ಸಿಎಂಗೆ ಮನವರಿಕೆ ಮಾಡುತ್ತೇವೆ

hk PATIL
Published on

ಹುಬ್ಬಳ್ಳಿ: ಮೋಡ ಬಿತ್ತನೆ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಯಾರೋ ತಪ್ಪು ಮಾಹಿತಿ ನೀಡಿರಬಹುದು. ಮೋಡ ಬಿತ್ತನೆಯು ಪರಿಣಾಣಕಾರಿ ಎಂದು ಮುಖ್ಯಮಂತ್ರಿಗೆ ಮನವರಿಕೆ ಮಾಡುವ ಪ್ರಯತ್ನ ಮಾಡುತ್ತೇವೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಎಚ್.ಕೆ. ಪಾಟೀಲ ಹೇಳಿದರು.

ಹುಬ್ಬಳ್ಳಿಯಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೋಡ ಬಿತ್ತನೆಯು ಸ್ಥಾಪಿತ ವೈಜ್ಞಾನಿಕ ಪ್ರಯೋಗವಾಗಿದೆ. ನಾವು ಅಧಿಕಾರದಲ್ಲಿದ್ದಾಗ 2003, 2008 ಹಾಗೂ 2017-18ರಲ್ಲಿ ನಡೆಸಿದ ಮೋಡ ಬಿತ್ತನೆ ಯಶಸ್ಸು ಕಂಡಿದೆ. ಇದರಿಂದ ರೈತರಿಗೆ ಅನುಕೂಲವಾಗಿದೆ ಎಂದರು.

ಬರ ಪೀಡಿತ ತಾಲೂಕುಗಳೆಂದು ಘೊಷಿಸಲು ರೂಪಿಸಿದ್ದ ಮಾನದಂಡವನ್ನು ಕೇಂದ್ರ ಸರ್ಕಾರ 2016ರಲ್ಲಿ ಬದಲಾವಣೆ ಮಾಡಿ ರೈತರಿಗೆ ತೀವ್ರ ಅನ್ಯಾಯ ಮಾಡಿದೆ. ಮೊದಲು ವಾಡಿಕೆಗಿಂತ ಶೇ. 20ರಷ್ಟು ಮಳೆ ಕೊರತೆಯಾದರೆ ಬರ ಪೀಡಿತ ತಾಲೂಕು ಎಂದು ಘೊಷಿಸಬಹುದಿತ್ತು. ಆದರೆ, ವಾಡಿಕೆಗಿಂತ ಶೇ. 60ರಷ್ಟು ಮಳೆ ಕೊರತೆಯಾಗಬೇಕು ಹಾಗೂ 3 ವಾರಗಳ ಕಾಲ ಮಳೆಯಾಗಬಾರದು ಎಂದು ಬದಲಾಯಿಸಲಾಗಿದೆ. ಈ ರೈತ ವಿರೋಧಿ ನಿಯಮಾವಳಿಗಳನ್ನು ಬದಲಾಯಿಸಬೇಕು ಎಂದು ಮುಖ್ಯಮಂತ್ರಿ ಪತ್ರ ಬರೆದಿದ್ದಾರೆ ಎಂದು ಹೇಳಿದರು.

ಉದ್ಯಮಿಗಳ ಸಾಲ ಮನ್ನಾ ಮಾಡುವ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಅಸೂಯೆಯಿಂದ ನೋಡುತ್ತಿದೆ. ಉದ್ಯಮಿಗಳ ಸಾಲ ಮನ್ನಾ ಮಾಡಿದರೆ ದೇಶದ ಆರ್ಥಿಕತೆಗೆ ತೊಂದರೆ ಆಗುವುದಿಲ್ಲವೇ ? ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಿಧಾನ ಪರಿಷತ್ ಸದಸ್ಯ, ಬಿಜೆಪಿಯ ಪ್ರದೀಪ ಶೆಟ್ಟರ್ ನನ್ನನ್ನು ಭೇಟಿ ಮಾಡಿಲ್ಲ. ಅವರು ಕಾಂಗ್ರೆಸ್​ಗೆ ಬರುವುದಾದರೆ ಪಕ್ಷದ ನಾಯಕರು ನಿರ್ಧಾರ ಮಾಡುತ್ತಾರೆ. ರಾಜ್ಯದಲ್ಲಿ ಬಿಜೆಪಿಯ ಸಂಘಟನೆ ಅಸ್ತವ್ಯಸ್ತಗೊಂಡಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net