ಗೆದ್ದ ಕ್ಷೇತ್ರ ತ್ಯಾಗ ಮಾಡುವುದೇ ಬಿಜೆಪಿ?

Published on

ಜೆಡಿಎಸ್​ & ಭಾಜಪ ಮೈತ್ರಿಗೆ ಕಮಲ ಪಾಳಯದಲ್ಲಿ ಆತಂಕ | ಲೋಕಸಭೆ ಚುನಾವಣೆಗೆ ಸಿದ್ಧತೆ

ಕೋಲಾರ: ಬಿಜೆಪಿ, ಜೆಡಿಎಸ್​ ಮೈತ್ರಿ ಖಾತ್ರಿಯಾಗುತ್ತಿದ್ದಂತೆ ಕೋಲಾರ ಮೀಸಲು ಲೋಕಸಭಾ ಕ್ಷೇತ್ರವನ್ನು ಜೆಡಿಎಸ್​ಗೆ ಬಿಟ್ಟುಕೊಡಬಹುದು ಎಂಬ ಮಾತುಗಳು ಬಿಜೆಪಿಯಲ್ಲಿ ಕೇಳಿಬರುತ್ತಿದ್ದು, ಸಂಸದ ಎಸ್​.ಮುನಿಸ್ವಾಮಿ ಮತ್ತು ಕೇಸರಿ ಪಡೆಗೆ ಆತಂಕದ ಕಾಮೋರ್ಡ ಕವಿದಂತಾಗಿದೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕ್ಷೇತ್ರದ 8 ವಿಧಾನಸಭಾ ಕ್ಷೇತ್ರಗಳಲ್ಲಿ ಖಾತೆ ತೆರೆಯದ ಬಿಜೆಪಿ ಸೋಲಿನ ಆಘಾತದಿಂದ ಇನ್ನೂ ಚೇತರಿಸಿಕೊಂಡಿಲ್ಲ. ಆದರೆ ಸಂಸದ ಎಸ್​.ಮುನಿಸ್ವಾಮಿ ಪಕ್ಷ ಸಂಘಟನೆಗೆ ಶ್ರಮಿಸುತ್ತಿದ್ದು, ಒಂದು ವೇಳೆ ವರಿಷ್ಠರು ಕ್ಷೇತ್ರವನ್ನು ಜೆಡಿಎಸ್​ಗೆ ಬಿಟ್ಟುಕೊಟ್ಟರೆ ಮುಂದೆ ಪಕ್ಷ ಅಸ್ತಿತ್ವ ಉಳಿಸಿಕೊಳ್ಳುವುದು ಕಷ್ಟ ಎಂಬ ಅಭಿಪ್ರಾಯ ಕಮಲಪಾಳಯದಲ್ಲಿ ಮೂಡಿದೆ.
ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವ ಅಮಿತ್​ ಷಾ ಜತೆ ನವದೆಹಲಿಯಲ್ಲಿ ಮಾಜಿ ಪ್ರಧಾನಿ, ಜೆಡಿಎಸ್​ ವರಿಷ್ಠ ದೇವೇಗೌಡ ಅವರು ಮೈತ್ರಿಗೆ ಮಾತುಕತೆ ನಡೆಸಿ ಜೆಡಿಎಸ್​ ಕೇಳಿರುವ 4 ಕ್ಷೇತ್ರಗಳಲ್ಲಿ ಕೋಲಾರವೂ ಒಂದು ಎನ್ನಲಾಗುತ್ತಿದ್ದು, ಮೊದಲ ಬಾರಿಗೆ ಕಮಲ ಅರಳಿರುವ ಕ್ಷೇತ್ರವನ್ನು ವರಿಷ್ಠರು ಮೈತ್ರಿ ಪಕ್ಷಕ್ಕೆ ತ್ಯಾಗ ಮಾಡುವರೆೇ ಎಂಬ ಪ್ರಶ್ನೆ ಎಲ್ಲೆಡೆ ಮೂಡುತ್ತಿದೆ. ಜಿಲ್ಲೆಯ 6 ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ 2 ಕ್ಷೇತ್ರಗಳು ಕೋಲಾರ ಲೋಕಸಭಾ ವ್ಯಾಪ್ತಿಗೆ ಬರುತ್ತವೆ. ವಿಧಾನಸಭಾ ಚುನಾವಣೆಯಲ್ಲಿ ಮುಳಬಾಗಿಲು, ಶ್ರೀನಿವಾಸಪುರ ಮತ್ತು ಶಿಡ್ಲಘಟ್ಟದಲ್ಲಿ ಜೆಡಿಎಸ್​ ಗೆದ್ದಿದ್ದು, ಮಾಲೂರು, ಕೆಜಿಎಫ್​ ಹೊರತುಪಡಿಸಿ ಉಳಿದೆಲ್ಲ ಕ್ಷೇತ್ರಗಳಲ್ಲಿ 2ನೇ ಸ್ಥಾನದಲ್ಲಿದೆ. ಇವೆರಡು ಕ್ಷೇತ್ರಗಳಲ್ಲಿ ಬಿಜೆಪಿ ಪ್ರಬಲವಾಗಿದೆ. ಮೈತ್ರಿಯಾದರೆ ಬಿಜೆಪಿ ಸಾಂಪ್ರದಾಯಿಕ ಮತಗಳು, ಮೋದಿಯವರ ಪ್ರಭಾವದಿಂದ ಜೆಡಿಎಸ್​ ಅಭ್ಯರ್ಥಿ ಗೆಲುವು ಸಾಧಿಸಬಹುದು. ಹೀಗಾಗಿ ಜೆಡಿಎಸ್​ಗೆ ಕ್ಷೇತ್ರ ಬಿಟ್ಟುಕೊಟ್ಟರೆ ಗೆಲುವು ನಿಶ್ಚಿತ ಎಂಬುದು ಜೆಡಿಎಸ್​ ನಾಯಕರ ಅಭಿಪ್ರಾಯವಾಗಿದೆ.
ಗೆದ್ದ ಕ್ಷೇತ್ರವನ್ನು ತ್ಯಾಗ ಮಾಡುವುದಾದರೆ ಇನ್ನೂ ಹಲವು ಕಾರಣಗಳು ಇಲ್ಲದಿಲ್ಲ. ಅವುಗಳಲ್ಲಿ ಪ್ರಮುಖವಾಗಿ ಕ್ಷೇತ್ರದಲ್ಲಿ ಈ ಹಿಂದೆ ಕಾಂಗ್ರೆಸ್​ ಪ್ರಬಲವಾಗಿದ್ದು, 7 ಬಾರಿ ಗೆದ್ದಿದ್ದ ಕೆ.ಎಚ್​.ಮುನಿಯಪ್ಪ ಶಾಸಕರನ್ನು ಕಡೆಗಣಿಸುತ್ತಿದ್ದರೆಂದು ಮಾಜಿ ಸ್ಪೀಕರ್​ ರಮೇಶ್​ ಕುಮಾರ್​ ನೇತೃತ್ವದಲ್ಲಿ ಘಟಬಂಧನ್​ ಟೀಂ ಕಟ್ಟಿಕೊಂಡು ಕಾಂಗ್ರೆಸ್ಸಿಗರೇ ಅವರನ್ನು ಸೋಲಿಸಿದ್ದರು. ಈ ತಂಡದಲ್ಲಿ ಶಾಸಕರಾದ ಕೆ.ವೈ.ನಂಜೇಗೌಡ, ಎಸ್​.ಎನ್​.ನಾರಾಯಣಸ್ವಾಮಿ, ಕೊತ್ತೂರು ಮಂಜುನಾಥ್​, ಸಚಿವ ಡಾ.ಎಂ.ಸಿ.ಸುಧಾಕರ್​, ಮಾಜಿ ಶಾಸಕ ಕೆ.ಶ್ರೀನಿವಾಸಗೌಡ, ವಿ.ಮುನಿಯಪ್ಪ, ಎಂಎಲ್ಸಿ ಅನಿಲ್​ ಕುಮಾರ್​ ಸೇರಿದಂತೆ ಬಹುತೇಕ ಕಾಂಗ್ರೆಸ್ಸಿಗರು ಇದ್ದು, ಬಿಜೆಪಿ ಅಭ್ಯರ್ಥಿ ಎಸ್​.ಮುನಿಸ್ವಾಮಿ ಅವರನ್ನು ಗೆಲ್ಲಿಸಿದ್ದರು. ಈ ಪರಿಣಾಮವಾಗಿಯೇ ಕ್ಷೇತ್ರದಲ್ಲಿ ಮೊದಲ ಬಾರಿಗೆ ಬಿಜೆಪಿ ಖಾತೆ ತೆರೆಯುವಂತಾಗಿತ್ತು. ಇದರಿಂದ ಬೇಸತ್ತಿದ್ದ ಕೆ.ಎಚ್​.ಮುನಿಯಪ್ಪ ಬೆಂಬಲಿಗರು ಮತ್ತು ಘಟಬಂಧನ್​ ಟೀಂ ನಡುವೆ ವಿಧಾನಸಭಾ ಚುನಾವಣೆಗೆ ಮುನ್ನ ಭಿನ್ನಮತ ಭುಗಿಲೆದ್ದು ಹಾದಿಬೀದಿ ರಂಪಾಟವಾಗಿತ್ತು. ಇದೇ ಕಾರಣಕ್ಕೆ ಸಿದ್ದರಾಮಯ್ಯ ಕೋಲಾರದಲ್ಲಿ ಸ್ಪರ್ಧಿಸುವ ತೀಮಾರ್ನದಿಂದ ಹಿಂದೆ ಸರಿದಿದ್ದರು ಎಂಬುದು ತಿಳಿದ ಸಂಗತಿ.
