ವಿಜಯಪುರ ಮೀಸಲು ಕ್ಷೇತ್ರದಿಂದ ಸ್ಪರ್ಧಿಸುವೆ

Will contest from Vijayapura Reserve Constituency
ವಿಜಯಪುರದ ಖಾಸಗಿ ಹೋಟೆಲ್‌ನಲ್ಲಿ ಶುಕ್ರವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡ ಹಾಗೂ ಅಖಿಲ ಭಾರತ ಬಂಜಾರ ಸೇವಾ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ ಬಲರಾಮ ಪುರಪ್ಪ ನಾಯಕ ಮಾತನಾಡಿದರು. ಜೈ ಜವಾನ್ ಜೈ ಕಿಸಾನ್ ಸಂಘದ ಅಧ್ಯಕ್ಷ ಮೋತಿಲಾಲ್ ಚವ್ಹಾಣ, ಜಿ.ಪಂ. ಮಾಜಿ ಸದಸ್ಯೆ ರುಕ್ಮಿಣಿ ಚವ್ಹಾಣ ಇದ್ದರು.
Published on

ವಿಜಯಪುರ: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ವಿಜಯಪುರ ಮೀಸಲು ಕ್ಷೇತ್ರದಿಂದ ಸ್ಪರ್ಧಿಸುವ ಆಸೆಯನ್ನು ಹೊಂದಿದ್ದೇನೆ ಎಂದು ಕಾಂಗ್ರೆಸ್ ಮುಖಂಡ ಹಾಗೂ ಅಖಿಲ ಭಾರತ ಬಂಜಾರ ಸೇವಾ ಮಹಾಸಭೆ ರಾಷ್ಟ್ರೀಯ ಅಧ್ಯಕ್ಷ ಬಲರಾಮ ಪುರಪ್ಪ ನಾಯಕ ಹೇಳಿದರು.

ಶುಕ್ರವಾರ ವಿಜಯಪುರ ನಗರದ ಖಾಸಗಿ ಹೋಟೆಲ್‌ನಲ್ಲಿ ಆಯೋಜಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಪಕ್ಷದಲ್ಲಿ ಸಾಮಾನ್ಯ ಕಾರ್ಯಕರ್ತನಿಂದ ಹಿಡಿದು ವಿವಿಧ ಹುದ್ದೆಗಳನ್ನು ಅಲಂಕರಿಸಿದ್ದೇನೆ.

ಸಂಸತ್‌ನಲ್ಲಿ ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳನ್ನು ಸಮರ್ಥವಾಗಿ ವಾದಿಸುವುದು ನನ್ನ ಕನಸು. ಈ ನಿಟ್ಟಿನಲ್ಲಿ ಟಿಕೆಟ್‌ಗಾಗಿ ವರಿಷ್ಠರಲ್ಲಿ ಮನವಿ ಮಾಡಿರುವುದಾಗಿ ಹೇಳಿದರು.

ಶಾಸಕ ಎಂ.ಪಿ. ನಾಡಗೌಡ ಅವರ ತಂದೆ ಪಿ.ಎಂ. ನಾಡಗೌಡ ಅವರ ಕೃಪೆಯಿಂದ ನಾನು ರಾಜಕೀಯ ಕ್ಷೇತ್ರದಲ್ಲಿ ಕಾಲಿಟ್ಟಿದ್ದೇನೆ. ಅವರ ಅನ್ನದ ಖುಣ ನನ್ನ ಮೇಲಿದೆ. ಪಕ್ಷದ ವರಿಷ್ಠರು ಟಿಕೆಟ್ ನೀಡಿದರೆ ಗೆಲ್ಲುವ ವಿಶ್ವಾಸವಿದೆ. ಬೇರೆಯವರಿಗೆ ಟಿಕೆಟ್ ನೀಡಿದರೂ ಅವರ ಗೆಲುವಿಗೂ ಶ್ರಮ ವಹಿಸುತ್ತೇನೆ ಎಂದರು.

ವಿಜಯಪುರ ಮತ್ತು ಬಾಗಲಕೋಟೆ ಕ್ಷೇತ್ರದಲ್ಲಿ ಅತಿರಥ ಮಹಾರಥರನ್ನು ಚುನಾವಣೆಯಲ್ಲಿ ಗೆಲ್ಲಿಸುವಲ್ಲಿ ಶ್ರಮವಹಿಸಿದ್ದೇನೆ. ನನಗೆ ಎಲ್ಲ ಜಾತಿಯವರ ಬೆಂಬಲವಿದೆ. ಟಿಕೆಟ್ ನೀಡಿದರೆ ಖಂಡಿತವಾಗಿ ಗೆಲುವು ಸಾಧಿಸುತ್ತೇನೆ ಎನ್ನುವ ವಿಶ್ವಾಸವಿದೆ ಎಂದು ಹೇಳಿದರು.

ಹಾಲಿ ಸಂಸದ ರಮೇಶ ಜಿಗಜಿಣಗಿ ಸಂಸತ ಅಧಿವೇಶನದಲ್ಲಿ ಧ್ವನಿ ಎತ್ತುತ್ತಿಲ್ಲ. ಕೇವಲ ಯಪ್ಪಾ, ಯಣ್ಣಾ ಎಂದು ವಿಜಯಪುರ ಕ್ಷೇತ್ರದಿಂದ ಎರಡು ಬಾರಿ ಸಂಸದರಾಗಿ ಆಯ್ಕೆಯಾಗಿದ್ದಾರೆ.

ಜನ ಅವರನ್ನು ಯಾವ ಮಾನದಂಡದ ಮೇಲೆ ಗೆಲ್ಲಿಸುತ್ತಾರೆ? ಎನ್ನುವುದು ಇಲ್ಲಿಯವರೆಗೆ ನನಗೆ ಗೊತ್ತಾಗುತ್ತಿಲ್ಲ ಎಂದರು. ಆದರೆ ಇಲ್ಲಿ ನಾನು ಯಾರನ್ನೂ ಟೀಕೆ ಮಾಡಲು ಹೋಗುವುದಿಲ್ಲ. ಅವರ ನಸೀಬು ಚೆನ್ನಾಗಿದೆ ಎಂದಷ್ಟೇ ಹೇಳುವೆ ಎಂದರು.

ಸುದ್ದಿಗೋಷ್ಠಿಯಲ್ಲಿ ಜೈ ಜವಾನ ಜೈ ಕಿಸಾನ ಸಂಘದ ಅಧ್ಯಕ್ಷ ಮೋತಿಲಾಲ್ ಚವ್ಹಾಣ, ಜಿ.ಪಂ. ಮಾಜಿ ಸದಸ್ಯೆ ರುಕ್ಮಿಣಿ ಚವ್ಹಾಣ, ಆಶಾ ರಿಷಲ್‌ದಾರ, ಕಲ್ಲೇಶ ಶಹಾಪೇಟೆ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net