ಗದ್ದಿಗೌಡರಿಗೆ ಸಚಿವ ಸ್ಥಾನ ಸಿಗುತ್ತಾ, ಸಿಗಲ್ವಾ?

will-gaddigowda-get-a-ministerial-position
ಪಿ.ಸಿ.ಗದ್ದಿಗೌಡರ
Published on

ಬಾಗಲಕೋಟೆ: ಬಾಗಲಕೋಟೆ ಕ್ಷೇತ್ರದಲ್ಲಿ ಪಿ.ಸಿ.ಗದ್ದಿಗೌಡರ ಸತತ 5ನೇ ಸಲ ಸಂಸದರಾಗಿ ಪಾರ್ಲಿಮೆಂಟ್‌ಗೆ ತೆರಳಿದರೂ ಸದ್ಯದ ಸ್ಥಿತಿಯಲ್ಲಿ ಅವರಿಗೆ ಸಚಿವ ಸ್ಥಾನ ಸಿಗುವುದು ಕಷ್ಟ ಕಷ್ಟ ಎನ್ನುವ ಮಾಹಿತಿ ಬರುತ್ತಿದೆ.

ಭಾನುವಾರ 3ನೇ ಬಾರಿಗೆ ಪ್ರಧಾನಮಂತ್ರಿಯಾಗಿ ನರೇಂದ್ರ ಮೋದಿ ಅವರ ಪ್ರಮಾಣ ವಚನ ಸ್ವೀಕರಿಸಲಿದ್ದು, ಅವರೊಂದಿಗೆ ಸಚಿವರಾಗಿ ಪ್ರಮಾಣ ಸ್ವೀಕರಿಸುವ ಸೌಭಾಗ್ಯ ಯಾರಿಗೆ ಇದೆ ಎನ್ನುವುದು ಶನಿವಾರ ಸಂಜೆವರೆಗೂ ಸಂಸದರಿಗೆ ಮಾಹಿತಿ ಸಿಕ್ಕಿಲ್ಲ. ಸಚಿವ ಸ್ಥಾನದ ಆಕಾಂಕ್ಷಿಗಳು ಮಾತ್ರ ತಮಗೆ ಕರೆ ಬರಬಹುದು ಎನ್ನುವ ನಿರೀಕ್ಷೆಯಲ್ಲಿ ಕಾಯುತ್ತಲೇ ಇದ್ದಾರೆ ಎಂದು ದೆಹಲಿಯಲ್ಲಿ ಇರುವ ಬಿಜೆಪಿ ಮುಖಂಡರೊಬ್ಬರು ಹೇಳುತ್ತಾರೆ.

ಹಿರಿತನ ನೋಡಿದರೆ 5ನೇ ಸಲ ಸಂಸದರಾಗಿರುವ ಪಿ.ಸಿ.ಗದ್ದಿಗೌಡರ ಅವರಿಗೆ ಸಚಿವ ಸ್ಥಾನ ಸಿಗಬೇಕಿತ್ತು. ಆದರೆ, ಎನ್‌ಡಿಎ ಅಂಗ ಪಕ್ಷಗಳಿಗೂ ಹೆಚ್ಚಿನ ಸಚಿವ ಸ್ಥಾನ ಕೊಡಬೇಕಿರುವುದರಿಂದ ರಾಜ್ಯಕ್ಕೆ ಎಷ್ಟು ಸಚಿವ ಸ್ಥಾನ ಕೊಡುತ್ತಾರೆ ಎನ್ನುವುದು ಪಕ್ಕಾ ತಿಳಿಯುತ್ತಿಲ್ಲ. ಮಾಜಿ ಸಿಎಂ, ಜೆಡಿಎಸ್ ನಾಯಕ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಮಂತ್ರಿ ಪಟ್ಟ ಗ್ಯಾರಂಟಿ ಎನ್ನುವ ಮಾತುಗಳಷ್ಟೆ ದೆಹಲಿಯಲ್ಲಿ ಕೇಳಿ ಬರುತ್ತಿವೆ. ಉಳಿದಂತೆ ಬಿಜೆಪಿಯಿಂದ ರಾಜ್ಯದವರು ಯಾರು ಎನ್ನುವುದು ಶನಿವಾರ ಸಂಜೆವರೆಗೂ ನಿಗೂಢವಾಗಿಯೇ ಉಳಿದಿದೆ ಎನ್ನುತ್ತಾರೆ ಬಿಜೆಪಿಯ ಮಾಜಿ ಸಚಿವರೊಬ್ಬರು.