ಕಡೆಗೆ ಕೆ.ಎಚ್​.ಮುನಿಯಪ್ಪ ಬೆಂಗಳೂರು ಗ್ರಾಮಾಂತರದ ದೇವನಹಳ್ಳಿಯಿಂದ ವಿಧಾನಸಭೆಗೆ ಸ್ಪರ್ಧಿಸಿ ಸಚಿವರಾದರು. ಆದರೆ ಕಾಂಗ್ರೆಸ್​ನೊಳಗಿನ ಇವೆರಡು ಬಣಗಳ ನಡುವಿನ ತಿಕ್ಕಾಟ ಮಾತ್ರ ಮುಗಿಯಲಿಲ್ಲ. ಈಗಲೂ ಪರಸ್ಪರ ಕೆಸರೆರಚಾಟ ಮುಂದುವರಿದಿದ್ದು, ಲೋಕಸಭಾ ಚುನಾವಣೆಗೆ ಜೆಡಿಎಸ್​ ಅಭ್ಯರ್ಥಿ ಸ್ಪರ್ಧಿಸಿದರೆ ಖಂಡಿತಾ ಗೆಲುವು ಸಾಧಿಸಬಹುದು ಎಂದು ತೆನೆ ಪಾಳಯ ಪ್ರತಿಪಾದಿಸುತ್ತಿದ್ದರೆ, ಕಾಂಗ್ರೆಸ್​ ಗ್ಯಾರಂಟಿಗಳು ಮತ್ತು ಮುಸ್ಲಿಮರ ಸಾರಾಸಗಟು ಮತಗಳು ದಕ್ಕಿದ್ದರಿಂದ ಲೋಕಸಭಾ ಕ್ಷೇತ್ರದ 5 ಕಡೆ ಆ ಪಕ್ಷ ಗೆದ್ದಿದೆ. ಆದರೆ ಲೋಕಸಭಾ ಚುನಾವಣೆ ಹಾಗಾಗುವುದಿಲ್ಲ. ದೇಶ, ಧರ್ಮ, ಮೋದಿ ಪ್ರಭಾವ ಮತ್ತು ಜನರ ಕೈಗೆ ಸುಲಭವಾಗಿ ಸಿಗುವ, 27 ವರ್ಷದ ಕಾಂಗ್ರೆಸ್​ ಸಂಸದರ ಕಾಲದಲ್ಲಿ ಆಗದಷ್ಟು ಅಭಿವೃದ್ಧಿ ಮಾಡಿರುವ ಸಂಸದ.ಎಸ್​.ಮುನಿಸ್ವಾಮಿ ಅವರು ಈ ಬಾರಿ ಅನಾಯಾಸವಾಗಿ ಗೆಲ್ಲುತ್ತಾರೆ. ಅವರಿಗೆ ಪಕ್ಷ ಟಿಕೆಟ್​ ನಿರಾಕರಿಸುವುದಿಲ್ಲ. ಬಿಜೆಪಿ ದುರ್ಬಲವಾಗಿರುವ ಕಡೆ ಜೆಡಿಎಸ್​ಗೆ ಸ್ಥಾನ ಬಿಟ್ಟುಕೊಡುವ ಸಾಧ್ಯತೆ ಇದೆ ಎಂಬ ಮಾತುಗಳು ಬಿಜೆಪಿ ವಲಯದಿಂದ ಕೇಳಿಬರುತ್ತಿವೆ. ಬಿಜೆಪಿ ಹೊರತುಪಡಿಸಿದರೆ ಕಾಂಗ್ರೆಸ್​, ಜೆಡಿಎಸ್​ ಲೋಕಸಭಾ ಚುನಾವಣೆಗೆ ಇನ್ನೂ ಸಜ್ಜಾಗಿಲ್ಲ. ಪ್ರಮುಖವಾಗಿ ಈ ಪಕ್ಷಗಳಿಂದ ಅಭ್ಯರ್ಥಿಗಳು ಯಾರೆಂದು ರ್ನಿಣಯವಾಗಿಲ್ಲ. ಬಿಜೆಪಿ ಕ್ಷೇತ್ರ ಬಿಟ್ಟುಕೊಡದಿದ್ದರೆ ಹಾಲಿ ಸಂಸದ ಎಸ್​.