ವಿಶ್ವಗುರುವಾಗಲಿದೆ ಭಾರತ

5Anand7
ರಾಮ ಮಾಧವ
Published on

ಬೆಳಗಾವಿ: ಮುಂದಿನ ದಿನಗಳಲ್ಲಿ ಭಾರತ ವಿಶ್ವಗುರುವಾಗಿ ಹೊರಹೊಮ್ಮಲಿದೆ ಎಂದು ಇಂಡಿಯನ್ ಫೌಂಡೇಷನ್ ಅಧ್ಯಕ್ಷ ಮತ್ತು ಬಿಜೆಪಿ ನಾಯಕ ರಾಮ ಮಾಧವ ಹೇಳಿದರು.

ನಗರದಲ್ಲಿ ಪ್ರಬುದ್ಧ ಭಾರತ ಮತ್ತು ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ದೀನ ದಯಾಳ ಪೀಠದ ಸಹಯೋಗದಲ್ಲಿ ಕೆಎಲ್‌ಇ ಸೆಂಟನರಿ ಕನವೆನ್ಷನ್ ಸೆಂಟರ್‌ದಲ್ಲಿ ಶನಿವಾರ ಜರುಗಿದ ಎರಡು ದಿನದ ಏಕಾತ್ಮ ಮಾನವ ದರ್ಶನ ವಿಷಯದ ವಿಚಾರ ಸಂಕಿರಣದಲ್ಲಿ ಭಾರತ ಮತ್ತು ವಿದೇಶಾಂಗ ನೀತಿ ಎಂಬ ವಿಷಯದ ಕುರಿತು ಮಾತನಾಡಿದರು.

ವಿದೇಶಾಂಗ ನೀತಿ ಅತ್ಯಂತ ಜಟಿಲ ಕಾರ್ಯ. ಸ್ವಾತಂತ್ರ್ಯ ನಂತರ ಅಲಿಪ್ತ ನೀತಿ ಪರಿಣಾಮ ಭಾರತ ಮೂರನೇ ಪ್ರತ್ಯೇಕ ಬಣದ ರಾಷ್ಟ್ರವಾಗಿ ಗುರುತಿಸಿಕೊಂಡಿತು. ಆದರೆ, ಇಂದು ಭಾರತ ಎಲ್ಲ ರಾಷ್ಟ್ರಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಿದೆ ಎಂದರು. ಪ್ರಜಾಪ್ರಭುತ್ವದ ನಾಲ್ಕನೇ ಅಂಗ ಪತ್ರಿಕೋದ್ಯಮ ವಿಷಯದ ಕುರಿತು ನಿರೂಪಕ ಅಜಿತ್ ಹನುಮಕ್ಕನವರ ಮಾತನಾಡಿ, ತಿಂಗಳಿಗೊಮ್ಮೆ ಭ್ರಷ್ಟ ರಾಜಕಾರಣಿ, ಅಧಿಕಾರಿ, ಭೂಗತ ಜಗತ್ತಿನಿಂದ ಬೆದರಿಕೆ ಕರೆಗಳು ಬಂದಾಗಲೇ ನಾನು ಚೆನ್ನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ಇದು ನನಗೆ ಸಮಾಧಾನ ತಂದಿದೆ. ಬೆದರಿಕೆಗಳು ಪತ್ರಕರ್ತರಿಗೆ ಪ್ರಶಸ್ತಿ ಮತ್ತು ಸನ್ಮಾನ ಪತ್ರವಿದ್ದಂತೆ ಎಂದು ಹೇಳಿದರು.

ಪತ್ರಿಕಾರಂಗವು ಸಮಾಜದ ಉನ್ನತಿಗೆ ಶ್ರಮಿಸುತ್ತದೆ. ಶಾಸಕಾಂಗ ಮತ್ತು ಕಾರ್ಯಾಂಗ ತಪ್ಪು ದಾರಿಯಲ್ಲಿ ಸಾಗಿದರೆ ಚುರುಕು ಮುಟ್ಟಿಸುತ್ತದೆ ಎಂದರು. ಜಸ್ಟಿಸ್ ಅರವಿಂದ ಪಾಶ್ಚಾಪುರೆ ಮಾತನಾಡಿದರು. ಉದ್ಯಮಿ ಯಜ್ಞನಾರಾಯಣ ಕಮ್ಮಾಜೆ, ಆರ್‌ಸಿಯು ಕುಲಪತಿ ಪ್ರೊ.ಸಿ.ಎಂ.ತ್ಯಾಗರಾಜ, ಪ್ರಬುದ್ಧ ಭಾರತದ ಸಹಸಂಯೋಜಕ ಅಪ್ಪಯ್ಯ ರಾಮರಾವ್, ಪ್ರೊ. ಬಿ.ಎಸ್. ನಾವಿ, ಡಾ. ಶಿವಲಿಂಗಯ್ಯ ಗೋಠೆ, ಡಾ. ಅನಿಲಕುಮಾರ ಗರರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net