

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:
ನ್ಯಾ. ಸದಾಶಿವ ಆಯೋಗದ ವರದಿ ಜಾರಿಗೆ ವಿರೋಧಿಸುತ್ತಿರುವ ಭೋವಿ, ವಡ್ಡರ, ಕೊರಚ, ಕೊರಮ, ಭಜಂತ್ರಿ ಮತ್ತು ಲಂಬಾಣಿ ಸಮುದಾಯದ ಮುಖಂಡರು ನ. 30ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ಬಳಿಕ ಮುಂದಿನ ಹೋರಾಟ ನಡೆಸಲು ನಿರ್ಧರಿಸಿದ್ದಾರೆ.
ಇಲ್ಲಿಯ ನವನಗರದಲ್ಲಿನ ಬಂಜಾರ ಭವನದಲ್ಲಿ ಸೋಮವಾರ ನ್ಯಾ. ಸದಾಶಿವ ಆಯೋಗದ ವರದಿ ವಿರೋಧಿಸಿ ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟದ ನೇತೃತ್ವದಲ್ಲಿ ಸಮಾಜದ ಮುಖಂಡರ ಹುಬ್ಬಳ್ಳಿ ವಿಭಾಗ ಮಟ್ಟದ ಸಭೆ ನಡೆಯಿತು.
ನ್ಯಾ. ಸದಾಶಿವ ಆಯೋಗದ ವರದಿ ಅವೈಜ್ಞಾನಿಕವಾಗಿದ್ದು, ಇದನ್ನು ನಾವು ಖಡಾಖಂಡಿತವಾಗಿ ವಿರೋಧಿಸುತ್ತೇವೆ. ನ. 30ರಂದು ಮುಖ್ಯಮಂತ್ರಿಯವರು ಮಾತುಕತೆಗೆ ಕರೆದಿದ್ದಾರೆ. ನಮ್ಮ ಹಕ್ಕೊತ್ತಾಯಗಳಿಗೆ ಮುಖ್ಯಮಂತ್ರಿಯವರಿಂದ ಸೂಕ್ತ ಸ್ಪಂದನೆ ಸಿಗದಿದ್ದರೆ ಬೆಳಗಾವಿಯಲ್ಲಿ ನಡೆಯಲಿರುವ ಚಳಗಾಲದ ಅಧಿವೇಶನದ ವೇಳೆ ಯಾವ ರೀತಿ ಹೋರಾಟ ನಡೆಸಬೇಕು ಎಂಬುದನ್ನು ನಿರ್ಧರಿಸುತ್ತೇವೆ ಎಂದು ಅಖಿಲ ಭಾರತ ಬಂಜಾರ ಸೇವಾ ಸಮಿತಿ ಕರ್ನಾಟಕ ಅಧ್ಯಕ್ಷ ಪಾಂಡುರಂಗ ಪಮ್ಮಾರ ತಿಳಿಸಿದ್ದಾರೆ.
ಭೋವಿ, ವಡ್ಡರ, ಕೊರಚ, ಕೊರಮ, ಭಜಂತ್ರಿ ಮತ್ತು ಲಂಬಾಣಿ ಸಮುದಾಯದವರು 2012ರಿಂದ ಒಳ ಮೀಸಲಾತಿ ವಿರೋಧಿಸಿ ಸಾಕಷ್ಟು ಹೋರಾಟ ನಡೆಸುತ್ತಿದ್ದೇವೆ. ಈ ನಡುವೆ ರಾಜ್ಯ ಸರ್ಕಾರದ ಕೆಲ ಸಚಿವರು ಆಯೋಗದ ವರದಿಯನ್ನು ಬೆಳಗಾವಿ ಅಧಿವೇಶನದಲ್ಲಿ ಜಾರಿಗೊಳಿಸಿ ಎಂದು ಹೇಳಿಕೆ ನೀಡುತ್ತಿರುವುದು ಖಂಡನೀಯ. ಆಂಧ್ರಪ್ರದೇಶ ಸರ್ಕಾರ ಒಳ ಮೀಸಲಾತಿ ಜಾರಿ ಮಾಡಲು ಹೋಗಿ ಎಡವಿದ್ದು, ಮದ್ರಾಸ್ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಅಲ್ಲಿನ ಸರ್ಕಾರಕ್ಕೆ ಛೀಮಾರಿ ಹಾಕಿದೆ ಎಂದು ಹೇಳಿದ್ದಾರೆ.
ಒಕ್ಕೂಟದ ಗೌರವಾಧ್ಯಕ್ಷರು, ಮಾಜಿ ಸಚಿವ ಅರವಿಂದ ಲಿಂಬಾವಳಿ, ಕಾರ್ಯಾಧ್ಯಕ್ಷ ಎನ್. ಅನಂತನಾಯ್ಕ, ಆದರ್ಶ ಯಲ್ಲಪ್ಪ, ಶಿವಾನಂದ ಭಜಂತ್ರಿ, ಬಲರಾಮ ನಾಯ್ಕ, ಡಾ. ರಾಜ ನಾಯ್ಕ, ರವಿ ಪೂಜಾರ್, ಕೃಷ್ಣಾಜಿ ಚವ್ಹಾಣ, ವೆಂಕಟೇಶ ಮೇಸ್ತ್ರಿ, ದಾನಪ್ಪ ಕಬ್ಬೆರ, ಶಶಿ ಬಿಜವಾಡ, ಮಂಜುನಾಥ ಭೋವಿ, ಮಂಗಲಪ್ಪ ಲಮಾಣಿ, ಹರಿಲಾಲ ಪವಾರ, ಯಮನೂರ ಗುಡಿಹಾಳ, ಸುಭಾಸ ಮಲ್ನಾಡ,ನಾರಾಯಣ ಭಜಂತ್ರಿ, ಇತರರು ಇದ್ದರು. ಧಾರವಾಡ, ಹಾವೇರಿ, ಗದಗ, ಉತ್ತರ ಕನ್ನಡ ಜಿಲ್ಲೆಗಳಿಂದ ಸಮಾಜದ ಮುಖಂಡರು ಭಾಗವಹಿಸಿದ್ದರು.