ಮುನಿಸ್ವಾಮಿ ಮತ್ತೆ ಕಣಕ್ಕಿಳಿಯುವುದರಲ್ಲಿ ಅನುಮಾನವಿಲ್ಲ. ಆದರೆ ಕ್ಷೇತ್ರ ಜೆಡಿಎಸ್​ಗೆ ನಿಗದಿಯಾಗಿದ್ದೇ ಆದರೆ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಆತ್ಮೀಯ ಶಾಸಕ ಸಮೃದ್ಧಿ ಮಂಜುನಾಥ್​ ಕಣಕ್ಕಿಳಿಯಬಹುದು ಎನ್ನಲಾಗುತ್ತಿದೆ. ಕಾಂಗ್ರೆಸ್​ನಿಂದ ಪ್ರಬಲ ಅಭ್ಯರ್ಥಿ ಕಣಕ್ಕಿಳಿಸಲಾಗುವುದು ಎಂದು ಮುಖಂಡರು ಹೇಳುತ್ತಿದ್ದಾರೆ. ಆದರೆ ಅಭ್ಯರ್ಥಿ ಯಾರೆಂದು ರ್ನಿಣಯಿಸಿ ವಾರದೊಳಗೆ ಬನ್ನಿ ಎಂದು ಸಿಎಂ ಸಿದ್ದರಾಮಯ್ಯ ಜಿಲ್ಲಾ ನಾಯಕರಿಗೆ ಟಾಸ್ಕ್​ ನೀಡಿದ್ದು, ತಿಂಗಳ ಮೇಲಾದರೂ, ಯಾರು ಅಭ್ಯರ್ಥಿ ಎಂಬುದು ಇನ್ನೂ ನಿರ್ಧರಿಸಿಲ್ಲ. ಟಿಕೆಟ್​ ಆಕಾಂಕ್ಷಿಗಳ ಸುಳಿವೂ ಇಲ್ಲ.

ಮೋದಿಯವರು ಮತ್ತೆ ಪ್ರಧಾನಿಯಾಗಬೇಕು ಎಂಬ ನಿಟ್ಟಿನಲ್ಲಿ ನಾವೆಲ್ಲ ದುಡಿಯುತ್ತಿದ್ದೇವೆ. ಇದಕ್ಕೆ ಪಕ್ಷಾತಿತವಾಗಿ ಜನ ಬೆಂಬಲಿಸುತ್ತಿದ್ದು, ಮುಂಬರುವ ಚುನಾವಣೆಯಲ್ಲಿ ಕೋಲಾರದಲ್ಲಿ ಗೆಲುವು ನಿಶ್ಚಿತ. ಮೈತ್ರಿಗೆ ಮುಂದಾಗಿರುವ ಜೆಡಿಎಸ್​ ಕೋಲಾರ, ಚಿಕ್ಕಬಳ್ಳಾಪುರ ಸೇರಿದಂತೆ ಇನ್ನೂ ಹಲವು ಕ್ಷೇತ್ರಗಳನ್ನು ಕೇಳಿರುವುದು ನಿಜ. ಹಾಗೆಂದು ಕ್ಷೇತ್ರ ಬಿಟ್ಟುಕೊಡುವ ತೀಮಾರ್ನಕ್ಕೆ ಪಕ್ಷ ಬಂದಿಲ್ಲ. ಒಂದು ವೇಳೆ ಬಿಟ್ಟುಕೊಡುವುದಾದರೆ ನನ್ನ ಬಳಿ ಹೈಕಮಾಂಡ್​ ಚರ್ಚಿಸುತ್ತದೆ. ದೇಶದ ಒಳ್ಳೆಯದಕ್ಕೆ ಸಹಕರಿ ಸುವವರಿಗೆ ನಮ್ಮ ಬೆಂಬಲ ಸದಾ ಇರುತ್ತದೆ. ಹೈಕಮಾಂಡ್​ ತೆಗೆದುಕೊಳ್ಳುವ ತೀಮಾರ್ನಕ್ಕೆ ಬದ್ಧ. | ಎಸ್​.ಮುನಿಸ್ವಾಮಿ, ಸಂಸದರು, ಕೋಲಾರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net