ವನ್ಯಜೀವಿ-ಮಾನವ ಸಂಘರ್ಷ ತಡೆಗೆ ಸಭೆ

wildlife meet
Published on

ಮಡಿಕೇರಿ:

ಸಂಪಾಜೆ ಹೋಬಳಿಯ ಸಂಪಾಜೆ, ಚೆಂಬು, ಪೆರಾಜೆ ಭಾಗದಲ್ಲಿ ಜನಸಾಮಾನ್ಯರನ್ನು ಕಾಡುತ್ತಿರುವ ವನ್ಯಜೀವಿ-ಮಾನವ ಸಂಘರ್ಷಕ್ಕೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಮಂಗಳವಾರ ಸಂಪಾಜೆ ಗ್ರಾ.ಪಂ. ಸಭಾಭವನದಲ್ಲಿ ಸಭೆ ಆಯೋಜಿಸಲಾಗಿತ್ತು. ವಿರಾಜಪೇಟೆ ಶಾಸಕ ಎ.ಎಸ್ ಪೊನ್ನಣ್ಣ ಸೂಚನೆ ಹಿನ್ನೆಲೆಯಲ್ಲಿ ನಡೆದ ಈ ಸಭೆಯಲ್ಲಿ ರಾಜ್ಯ ವನ್ಯಜೀವಿ ಮಂಡಳಿ ಸದಸ್ಯ ಸಂಕೇತ್ ಪೂವಯ್ಯ, ಎಸಿಎಫ್ ಮೋಷಿನ್ ಭಾಷಾ ಪಾಲ್ಗೊಂಡಿದ್ದರು.

ಕೊಡಗು ಸಂಪಾಜೆ, ಪೆರಾಜೆ, ಚೆಂಬು ಗ್ರಾಮದಲ್ಲಿ ಆನೆ, ಮಂಗ ಹಾಗೂ ಇತರ ವನ್ಯ ಪ್ರಾಣಿಗಳಿಂದ ಕೃಷಿಕರು ಅನುಭವಿಸುತ್ತಿರುವ ಹಾವಳಿಯ ಸಮಸ್ಯೆ, ವಿದ್ಯುತ್, ನೆಟ್ ವರ್ಕ್ ಹಾಗೂ ಇತರ ಮೂಲಭೂತ ಸಮಸ್ಯೆಗಳಿಗೆ ಅರಣ್ಯ ಇಲಾಖೆ ವತಿಯಿಂದ ಆಗುತ್ತಿರುವ ವಿಳಂಬದ ಬಗ್ಗೆ ಗ್ರಾಮಸ್ಥರು ಸಭೆಯ ಗಮನಕ್ಕೆ ತಂದರು.

ಸ್ಥಳೀಯರಾದ ಸೂರಜ್ ಹೊಸೂರು, ಬಿ.ಎ. ಗಣಪತಿ, ಗಿರೀಶ್ ಹೊಸೂರು ಮತ್ತಿತರರು ಮಾತನಾಡಿ ಸ್ಥಳೀಯ ಸಮಸ್ಯೆಗಳನ್ನು ತೆರೆದಿಟ್ಟರು.

ಈ ವೇಳೆ ಮಾತನಾಡಿದ ಸಂಕೇತ್ ಪೂವಯ್ಯ ಈ ಎಲ್ಲಾ ಸಮಸ್ಯೆಗಳ ಅರಿವು ಶಾಸಕ ಎ.ಎಸ್. ಪೊನ್ನಣ್ಣ ಅವರಿಗೆ ಇದೆ. ಇದನ್ನು ಬಗೆಹರಿಸುವ ನಿಟ್ಟಿನಲ್ಲಿ ಅವರು ಪ್ರಯತ್ನ ನಡೆಸಿದ್ದಾರೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಅರಣ್ಯ ಸಚಿವರು, ಮುಖ್ಯಮಂತ್ರಿಗಳಿಗೆ ಅನೇಕ ಶಿಫಾರಸ್ಸುಗಳನ್ನು ಮಾಡಲಾಗಿದೆ. ಈಗಾಗಲೇ 50 ಕ್ಕೂ ಅಧಿಕ ಸಭೆಗಳನ್ನು ಕೇಂದ್ರ ಸ್ಥಾನದಲ್ಲಿ ನಡೆಸಿ ಸೂಕ್ತ ಮಾರ್ಗಗಳ ಬಗ್ಗೆ ಚಿಂತನೆ ನಡೆಸಲಾಗಿದೆ.

ಆನೆಗಳು ನಾಡಿಗೆ ಬರುವುದನ್ನು ತಡೆಯಲು ರೈಲ್ವೇ ಬ್ಯಾರಿಕೇಡ್ ಅಳವಡಿಕೆ, ಆನೆ ಹಾಗೂ ಇತರ ಪ್ರಾಣಿಗಳ ಚಲನವಲವನ್ನು ಗುರುತು ಹಿಡಿಯಲು ಸೋಲಾರ್ ಚಾಲಿತ ಕ್ಯಾಮೆರಗಳ ಬಳಕೆ, ಆನೆಗಳ ಹಾವಳಿ ತಡೆಗಟ್ಟಲು ಸೋಲಾರ್ ದೀಪಗಳ ಅಳವಡಿಕೆ, ಈ ಭಾಗದ ರೈತರಿಗೆ ಪ್ರಮುಖವಾಗಿ ಕಾಡುತ್ತಿರುವ ಮಂಗಗಳ ಹಾವಳಿಯಿಂದ ಬಚಾವ್ ಮಾಡಲು ಮಂಕಿ ಟಾಸ್ಕ್ ಫೋರ್ಸ್ ರಚನೆ, ವನ್ಯಪ್ರಾಣಿಗಳಿಂದ ಆದ ಬೆಳೆ ನಷ್ಟಕ್ಕೆ ಅತಿ ಶೀಘ್ರದಲ್ಲಿ ಪರಿಹಾರ ಒದಗಿಸುವುದು ಮತ್ತಿತರ ಕ್ರಮಗಳ ಚರ್ಚೆ ನಡೆದಿದೆ ಎಂದು ಮಾಹಿತಿ ನೀಡಿದರು.

ಪಯಸ್ವಿನಿ ಸಹಕಾರ ಸಂಘದ ನಿರ್ದೇಶಕ ಗಣಪತಿ ಬಿ.ಎ, ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಸದಸ್ಯ ಸುರೇಶ್ ಪಿ.ಎಲ್, ಮನು ಪೆರುಮುಂಡ, ಪರಮಾಲೆ ಗಣೇಶ್, ಸಂಪಾಜೆ ಅರಣ್ಯ ಸಮಿತಿ ಅಧ್ಯಕ್ಷ ಕೆ.ಕೆ. ವಿಜಯ ಕುಮಾರ್ ಕನ್ಯಾನ, ಮಡಿಕೇರಿ ಅಕ್ರಮ ಸಕ್ರಮ ಸಮಿತಿ ಸದಸ್ಯೆ ತುಳಸಿ ಗಾಂಧಿ ಪ್ರಸಾದ್, ಪ್ರಮುಖರಾದ ರವಿರಾಜ್ ಹೊಸೂರು, ರಿತಿನ್ ಡೆಮ್ಮಲೆ, ಮೊಯಿದ್ದೀನ್,ತಿರುಮಲ ಸೋನ, ಹನೀಫ್ ಕೊಯನಾಡು ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net