ಪಿ.ಸಿ.ಗದ್ದಿಗೌಡರಿಗೆ ಲಿಂಗಾಯತ ಕೋಟಾದಲ್ಲಿ ಕೊಡಬೇಕು. ಆದರೆ, ಆ ಕೋಟಾದಲ್ಲಿ ಸಚಿವ ಸ್ಥಾನಕ್ಕೆ ಇನ್ನಿಲ್ಲದ ಫೈಟ್ ನಡೆದಿದೆ. ಯಡಿಯೂರಪ್ಪ ಅವರ ಪುತ್ರ ಬಿ.ವೈ.ರಾಘವೇಂದ್ರ, ಹಿರಿಯ ನಾಯಕ ಸೋಮಣ್ಣ, ಮಾಜಿ ಸಿಎಂಗಳಾದ ಜಗದೀಶ ಶೆಟ್ಟರ್, ಬಸವರಾಜ ಬೊಮ್ಮಾಯಿ ಅವರು ಇದ್ದಾರೆ. ಆದರೆ, ವೈಯಕ್ತಿಕವಾಗಿ ತಮಗೆ ಸಚಿವ ಸ್ಥಾನ ನೀಡುವಂತೆ ಮೋದಿ ಅವರನ್ನಾಗಲಿ, ಅಮಿತ್ ಷಾ ಹಾಗೂ ರಾಷ್ಟ್ರೀಯ ಅಧ್ಯಕ್ಷರನ್ನು ಭೇಟಿ ಮಾಡಿ ಹೇಳಿಕೊಳ್ಳುವುದಾಗಲಿ, ಅಥವಾ ಆಕಾಂಕ್ಷಿಗಳ ಬೆಂಬಲಿಗರ ಒತ್ತಾಯ ಮಾಡುವುದಾಗಲಿ ಯಾವುದೇ ದೆಹಲಿ ಮಟ್ಟದಲ್ಲಿ ನಡೆದಿಲ್ಲ. ಅದೃಷ್ಟ ಇದ್ದವರಿಗೆ ಸಚಿವ ಸ್ಥಾನ ಸಿಗಬಹುದು. ಇಲ್ಲವೇ ಲಿಂಗಾಯತ ಕೋಟಾ ಸದ್ಯಕ್ಕೆ ಕೈತಪ್ಪಲು ಬಹುದು ಎಂದು ಹೇಳಲಾಗುತ್ತಿದೆ.

ಬಾಗಲಕೋಟೆ ಸಂಸದ ಪಿ.ಸಿ.ಗದ್ದಿಗೌಡರ ಹೆಸರು ಶನಿವಾರ ಸಂಜೆವರೆಗೂ ಬಲವಾಗಿ ಕೇಳಿ ಬರುತ್ತಿಲ್ಲವಾದರೂ ಇದೇ ವೇಳೆ ಮುಧೋಳದ ಮಾಜಿ ಶಾಸಕ, ಸದ್ಯ ಚಿತ್ರದುರ್ಗದಿಂದ ಗೆದ್ದಿರುವ ಮಾಜಿ ಡಿಸಿಎಂ ಗೋವಿಂದ ಕಾರಜೋಳ ಅವರಿಗೆ ದಲಿತ ಕೋಟಾದಲ್ಲಿ ಹೆಸರು ಓಡಾಡುತ್ತಿದೆ. ಆಡಳಿತ ಅನುಭವ, ಹಿರಿತನ, ದಲಿತ ನಾಯಕ ಹೀಗೆ ಎಲ್ಲದರಲ್ಲೂ ಅರ್ಹರಾಗಿರುವ ಕಾರಜೋಳ ಅವರಿಗೆ ಸಚಿವ ಸ್ಥಾನ ದೊರೆತರೂ ಅಚ್ಚರಿ ಇಲ್ಲ. ಹಾಗೆಯೇ ಹಿರಿಯ ಮುಖಂಡ ಪ್ರಲ್ಹಾದ ಜೋಶಿ ಅವರ ಹೆಸರು ಬಲವಾಗಿ ಕೇಳಿ ಬರುತ್ತಿದೆ. ಹೀಗಾಗಿ ರಾಜ್ಯದಲ್ಲಿ ಎಷ್ಟು ಜನರಿಗೆ ಸಚಿವ ಸ್ಥಾನ ಸಿಗಬಹುದು? ಅಲ್ಲದೆ, ಕರ್ನಾಟಕದಲ್ಲಿ ಸದ್ಯ ವಿಧಾನಸಭೆ ಚುನಾವಣೆ ಇಲ್ಲ. ಹೀಗಾಗಿ ಇಲ್ಲಿ ಅಬ್ಬಬ್ಬ ಅಂದರೂ ಇಬ್ಬರು ಇಲ್ಲವೆ ಮೂವರಿಗೆ ಅವಕಾಶ ಕೊಡಬಹುದು. ಇದರಲ್ಲಿ ಒಂದು ಸ್ಥಾನ ಕುಮಾರಸ್ವಾಮಿ ಅವರಿಗೆ. ಇನ್ನೆರಡು ಸಿಕ್ಕರೂ ಇದಕ್ಕೆ ಹತ್ತಕ್ಕೂ ಹೆಚ್ಚು ಜನರು ಆಕಾಂಕ್ಷಿಗಳು ಇದ್ದಾರೆ. ಹೀಗಾಗಿ ಹೈಕಮಾಂಡ್ ಒಲವು ಯಾರಿಗಿದೆ ಎನ್ನುವುದು ಭಾನುವಾರವೇ ಸ್ಪಷ್ಟವಾಗಲಿದೆ ಎಂದು ತಿಳಿದು ಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net