'ಹೊಂಡ ಸಿಟಿ'ಗೆ ಮುಕ್ತಿ ನೀಡುವುದೇ ಜಿಬಿಎ?

raste gundi
Published on

ಆರ್​​.ತುಳಸಿಕುಮಾರ್​ ಬೆಂಗಳೂರು

ರಾಜಧಾನಿ ಬೆಂಗಳೂರಿನ ರಸ್ತೆಗಳಲ್ಲಿ ಗುಂಡಿಗಳದ್ದೇ ಕಾರುಬಾರು ಆಗಿದ್ದು, ಅವುಗಳನ್ನು ಮುಚ್ಚುವಲ್ಲಿ ಸ್ಥಳೀಯಾಡಳಿತ ವಿಫಲವಾಗಿದೆ ಎಂಬ ಆಕ್ಷೇಪ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಇತ್ತೀಚಿನ ಮಳೆಯಿಂದಾಗಿ ಇನ್ನಷ್ಟು ಗುಂಡಿಗಳು ಸೇರ್ಪಡೆ ಆಗಿದ್ದು, ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ 5 ಪಾಲಿಕೆಗಳಿಗೆ ಸವಾಲಾಗಿ ಪರಿಣಮಿಸಿದೆ.

ಐದೂ ಪಾಲಿಕೆಗಳು ಅಧಿಕೃತವಾಗಿ ಕಾರ್ಯಾರಂಭವಾಗಿ ವಾರ ಸಮೀಪಿಸುತ್ತಿದ್ದು, ಹಿಂದಿನ ಬಿಬಿಎಂಪಿಗಿಂತ ಹೆಚ್ಚಿನ ಬದಲಾವಣೆ ಕಾಣುತ್ತಿಲ್ಲ. ಬದಲಾಗಿ ಹೊಸ ಮಾದರಿಗೆ ಹೊಂದಿಕೊಳ್ಳಲು ತಿಣುಕಾಡುವ ಸ್ಥಿತಿ ಕಾಣುತ್ತಿದೆ. ಈ ಸ್ಥಿತಿಯಿಂದ ಹೊರಬರಲು ಇನ್ನಷ್ಟು ದಿನಗಳು ಬೇಕಾಗಬಹುದು ಎಂದು ಹೇಳಲಾಗಿದೆ. ಆದರೂ, ಸದ್ಯದ ಪರಿಸ್ಥಿತಿಯಲ್ಲಿ ರಸ್ತೆಗುಂಡಿ ಮುಚ್ಚುವ ಕಾರ್ಯಕ್ಕೆ ಕಾರ್ಪೊರೇಷನ್‌ಗಳು ಮೊದಲ ಆದ್ಯತೆ ನೀಡಬೇಕು ಎಂಬುದಾಗಿ ನಾಗರಿಕರು ಒತ್ತಾಯಿಸಿದ್ದಾರೆ.

ರಸ್ತೆಗುಂಡಿ ನಿರ್ಮಾಣವಾಗಲು ವಿವಿಧ ಕಾರಣಗಳು ಇವೆ. ರಸ್ತೆ ಸಾಂದ್ರತೆಗಿಂತ 3-4 ಪಟ್ಟು ವಾಹನಗಳ ಓಡಾಟದಿಂದ ರಸ್ತೆ ಹಾಳಾಗುತ್ತಿದೆ. ಮಳೆಯಿಂದಲೂ ಸಮಸ್ಯೆ ಉಂಟಾಗುತ್ತಿದೆ. ಇವುಗಳ ಜತೆಗೆ ಕಳಪೆ ಕಾಮಗಾರಿ ಹಾಗೂ ಗುಂಡಿಗಳನ್ನು ವೈಜ್ಞಾನಿಕವಾಗಿ ಮುಚ್ಚದಿರುವುದು ಸಮಸ್ಯೆಗೆ ಮೂಲ ಕಾರಣ ಎಂಬುದನ್ನು ಪಾಲಿಕೆಗಳು ಒಪ್ಪಿಕೊಂಡರೂ, ಅವುಗಳನ್ನು ಮೆಟ್ಟಿನಿಲ್ಲಲು ಸ್ಪಷ್ಟ ಹಾಗೂ ಸಮರ್ಪಕವಾದ ಕಾರ್ಯಯೋಜನೆ ರೂಪಿಸದ ಕಾರಣ ರಸ್ತೆಗುಂಡಿ ನಿತ್ಯದ ಗೋಳಾಗಿದೆ.

