇರಿ ಜಲಾನಯನ ಪ್ರದೇಶದ ಅಭಿವೃದ್ಧಿಗೆ ವಿಶೇಷ ಅನುದಾನ, ಮೈಸೂರು ಮಹಾರಾಣಿ ವಿಜ್ಞಾನ ಕಾಲೇಜಿನ ಅಭಿವೃದ್ಧಿ, ಮಹಾನಗರ ಪಾಲಿಕೆ ವಿಚಾರದಲ್ಲಿ ಮೂಲ ಸೌಕರ್ಯಕ್ಕೆ 200 ಕೋಟಿ ರೂ. ಅನುದಾನ, ಹೀಗೆ ಅನೇಕ ಕಾಮಗಾರಿಗಳಿಗೆ ಅನುದಾನಗಳನ್ನು ಈ ಬಜೆಟ್‌ನಲ್ಲಿ ನೀಡಲಾಗಿದೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net