ಮತ್ತೆ ಪಾರಮ್ಯ ಸಾಧಿಸುತ್ತದೆಯೇ ಬಿಜೆಪಿ?

KDR STORY
Published on

ಕಡೂರು: ಮತದಾನದ ದಿನಾಂಕ ಸಮೀಪಿಸುತ್ತಿದ್ದಂತೆ ಲೋಕಸಭಾ ಚುನಾವಣಾ ಕಣವು ದಿನ ಕಳೆದಂತೆ ರಂಗೇರುತ್ತಿದ್ದು, ಮತದಾರರ ಸೆಳೆಯಲು ಅಭ್ಯರ್ಥಿಗಳ ಕಸರತ್ತು ಬಿರುಸುಗೊಂಡಿದೆ. ಆದರೆ ಹಾಸನ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಕಡೂರು ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರು ಬಿಜೆಪಿಯ ಸಾಂಪ್ರದಾಯಿಕ ಮತಗಳನ್ನು ಸೆಳೆದುಕೊಳ್ಳುವಲ್ಲಿ ಸಫಲರಾಗುತ್ತಾರಾ ಎಂಬ ಬಿಸಿ ಬಿಸಿ ಚರ್ಚೆ ಎಲ್ಲೆಡೆ ಆರಂಭಗೊಂಡಿದೆ.
ಕಡೂರು ಕ್ಷೇತ್ರದಲ್ಲಿ ಬಿಜೆಪಿಯ ಸಾಂಪ್ರದಾಯಿಕ ಮತಗಳಿದ್ದು, ಪ್ರತಿ ಚುನಾವಣೆಯಲ್ಲೂ ಕ್ಷೇತ್ರದಲ್ಲಿ ಇನ್ನುಳಿದ ಪಕ್ಷದ ಅಭ್ಯರ್ಥಿಗಳಿಗಿಂತ ಸಾಮಾನ್ಯವಾಗಿ ಬಿಜೆಪಿ ಅಭ್ಯರ್ಥಿಗೆ ಲೀಡ್ ದೊರೆತಿದೆ. ಆದರೆ ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಬದಲಿಗೆ ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್ ಕಣದಲ್ಲಿದ್ದು, ಇದೀಗ ಸಾಂಪ್ರದಾಯಿಕ ಮತಗಳನ್ನು ಜೆಡಿಎಸ್ ಕಡೆಗೆ ವಾಲಿಸುವುದು ಬಿಜೆಪಿ ನಾಯಕರಿಗೆ ಸವಾಲಾಗಿ ಪರಿಣಮಿಸಿದೆ.
2019ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಎ.ಮಂಜು ಕಡೂರು ಕ್ಷೇತ್ರದಲ್ಲಿ 75,874 ಮತ ಪಡೆದಿದ್ದರೆ, ಅಂದು ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಂಡು ಕಣಕ್ಕೆ ಇಳಿದಿದ್ದ ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್ ರೇವಣ್ಣ 12,019 ಮತಗಳನ್ನು ಮಾತ್ರ ಪಡೆದಿದ್ದರು. ಇದು ಕ್ಷೇತ್ರದಲ್ಲಿನ ಬಿಜೆಪಿಯ ಶಕ್ತಿಗೆ ಸಾಕ್ಷಿಯಾಗಿದೆ. ಆದರೆ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಅಂದು ಕಾಂಗ್ರೆಸ್ ಜತೆ ದೋಸ್ತಿ ಮಾಡಿಕೊಂಡಿದ್ದ ಜೆಡಿಎಸ್ ಇದೀಗ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದೆ. ಅಭ್ಯರ್ಥಿಯಾಗಿ ಪ್ರಜ್ವಲ್ ರೇವಣ್ಣ ಅವರೇ ಕಣದಲ್ಲಿದ್ದಾರೆ.
ಬಿಜೆಪಿ-ಜೆಡಿಎಸ್ ನಾಯಕರು ಒಗ್ಗಟ್ಟು ಪ್ರದರ್ಶಿಸುವ ಮೂಲಕ ಎದುರಾಳಿಗೆ ಸವಾಲು ಹಾಕಿದ್ದಾರೆ. ಈ ಬಾರಿಯೂ ಜಯ ಸಾಧಿಸಲೇಬೇಕೆಂದು ಗುರು-ಶಿಷ್ಯರಾದ ವೈಎಸ್‌ವಿ ದತ್ತ ಮತ್ತು ಬೆಳ್ಳಿಪ್ರಕಾಶ್ ಟೊಂಕ ಕಟ್ಟಿಕೊಂಡು ಗ್ರಾಮಾಂತರದಲ್ಲಿ ಪ್ರಜ್ವಲ್ ಪರ ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ಆದರೆ ಜೀವನದಲ್ಲಿ ಒಮ್ಮೆಯೂ ಬೇರೆ ಪಕ್ಷಗಳಿಗೆ ಮತ ಹಾಕದೆ ಕೇವಲ ಬಿಜೆಪಿಯನ್ನು ಮಾತ್ರವೇ ನೆಚ್ಚಿಕೊಂಡಿರುವ ಅದೃಶ್ಯ ಮತದಾರರನ್ನು ಕಮಲದ ಗುರುತಿನಿಂದ ತೆನೆ ಹೊತ್ತ ಮಹಿಳೆ ಗುರುತಿನ ಕಡೆಗೆ ಪರಿವರ್ತಿಸುವುದು ಬಿಜೆಪಿ ಮತ್ತು ಜೆಡಿಎಸ್ ನಾಯಕರಿಗೆ ಸತ್ವಪರೀಕ್ಷೆಯಾಗಿದೆ. ಮತದಾರರ ಮನವೊಲಿಸುವ ದೊಡ್ಡ ಟಾಸ್ಕನ್ನು ಉಭಯ ಪಕ್ಷಗಳ ನಾಯಕರು ಹೇಗೆ ನಿಭಾಯಿಸುತ್ತಾರೆ ಎಂಬುದನ್ನು ಕಾದುನೋಡಬೇಕಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net