ಎಣಿಕೆಗೆ ಸಿಗದ ಗುಂಡಿಗಳ ಸಂಖ್ಯೆ:

ನಗರದಲ್ಲಿ 923 ಕಿ.ಮೀ. ಉದ್ದ ಆರ್ಟೀರಿಯಲ್ ರಸ್ತೆ ಹಾಗೂ 1,017 ಕಿ.ಮೀ. ಉದ್ದ ಸಬ್ ಆರ್ಟೀರಿಯಲ್ ರಸ್ತೆ ಸೇರಿ ಒಟ್ಟು 1,940 ಕಿ.ಮೀ. ರಸ್ತೆಜಾಲ ಇದೆ. ಇವುಗಳ ಪ್ರಮುಖ ರಸ್ತೆಗಳಾಗಿದ್ದು, ನಗರದ ಒಂದು ಭಾಗದಿಂದ ಇನ್ನೊಂದು ಪ್ರದೇಶವನ್ನು ಸಂಪರ್ಕಿಸುತ್ತವೆ. ಈ ರಸ್ತೆಗಳು ಹಾಗೂ 67 ಕಿ.ಮೀ. ವರ್ತುಲ ರಸ್ತೆಗಳಲ್ಲಿ ನಗರದ ಅರ್ಧದಷ್ಟು ವಾಹನಗಳು ಸಂಚರಿಸುತ್ತಿವೆ. ಇಂತಹ ರೋಡ್‌ಗಳನ್ನು ಸುಸ್ಥಿತಿಯಲ್ಲಿಡಬೇಕಾದ್ದು ಪಾಲಿಕೆಯ ಕರ್ತವ್ಯ. ಆದರೆ, ಹಲವು ಕಾರಣದಿಂದ ನಿರ್ವಹಣೆ ಸಮರ್ಪಕವಾಗಿ ನಡೆಯದ ಕಾರಣ ರಸ್ತೆಗಳು ಹಾಳಾಗುತ್ತಿವೆ. ಕಳೆದ ತಿಂಗಳು ಬಿಬಿಎಂಪಿ ಅಂದಾಜಿಸಿದಂತೆ 5 ಸಾವಿರ ಗುಂಡಿಗಳು ಉಂಟಾಗಿದ್ದವು. ಇವುಗಳನ್ನು ಆದ್ಯತೆ ಮೇರೆಗೆ ದುರಸ್ತಿ ಕಾರ್ಯ ಕೈಗೊಂಡಾಗ ಅರ್ಧದಷ್ಟು ಸಮಸ್ಯೆಗೆ ಮುಕ್ತಿ ದೊರೆತಿತ್ತು. ಮತ್ತೆ ಭಾರಿ ಮಳೆಯಿಂದ ಆ ಗುಂಡಿಗಳೆಲ್ಲವೂ ಬಾಯ್ತೆರೆದುಕೊಂಡಿವೆ. ಹೀಗಾಗಿ ಗುಂಡಿಗಳ ಸಂಖ್ಯೆ ಹಿಂದಿದ್ದಷ್ಟೇ ಇವೆ. ಅಂದಾಜಿನ ಪ್ರಕಾರ ನಗರದೆಲ್ಲೆಡೆ 10 ಸಾವಿರ ಗುಂಡಿಗಳು ಕಾಣಸಿಗುತ್ತವೆ. ಜತೆಗೆ ವಾರ್ಡ್ ಮಟ್ಟದಲ್ಲಿ ಇದರ ದುಪ್ಪಟ್ಟು ಸಂಖ್ಯೆಯ ಗುಂಡಿಗಳು ಕಾಣಸಿಗುತ್ತವೆ. ದುರಸ್ತಿ ಮಾಡುತ್ತಾ ಹೋದಲ್ಲಿ ಇದಕ್ಕೆ ಕೊನೆಯೇ ಇಲ್ಲವೆಂಬುದನ್ನು ಅಧಿಕಾರಿಗಳೇ ಒಪ್ಪಿಕೊಳ್ಳುತ್ತಾರೆ.

