

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಗಣೇಶೋತ್ಸವ ಸಂದರ್ಭದಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿಒಪಿ)ಯಿಂದ ತಯಾರಿಸಿದ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆ ಸಂಪೂರ್ಣವಾಗಿ ನಿಷೇಧಿಸಲು ಹಾಗೂ ಕೃತಕ ಬಣ್ಣಗಳ ಬಳಕೆಯನ್ನು ಪತ್ತೆ ಹಚ್ಚಲು ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ಪ್ರತಿ ವಾರ್ಡ್ ಮಟ್ಟದಲ್ಲಿ ಹಾಗೂ ಜಿಲ್ಲೆಯಲ್ಲಿ ತಾಲೂಕು ಮಟ್ಟದಲ್ಲಿ ಅಧಿಕಾರಿಗಳ ಕಾರ್ಯಪಡೆ ರಚಿಸಲಾಗುವುದು ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ತಿಳಿಸಿದರು.
ಹುಬ್ಬಳ್ಳಿಯಲ್ಲಿ ಶುಕ್ರವಾರ ಗಣೇಶ ಚತುರ್ಥಿ ಹಬ್ಬದ ಆಚರಣೆ ಸಂದರ್ಭದಲ್ಲಿ ಅನುಸರಿಸಬೇಕಾದ ಮುಂಜಾಗೃತ ಕ್ರಮಗಳು ಮತ್ತು ಪಿಒಪಿ ವಿಗ್ರಹಗಳ ನಿಷೇಧದ ಬಗ್ಗೆ ಆಯೋಜಿಸಿದ್ದ ವಿವಿಧ ವರ್ತಕರ, ಮೂರ್ತಿ ಕಲಾವಿದರು, ಶಾಮಿಯಾನಾ ಸಪ್ಲೈಯರ್ಸ್ ಹಾಗೂ ಸಾರ್ವಜನಿಕರೊಂದಿಗೆ ಸಭೆ ನಡೆಸಿದ ಬಳಿಕ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಕಾರ್ಯಪಡೆಯಲ್ಲಿ ಪಾಲಿಕೆ ವಲಯ ಕಚೇರಿ ಸಹಾಯಕ ಆಯುಕ್ತರು, ವಾಣಿಜ್ಯ ತೆರಿಗೆ, ಕಂದಾಯ, ಪೊಲೀಸ್ ಹಾಗೂ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಇರಲಿದ್ದಾರೆ. ಧಾರವಾಡ ಜಿಲ್ಲೆಗೆ ಹೆಚ್ಚಿನ ಪ್ರಮಾಣದಲ್ಲಿ ಪಿಒಪಿ ಗಣೇಶ ಮೂರ್ತಿಗಳು ಹೊರರಾಜ್ಯ ಮತ್ತು ಹೊರ ಜಿಲ್ಲೆಗಳಿಂದ ಬರುತ್ತವೆ. ಈ ಕುರಿತು ಪರಿಶೀಲಿಸಲು ಚೆಕ್ ಪೋಸ್ಟ್ಗಳನ್ನು ಸ್ಥಾಪಿಸಲಾಗುವುದು ಎಂದು ಹೇಳಿದರು.
ಸಹಾಯವಾಣಿ ಸ್ಥಾಪನೆ
ಪಿಒಪಿ ಮೂರ್ತಿಗಳನ್ನು ತಯಾರಿಸುವವರ, ಮಾರಾಟಗಾರರ ಮಾಹಿತಿ ನೀಡಲು ಸಾರ್ವಜನಿಕರ ಉಪಯೋಗಕ್ಕೆ ಸಹಾಯವಾಣಿ ಸ್ಥಾಪಿಸಲಾಗಿದೆ. ಜಿಲ್ಲಾಧಿಕಾರಿಗಳ ಕಛೇರಿ: 0836-2233840, ಪಾಲಿಕೆ ಕಚೇರಿ: 9141051611, ಪೋಲಿಸ್ ಕಮಿಷನರ್ ಕಚೇರಿ: 0836-2222603 ಮತ್ತು 9480802002 ಗೆ ಸಂರ್ಪಸಿ ಮಾಹಿತಿ ನೀಡಬಹುದು. ಮಾಹಿತಿ ನೀಡುವವರ ಗೌಪ್ಯತೆಯನ್ನು ಕಾಪಾಡಲಾಗುವುದು ಎಂದರು.
