ಹೆಚ್ಚಿನ ಸೌಲಭ್ಯಕ್ಕೆ ಪ್ರಾಮಾಣಿಕ ಪ್ರಯತ್ನ

kmcri 2
Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಕರ್ನಾಟಕ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆ (ಕೆಎಂಸಿಆರ್​ಐ)ಯ ವೈದ್ಯಕೀಯ ಚಿಕಿತ್ಸೆಯ ಗುಣಮಟ್ಟ ಸಾಕಷ್ಟು ಸುಧಾರಿಸಿದೆ. ಮುಂಬರುವ ದಿನಗಳಲ್ಲಿ ಇನ್ನು ಹೆಚ್ಚಿನ ಸೌಲಭ್ಯ ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಪಕ್ಷಬೇಧ ಮರೆತು ಸಾರ್ವಜನಿಕರ ಹಿತಾಸಕ್ತಿಯಿಂದ ಈ ಸಂಸ್ಥೆಯನ್ನು ಬೆಳೆಸುವ ಅವಶ್ಯಕತೆ ಇದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ ಹೇಳಿದರು.

ಶುಕ್ರವಾರ ಆಯೋಜಿಸಿದ್ದ ಕೆಎಂಸಿ ಸಂಸ್ಥಾಪನಾ ದಿನಾಚರಣೆ ಹಾಗೂ ಕೆಎಂಸಿಆರ್​ಐ ನಾಮಕರಣ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಕೋವಿಡ್ ಸಂದರ್ಭದಲ್ಲಿ ಅಂದಿನ ಕಿಮ್್ಸ ಉತ್ತಮ ಕೆಲಸ ಮಾಡಿದೆ. ರೋಬಾಟಿಕ್ ಸರ್ಜರಿ, ಪೆಟ್ ಸಿಟಿ ಸ್ಕ್ಯಾನ್, ಇನ್ನಿತರ ಸೌಲಭ್ಯಗಳ ಬಗ್ಗೆ ಇಲ್ಲಿಯ ವೈದ್ಯರು ಮನವಿ ಮಾಡಿದ್ದಾರೆ. ನಿಮ್ಮ ಅಪೇಕ್ಷೆಗಳು, ಬೇಡಿಕೆಗಳು ನನ್ನ ಮನಸ್ಸಿನಲ್ಲಿ ಇರಲಿದೆ ಎಂದರು.

ರಾಜ್ಯದಲ್ಲಿ ಒಟ್ಟು 71 ವೈದ್ಯಕೀಯ ಕಾಲೇಜ್​ಗಳಿವೆ. ಜಿಲ್ಲೆಗೊಂದು ವೈದ್ಯಕೀಯ ಕಾಲೇಜ್ ಸ್ಥಾಪನೆ ಮಾಡಿದ ಪರಿಣಾಮ ವೈದ್ಯಕೀಯ ಶಿಕ್ಷಣ ಪ್ರವೇಶಾತಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸರ್ಕಾರಿ ಸೀಟುಗಳು ಲಭ್ಯವಿದೆ. ಇದರಿಂದ ಗ್ರಾಮೀಣ ಭಾಗದ ಜನರು ವೈದ್ಯರಾಗುವ ಅವಕಾಶಗಳು ಸೃಷ್ಟಿಯಾಗಿವೆ. ಮುಂದೆ ಇವರು ಗ್ರಾಮೀಣ ಭಾಗದಲ್ಲಿ ವೈದ್ಯಕೀಯ ಸೇವೆಗೆ ಮುಂದಾಗಬಲ್ಲರೆಂಬ ಭಾವನೆ ನಮ್ಮದು ಎಂದು ಹೇಳಿದರು.

ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಪ್ರಸಾದ ಅಬ್ಬಯ್ಯ ಮಾತನಾಡಿ, ಇಂದು ವೈದ್ಯಕೀಯ ಚಿಕಿತ್ಸೆ ದುಬಾರಿಯಾಗಿದೆ. ಬಡವರು, ಮಧ್ಯಮ ವರ್ಗದ ಜನರಿಗೆ ವೈದ್ಯಕೀಯ ಚಿಕಿತ್ಸೆ ನಿಲುಕದಂತಾಗಿದೆ. ವೈದ್ಯರನ್ನು ದೇವರೆಂದೇ ಜನರು ಭಾವಿಸುತ್ತಾರೆ. ಅವರಿಗೆ ಉತ್ತಮ ಆರೋಗ್ಯ ಸೇವೆ ನೀಡಲು ವೈದ್ಯರು ಸನ್ನದ್ಧರಾಗಬೇಕು. ಸರ್ಕಾರದ ಯೋಜನೆಗಳಡಿ ಕಡು ಬಡವರಿಗೆ ಗುಣಮಟ್ಟದ ಆರೋಗ್ಯ ಸೇವೆ ನೀಡಬೇಕಾಗುತ್ತದೆ ಎಂದರು.

ಶಾಸಕ ಮಹೇಶ ಟೆಂಗಿನಕಾಯಿ ಅಧ್ಯಕ್ಷತೆ ವಹಿಸಿದ್ದರು.

ಶಾಸಕರಾದ ಎನ್.ಎಚ್. ಕೋನರಡ್ಡಿ, ಡಾ. ಚಂದ್ರು ಲಮಾಣಿ, ಹುಡಾ ಅಧ್ಯಕ್ಷ ಸಾಕೀರ ಸನದಿ, ಮಾಜಿ ಸಂಸದ ಐ.ಜಿ. ಸನದಿ, ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ, ಧಾರವಾಡ ಗ್ರಾಮೀಣ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅನಿಲಕುಮಾರ ಪಾಟೀಲ, ಪಾಲಿಕೆ ಸದಸ್ಯೆ ರೂಪಾ ಶೆಟ್ಟಿ, ಡಿಮ್ಹಾನ್ಸ್ ನಿರ್ದೇಶಕ ಡಾ. ಅರುಣಕುಮಾರ ಇದ್ದರು.

2024ರ ನೀಟ್ ಪಿಜಿ ಯಲ್ಲಿ ಅಖಿಲ ಭಾರತ ಮಟ್ಟದಲ್ಲಿ 3ನೇ ರ್ಯಾಂಕ್ ಪಡೆದ ಡಾ. ಸಾಯಿಕುಮಾರ ಸಾಧುನವರ ಹಾಗೂ 36ನೇ ರ್ಯಾಂಕ್ ಪಡೆದ ಡಾ. ಅರ್ಪಿತ ಭಟ್ಟ ಅವರನ್ನು ಸನ್ಮಾನಿಸಲಾಯಿತು.

ಪ್ರಾಚಾರ್ಯ ಡಾ. ಈಶ್ವರ ಹೊಸಮನಿ ಸ್ವಾಗತಿಸಿದರು. ಕಿಮ್್ಸ ನಿರ್ದೇಶಕ ಡಾ. ಎಸ್. ಎಫ್. ಕಮ್ಮಾರ ಪ್ರಾಸ್ತಾವಿಕವಾಗಿ ಮಾತನಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net