ಪಾಲಿಕೆಗಳು ಕಾರ್ಯಸೂಚಿ ಸಿದ್ಧಪಡಿಸಲು ಸಲಹೆ:

ಪ್ರಸ್ತುತ ಐದು ಪಾಲಿಕೆಗಳು ರಚನೆಯಾಗಿರುವುದರಿಂದ ಸ್ಥಳೀಯ ಸಮಸ್ಯೆಗಳಿಗೆ ಆದ್ಯತೆ ನೀಡಬಹುದಾಗಿದೆ. ಇವುಗಳಲ್ಲಿ ರಸ್ತೆಗುಂಡಿ ಮೊದಲ ಆದ್ಯತೆ ಆಗಬೇಕೆಂಬುದು ಸಾರ್ವಜನಿಕರ ಆಗ್ರಹವಾಗಿದೆ. ಹೊಸ ಕಾರ್ಪೊರೇಷನ್ ವ್ಯಾಪ್ತಿಯಲ್ಲಿ ರಸ್ತೆಗಳನ್ನು ಗುರುತಿಸುವುದು ಸುಲಭವಿದ್ದು, ಸ್ಪಷ್ಟ ಕಾರ್ಯಸೂಚಿ ರಚಿಸಿ ಅವುಗಳಂತೆ ಕಾಲಮಿತಿಯೊಳಗೆ ದುರಸ್ತಿ ಕೈಗೊಳ್ಳಬಹುದಾಗಿದೆ. ವಿವಿಧ ಹಂತದ ಇಂಜಿನಿಯರ್‌ಗಳಿಗೆ ಮೇಲ್ವಿಚಾರಣೆ ವಹಿಸಿ ಈ ತಿಂಗಳಾಂತ್ಯದೊಳಗೆ ಗುಂಡಿ ಮುಚ್ಚಿ ರಸ್ತೆ ಸಮಸ್ಯೆಗೆ ಮುಕ್ತಿ ಹಾಡಬಹುದು ಎನ್ನುತ್ತಾರೆ ಮಾಜಿ ಕಾರ್ಪೊರೇಟರ್‌ಗಳು.

ಗುಂಡಿಗಳು ಉಂಟಾಗಲು ಪ್ರಮುಖ ಕಾರಣ:

* ರಸ್ತೆಗಳ ಮೇಲೆ ಅತಿ ಭಾರದ ವಾಹನಗಳ ಓಡಾಟ ಹೆಚ್ಚಳ

* ರಸ್ತೆಉಬ್ಬು, ಕಬ್ಬಿಣದ ಜಾಲರಿ, ಕಿರುಸೇತುವೆ ಸ್ಥಳಗಳ ನಿರ್ವಹಣೆ ಕೊರತೆ

* ಗುಂಡಿ ಬಿದ್ದಾಗ ಅವೈಜ್ಞಾನಿಕವಾಗಿ ಮುಚ್ಚುವುದರಿಂದ ಮತ್ತೆ ರಸ್ತೆಗುಂಡಿ ಪ್ರತ್ಯಕ್ಷ

* ರಾತ್ರಿವೇಳೆ ಗುಂಡಿ ಮುಚ್ಚುವುದರಿಂದ ಅರೆಬರೆ ಕಾಮಗಾರಿ ಕೈಗೊಳ್ಳುವುದು

* ಮಳೆಗಾಲದಲ್ಲಿ ಗುಂಡಿ ಮುಚ್ಚಲು ವೆಟ್ ಮಿಕ್ಸ್ ಬಳಸಿ ರೋಲರ್ ಹಾಕದಿರುವುದು

* ಗುಂಡಿ ಮುಚ್ಚಿದ ಬಳಿಕ ಕೆಲ ಗಂಟೆ ಕಾಲ ವಾಹನಗಳ ಓಡಾಟಕ್ಕೆ ನಿರ್ಬಂಧ ವಿಧಿಸದಿರುವುದು

* ಕೊಳವೆ ಅಳವಡಿಕೆ ಇತ್ಯಾದಿ ಕಾರ್ಯಕ್ಕೆ ರಸ್ತೆ ಅಗೆತ ಬಳಿಕ ಸಮರ್ಪಕವಾಗಿ ಮುಚ್ಚದಿರುವುದು.

ವಿವಿಧ ಸಂಸ್ಥೆಗಳ ಕಾಮಗಾರಿಯಿಂದ ರಸ್ತೆಹಾಳು:

ನಗರದಲ್ಲಿ ಪಾಲಿಕೆ ಅಲ್ಲದ ಬಿಡಿಎ, ಬೆಸ್ಕಾಂ, ಬಿಎಂಆರ್‌ಸಿಎಲ್, ಜಲಮಂಡಳಿಯಿಂದ ವಿವಿಧ ಪ್ರದೇಶಗಳಲ್ಲಿ ನಿರಂತರವಾಗಿ ಕಾಮಗಾರಿ ನಡೆಯುತ್ತಿವೆ. ಇವು ಪೂರ್ಣಗೊಂಡ ಬಳಿಕ ಮರು ಡಾಂಬರೀಕರಣ ಮಾಡದೆ ಹಾಗೆಯೇ ಬಿಡುವುದರಿಂದ ಗುಂಡಿಗಳು ಉಂಟಾಗುತ್ತವೆ. ಸಮನ್ವಯ ಕೊರತೆಯಿಂದ ರಸ್ತೆ ದುರಸ್ತಿ ವೇಳೆ ಅಧಿಕಾರಿಗಳು ಖುದ್ದು ಹಾಜರಿದ್ದು, ಮೇಲ್ಚಿಚಾರಣೆ ಮಾಡದಿರುವುದು ಗುಂಡಿಗಳ ಸಂಖ್ಯೆ ಹೆಚ್ಚಳ ಕಾರಣವಾಗಿವೆ ಎಂಬುದನ್ನು ಅಧಿಕಾರಿಗಳೇ ಒಪ್ಪಿಕೊಂಡಿದ್ದಾರೆ.

ವಾಹನ ಮಾಲೀಕರಿಗೆ ದುರಸ್ತಿ ಹೊರೆ:

ನಗರದಲ್ಲಿ ಗುಂಡಿಗಳಿರುವ ರಸ್ತೆಗಳಲ್ಲಿ ಸಂಚಾರ ಮಾಡದಷ್ಟು ಹದೆಗೆಟ್ಟಿದೆ. ಕೆಲವೆಡೆ 1 ಅಡಿ ಆಳದ ಗುಂಡಿಗಳು ಕಾಣಸಿಗುತ್ತವೆ. ಇನ್ನೂ ಕೆಲವೆಡೆ ರಸ್ತೆಯುದ್ದಕ್ಕೂ ಗುಂಡಿಗಳು ಉಂಟಾಗಿವೆ. ಇಂತಹ ರೋಡ್‌ಗಳಲ್ಲಿ ವಾಹನ ಚಾಲಾಯಿಸುವುದರಿಂದ ಆಗಾಗ್ಗೆ ದುರಸ್ತಿಗೆ ಬರುತ್ತಿದೆ. ಪ್ರತಿ ತಿಂಗಳೂ ಸಾವಿರಾರು ರೂ. ಖರ್ಚು ಮಾಡಬೇಕಿದೆ. ವೆಹಿಕಲ್‌ಗಳ ಬಿಡಿ ಭಾಗಗಳ ದರ ಹೆಚ್ಚಿದ್ದು, ವರ್ಕ್‌ಶಾಪ್, ಗ್ಯಾರೇಜ್‌ಗಳಿಗೆ ವೃಥಾ ಹಣ ವ್ಯಯಿಸಬೇಕಾಗಿದೆ ಎನ್ನುತ್ತಾರೆ ವಾಹನ ಮಾಲೀಕ ನರೇಂದ್ರ.

ರಸ್ತೆಗುಂಡಿ ಮುಚ್ಚುವುದು ನಿರಂತರವಾದ ಕೆಲಸವಾಗಿದೆ. ಇದನ್ನು ಹಿಂದಿನಿಂದಲೂ ನಡೆಸಿಕೊಂಡು ಬರಲಾಗುತ್ತಿದೆ. ಟ್ರಾಫಿಕ್ ಹೆಚ್ಚಿರುವ ಕಡೆಗಳಲ್ಲಿ ಗುಂಡಿ ಮುಚ್ಚಲು ಸಮಸ್ಯೆ ಉಂಟಾಗುತ್ತಿದೆ. ರಾತ್ರಿವೇಳೆ ಕೆಲಸ ಕೈಗೊಂಡರೂ, ವಾಹನಗಳ ಓಡಾಟದಿಂದ ಗುಣಮಟ್ಟದ ಕೆಲಸ ಕಷ್ಟವಾಗುತ್ತಿದೆ. ‘ಗುಂಡಿ ಗಮನ’ ಆ್ಯಪ್‌ಗೆ ಅಪ್‌ಲೋಡ್ ಆಗುವ ದೂರುಗಳನ್ನು ಆಧರಿಸಿ ತ್ವರಿತ ಸ್ಪಂದನೆ ನೀಡಲಾಗುತ್ತಿದೆ. ಪ್ರಮುಖ ರಸ್ತೆಗಳಿಗೆ ಕಾಯಕಲ್ಪ ನೀಡುವುದೇ ರಸ್ತೆಗುಂಡಿ ಸಮಸ್ಯೆಗೆ ಶಾಶ್ವತ ಪರಿಹಾರ ಸಾಧ್ಯ.

- ಎಂ.ಮಹೇಶ್ವರ್ ರಾವ್, ಜಿಬಿಎ ಮುಖ್ಯ ಆಯುಕ್ತ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net