ಸುಪ್ರೀಂ ಕೋರ್ಟ್ ಆದೇಶದಂತೆ ರಾತ್ರಿ 10 ಗಂಟೆಯ ಬಳಿಕ ಡಿಜೆ ಬಳಸಲು ಅವಕಾಶವಿಲ್ಲ. ಗಣೇಶ ಮೂರ್ತಿಗಳ ವಿಸರ್ಜನಾ ಮೆರವಣಿಗೆಯನ್ನು ಆದಷ್ಟು ಬೇಗ ಮುಗಿಸಬೇಕು. ಸಾರ್ವಜನಿಕ ಗಣೆಶೊತ್ಸವ ಮಂಡಳಿಗಳ ಸಲಹೆಯಂತೆ ಗಣೇಶ ಪೆಂಡಾಲ್ಗಳಲ್ಲಿ ಡ್ರಗ್ಸ್ ವಿರೋಧಿ ಹಾಗೂ ಸೈಬರ್ ಅಪರಾಧ ಜಾಗೃತಿ ಮಾಹಿತಿ ಇರುವ ಬ್ಯಾನರಗಳನ್ನು ಅಳವಡಿಸಲಾಗುತ್ತದೆ ಎಂದು ತಿಳಿಸಿದರು.
914 ಸಾರ್ವಜನಿಕ ಗಣೇಶ
ಸಭೆಯಲ್ಲಿ ಮಾತನಾಡಿದ ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ, ಈ ವರ್ಷ ಹು-ಧಾ ಅವಳಿ ನಗರದ ಸುಮಾರು 914 ಸ್ಥಳಗಳಲ್ಲಿ ಸಾರ್ವಜನಿಕ ಗಣೇಶೋತ್ಸವ ಮಂಡಳಗಳು ಮೂರ್ತಿ ಪ್ರತಿಸ್ಠಾಪನೆ ಮಾಡಲಿವೆ. ಅವಳಿ ನಗರದ 6 ಸ್ಥಳಗಳಲ್ಲಿ ಸಾರ್ವಜನಿಕ ಗಣೇಶ ವಿಸರ್ಜನೆಗೆ ಬಾವಿ, ಸ್ಥಳಗಳನ್ನು ಗುರುತಿಸಲಾಗಿದೆ. ಪ್ರತಿ ವರ್ಷದಂತೆ ಒಟ್ಟು 9 ಸಂಚಾರಿ ವಿಸರ್ಜನಾ ಟ್ಯಾಂಕ್ಗಳನ್ನು ವ್ಯವಸ್ಥೆ ಮಾಡಲಾಗುತ್ತದೆ. ಸಾರ್ವಜನಿಕರ ಬೇಡಿಕೆಗೆ ಅನುಗುಣವಾಗಿ ಹೆಚ್ಚುವರಿ ನೀರಿನ ಟ್ಯಾಂಕ್ಗಳನ್ನು ಕಲ್ಪಿಸಲಾಗುವುದು ಎಂದರು.
ಮಾಲಿನ್ಯ ನಿಯಂತ್ರಣ ಮಂಡಳಿ ಹಿರಿಯ ಪರಿಸರ ಅಧಿಕಾರಿ ಜಗದೀಶ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಪಾಲಿಕೆಯ ಇಇ ಮಲ್ಲಿಕಾರ್ಜುನ ಬಿ.ಎಂ. ನಿರೂಪಿಸಿದರು.
ಪೊಲೀಸ್ ಆಯುಕ್ತ ಎನ್. ಶಿವಕುಮಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಗೋಪಾಲ ಬ್ಯಾಕೋಡ, ಡಿಸಿಪಿ ಮಹಾನಿಂಗ ನಂದಗಾಂವಿ ಇದ್ದರು. ಡಿಜೆ ಮಾಲೀಕರ ಅಸೋಸಿಯೇಷನ್, ಮೂರ್ತಿ ತಯಾರಕರು, ಮಾರಾಟಗಾರರು, ಸಾರ್ವಜನಿಕ ಗಣೇಶೋತ್ಸವ ಸಮಿತಿ ಪ್ರಮುಖರು, ಸಾರ್ವಜನಿಕರು ಸಭೆಯಲ್ಲಿ ಭಾಗವಹಿಸಿದ್ದರು.