ಬಿಜೆಪಿ ಶುದ್ಧೀಕರಣವಾದ ಮೇಲೆ ಹೋಗುವೆ: ಈಶ್ವರಪ್ಪ

kse
ಶಿವಮೊಗ್ಗದಲ್ಲಿ ಬಿಜೆಪಿ, ಜೆಡಿಎಸ್‌ನ ಪ್ರಮುಖರು ಕೆ.ಎಸ್.ಈಶ್ವರಪ್ಪ ಸಮ್ಮುಖದಲ್ಲಿ ರಾಷ್ಟ್ರಭಕ್ತರ ಬಳಗಕ್ಕೆ ಸೇರ್ಪಡೆಯಾದರು. ಕೆ.ಇ.ಕಾಂತೇಶ್, ಎಂ.ಶಂಕರ್, ಸುವರ್ಣಾ ಶಂಕರ್, ಸಂಗೀತಾ, ಇ.ವಿಶ್ವಾಸ್, ಲಕ್ಷ್ಮೀ ಶಂಕರನಾಯ್ಕ ಇತರರಿದ್ದರು.
Published on

ಶಿವಮೊಗ್ಗ: ಬಿಜೆಪಿ, ಜೆಡಿಎಸ್ ಪಕ್ಷದ 50ಕ್ಕೂ ಹೆಚ್ಚು ಕಾರ್ಯಕರ್ತರು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ನೇತೃತ್ವದ ರಾಷ್ಟ್ರಭಕ್ತರ ಬಳಗಕ್ಕೆ ಬುಧವಾರ ಸೇರ್ಪಡೆಯಾದರು. ಇದು ಟ್ರೈಲರ್ ಮಾತ್ರ, ಪಿಕ್ಚರ್ ಇನ್ನೂ ಬಾಕಿ ಇದೆ. ಮುಂದಿನ ತಿಂಗಳು ಮತ್ತಷ್ಟು ಮಂದಿ ಬಳಗ ಸೇರಲಿದ್ದಾರೆ ಎಂದು ಕೆ.ಎಸ್.ಈಶ್ವರಪ್ಪ ಹೇಳುವ ಮೂಲಕ ಎದುರಾಳಿಗಳಿಗೆ ಪರೋಕ್ಷ ಸಂದೇಶ ರವಾನಿಸಿದ್ದಾರೆ.

ನಾನು ಊರಲ್ಲಿ ಇಲ್ಲದಿದ್ದಾಗ ಇಬ್ಬರನ್ನು ಕರೆದೊಯ್ದು ಪಕ್ಷಕ್ಕೆ ಸೇರಿಸಿಕೊಂಡರೆ ರಾಷ್ಟ್ರಭಕ್ತರ ಬಳಗ ಮುಗಿಸಲಾಗುವುದಿಲ್ಲ. ಇದನ್ನು ನೋಡಿಕೊಂಡು ನಾವು ಸುಮ್ಮನಿರಲು ಸಾಧ್ಯವೇ? ಈಗ ಆ ಪಕ್ಷದ ವಾರ್ಡ್ ಅಧ್ಯಕ್ಷರು, ಶಕ್ತಿ ಕೇಂದ್ರದ ಪ್ರಮುಖರು, ನಗರ ಪಾಲಿಕೆ ಮಾಜಿ ಸದಸ್ಯರನ್ನೇ ಬಳಗಕ್ಕೆ ಕರೆತಂದಿದ್ದೇವೆ. ವಿವಿಧ ಪಕ್ಷದವರು, ಸಂಘ ಸಂಸ್ಥೆಗಳ ಪ್ರಮುಖರು, ಸಮಾಜದ ಮುಖಂಡರು ಬಳಗ ಸೇರಿರುವುದರಿಂದ ನಮ್ಮ ಶಕ್ತಿ ಹೆಚ್ಚಿದೆ ಎಂದು ತಿರುಗೇಟು ನೀಡಿದರು.

ಶಿವಮೊಗ್ಗದ ಪಾಲಿಕೆ ಸತ್ತುಹೋಗಿದೆ. ಅಲ್ಲಿ ಸಾರ್ವಜನಿಕರ ಕೆಲಸಗಳೇ ಆಗುತ್ತಿಲ್ಲ. ಆಕಸ್ಮಾತ್ ಕೆಲಸವಾದರೂ ಅದಕ್ಕೆ ಲಂಚ ನೀಡಬೇಕಾದ ಸ್ಥಿತಿಯಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಯಾವುದೇ ಅಭಿವೃದ್ಧಿಯಾಗಿಲ್ಲ ಎಂದು ಕಿಡಿಕಾರಿದರು.

ದಕ್ಷಿಣ ಕನ್ನಡದಲ್ಲಿ ಹಿಂದುಗಳ ಕಗ್ಗೊಲೆಗಳಾದಾಗ ಸುಮ್ಮನಿದ್ದ ಸ್ಪೀಕರ್ ಯು.ಟಿ.ಖಾದರ್, ಓರ್ವ ಮುಸ್ಲಿಂ ಯುವಕನ ಕೊಲೆಯಾಗುತ್ತಿದ್ದಂತೆ ಜಿಲ್ಲೆಯಲ್ಲಿ ಸಾಮರಸ್ಯ ಕಾಪಾಡಿಕೊಳ್ಳಬೇಕು ಎಂದಿದ್ದಾರೆ. ಅವರು ಸ್ಪೀಕರ್ ಸ್ಥಾನದಲ್ಲಿ ಮುಂದುವರಿಯಲು ಅನರ್ಹರು. ಅವರಿಗೆ ಹಿಂದುಗಳ ಕಗ್ಗೊಲೆ ಕಾಣಿಸಲಿಲ್ಲವೇ ಎಂದು ಪ್ರಶ್ನಿಸಿದರು.

ಶಿವಮೊಗ್ಗದ ಅಭಿವೃದ್ಧಿ ಹಾಗೂ ಹಿಂದುತ್ವದ ರಕ್ಷಣೆಯೇ ರಾಷ್ಟ್ರಭಕ್ತರ ಬಳಗದ ಪ್ರಮುಖ ಗುರಿ. ಇದರಲ್ಲಿ ಯಾವುದೇ ರಾಜಿ ಇಲ್ಲ. ಬಿಜೆಪಿ ಹಿಂದುತ್ವದಿಂದ ದೂರವಾಗುತ್ತಿದೆ. ಅಲ್ಲಿ ಕುಟುಂಬ ರಾಜಕಾರಣ ಹೆಚ್ಚಿದೆ. ಇದರಿಂದ ಬೇಸತ್ತವರು ನಮ್ಮ ಬಳಗಕ್ಕೆ ಬರುತ್ತಿದ್ದಾರೆ ಎಂದರು.

ಜಿಪಂ ಮಾಜಿ ಸದಸ್ಯ ಕೆ.ಇ.ಕಾಂತೇಶ್, ನಗರಸಭೆ ಮಾಜಿ ಅಧ್ಯಕ್ಷ ಎಂ.ಶಂಕರ್, ಮಾಜಿ ಮೇಯರ್ ಸುವರ್ಣಾ ಶಂಕರ್, ಲಕ್ಷ್ಮೀ ಶಂಕರನಾಯ್ಕ, ಪಾಲಿಕೆ ಮಾಜಿ ಸದಸ್ಯರಾದ ಸಂಗೀತಾ ನಾಗರಾಜ್, ಇ.ವಿಶ್ವಾಸ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net