ವಸ್ತುಪ್ರದರ್ಶನಕ್ಕೆ ಲಗ್ಗೆ ಇಟ್ಟಿವೆ ವನ್ಯಜೀವಿಗಳು!

1665571724538
Published on


ಬೇಟೆಗೆ ಸಂಚು ರೂಪಿಸುತ್ತಿದ್ದಾನೆ ಹುಲಿರಾಯ ಘೀಳಿಟ್ಟು ಆತಂಕ ಹುಟ್ಟಿಸುತ್ತಿದ್ದಾನೆ ಗಜರಾಜ
ಪಕ್ಷಿಗಳ ಕಲರವ, ಜಿಂಕೆಗಳ ವಿಹಾರ ಕಾನನ ಸೋಬಗು ನೋಡಲು ನಯನ ಮನೋಹರ

ಅವಿನಾಶ್ ಜೈನಹಳ್ಳಿ ಮೈಸೂರು
ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಸಫಾರಿ ಪ್ರಿಯರಿಗೆ ಆಗಾಗ ದರ್ಶನ ನೀಡುತ್ತಿರುವ ‘ಕಪ್ಪು ಚಿರತೆ’ ಸಾಂಸ್ಕೃತಿಕ ನಗರಿಯಲ್ಲಿ ದಿಢೀರ್ ಪ್ರತ್ಯಕ್ಷವಾಗಿದೆ!
ಅಷ್ಟೇ ಅಲ್ಲ, ಈ ಕಪ್ಪು ಚಿರತೆಯ ಜತೆ ಹುಲಿರಾಯ, ಒಂಟಿ ಸಲಗ, ಜಿಂಕೆಗಳು, ಕಾಳಿಂಗ ಸರ್ಪವೂ ಕಾಣಿಸಿಕೊಂಡಿದೆ. ಇಷ್ಟು ಪ್ರಾಣಿಗಳು ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದರೂ ಯಾವುದೇ ಉಪಟಳ ನೀಡದೆ ಎಲ್ಲರಿಗೂ ಖುಷಿ ಮಾತ್ರ ನೀಡುತ್ತಿವೆ…


ಅಯ್ಯೋ, ಏನಿದು? ಅರಮನೆ ನಗರಿ ಮೈಸೂರಿಗೆ ಮತ್ತೆ ಕಾಡುಪ್ರಾಣಿಗಳು ಲಗ್ಗೆ ಇಟ್ಟವಾ ಎಂದು ಗಾಬರಿಗೊಳ್ಳಬೇಡಿ. ಅಂದಹಾಗೆ ಈ ಬಾರಿಯ ದಸರಾ ವಸ್ತುಪ್ರದರ್ಶನ ಆವರಣದಲ್ಲಿ ಅರಣ್ಯ ಇಲಾಖೆ ನಿರ್ಮಿಸಿರುವ ಮಳಿಗೆಯೊಳಗೆ ಪುಟ್ಟ ಕಾಡು ಸೃಷ್ಟಿಸಲಾಗಿದೆ. ಈ ಕಾಡಿನೊಳಗೆ ನಿರ್ಮಿಸಿರುವ ವನ್ಯಜೀವಿ ಪ್ರತಿಕೃತಿಗಳು ಗಮನ ಸೆಳೆಯುತ್ತಿವೆ.
ಅರಣ್ಯ ಇಲಾಖೆಯ ಮಳಿಗೆ ಒಳಗೆ ಕಾಲಿಟ್ಟೊಡನೆ ಯಾವುದೋ ದಟ್ಟ ಕಾಡಿಗೆ ಹೋದ ಅನುಭವವಾಗುತ್ತದೆ. ಮದವೇರಿದ ಆನೆಯಣ್ಣ ಘೀಳಿಟ್ಟು ಆತಂಕ ಹುಟ್ಟಿಸುತ್ತಿದ್ದಾನೆ. ಸೌಮ್ಯ ಸ್ವಭಾವದ ಜಿಂಕೆಗಳು ನಲಿಯುತ್ತಿದ್ದರೆ, ಹುಲಿರಾಯ ಬೇಟೆಗೆ ಸಂಚು ರೂಪಿಸುತ್ತಿರುವ ಪ್ರತಿಕೃತಿಗಳನ್ನು ಕಾಣಬಹುದಾಗಿದೆ.


ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಕಬಿನಿ ವ್ಯಾಪ್ತಿಯಲ್ಲಿ ಆಗಾಗ ದರ್ಶನ ನೀಡುವ ಕಪ್ಪು ಚಿರತೆಯ ಪ್ರತಿಕೃತಿ ವಿಶೇಷತೆಯಿಂದ ಕೂಡಿದ್ದು, ಹೆಚ್ಚು ಗಮನ ಸೆಳೆಯುತ್ತಿದೆ. ಈ ಮಳಿಗೆಯಲ್ಲಿ ಕಾಡುಪ್ರಾಣಿ-ಪಕ್ಷಿಗಳು, ನಾನಾ ಬಗೆಯ ಸಸ್ಯಗಳ ಕುರಿತು ಮಾಹಿತಿ ನೀಡಲಾಗಿದೆ. ಜಿಂಕೆ, ಆನೆ, ಹಾವು, ಕಾಳಿಂಗಸರ್ಪ, ಹುಲಿ, ಚಿರತೆ, ನರಿ, ಕೋತಿ, ಮುಳ್ಳುಹಂದಿ ಸೇರಿದಂತೆ ಅನೇಕ ಪ್ರಾಣಿಗಳ ಪ್ರತಿಕೃತಿಗಳನ್ನು ಮರಗಳ ಮಧ್ಯೆ ನಿರ್ಮಿಸಲಾಗಿದೆ. ಇವುಗಳ ಜತೆಗೆ ಕಾಡಿನಲ್ಲಿ ಜರಿ-ತೊರೆ ಹಾಗೂ ಗುಹೆಗಳನ್ನು ನಿರ್ಮಿಸಿರುವುದು ಖುಷಿ ನೀಡುತ್ತದೆ.

ಪ್ರಾಣಿಗಳ ಘರ್ಜನೆಯೂ ಕೇಳುತ್ತದೆ:
ವಸ್ತುಪ್ರದರ್ಶನ ವೀಕ್ಷಣೆಗೆ ಸಾರ್ವಜನಿಕರು ಹೆಚ್ಚಾಗಿ ಸಂಜೆ ವೇಳೆ ಭೇಟಿ ನೀಡುತ್ತಾರೆ. ಆದ್ದರಿಂದ ಅರಣ್ಯ ಇಲಾಖೆಯ ಮಳಿಗೆಯ ಒಳಗೆ ಲೈಟಿಂಗ್ಸ್ ವ್ಯವಸ್ಥೆ ಮಾಡಲಾಗಿದೆ. ಪ್ರತಿಯೊಂದು ಪ್ರಾಣಿಯ ಬಳಿಯೂ ಬಣ್ಣ ಬಣ್ಣದ ಲೈಟ್‌ಗಳನ್ನು ಅಳವಡಿಸಲಾಗಿದೆ. ವಿಶೇಷವಾಗಿ ಎಲ್ಲ ಪ್ರಾಣಿಗಳ ಪ್ರತಿಕೃತಿಗಳ ಬಳಿಯೂ ಆಯಾ ಪ್ರಾಣಿಯ ಗರ್ಜನೆಯ ಶಬ್ದ ಹೊರ ಬರುವ ರೀತಿ ಮಾಡಲಾಗಿದೆ. ಹುಲಿಯ ಗರ್ಜನೆ, ಆನೆಯ ಘೀಳು, ಕೋತಿಗಳ ಕಿರುಚಾಟ ಎಲ್ಲವೂ ಕೇಳುತ್ತದೆ.


ಗಮನ ಸೆಳೆಯುತ್ತಿರುವ ಆದಿವಾಸಿಗಳು:
ಮಳಿಗೆಯಲ್ಲಿ ಕಾಡುಪ್ರಾಣಿಗಳ ಪ್ರತಿಕೃತಿ ಬಿಟ್ಟರೆ ಆದಿವಾಸಿಗಳ ಪ್ರತಿಕೃತಿ ಹೆಚ್ಚು ಗಮನ ಸೆಳೆಯುತ್ತಿದೆ. ಆದಿವಾಸಿಗಳ ಗುಡಿಸಲುಗಳನ್ನು ನಿರ್ಮಿಸಲಾಗಿದೆ. ಅದರೊಳಗೆ ಮತ್ತು ಹೊರಗೆ ಆದಿವಾಸಿ ಜನರ ಪ್ರತಿಕೃತಿ, ಅವರು ಬಳಸುವ ವಸ್ತುಗಳು ಸೇರದಂತೆ ಜೀವನಕ್ರಮ, ಪರಿಸರಗಳನ್ನು ಸೃಷ್ಟಿಸಲಾಗಿದೆ. ಆದಿವಾಸಿಗಳು ಹೇಗೆಲ್ಲ ಬದುಕುತ್ತಿದ್ದಾರೆ. ಅವರ ಮತ್ತು ಕಾಡುಪ್ರಾಣಿಗಳ ನಡುವಿನ ಹೊಂದಾಣಿಕೆಯ ಜೀವನ, ಕಾಡು ಮತ್ತು ಕಾಡುಪ್ರಾಣಿಗಳ ಉಳಿವಿಗೆ ಆದಿವಾಸಿಗಳು ಕಷ್ಟಪಡುವ ರೀತಿಗಳನ್ನು ತೋರಿಸಲಾಗಿದೆ.


ಅರಣ್ಯ ಸಿಬ್ಬಂದಿಯ ಶ್ರಮ ಪ್ರದರ್ಶನ:
ಮಳಿಗೆಯಲ್ಲಿ ಅರಣ್ಯ ಇಲಾಖೆಯ ಶ್ರಮವನ್ನು ತೋರಿಸುವ ಕೆಲಸ ಮಾಡಲಾಗಿದೆ. ಕಾಡು ಮತ್ತು ಕಾಡುಪ್ರಾಣಿಗಳ ರಕ್ಷಣೆಗೆ ಅರಣ್ಯ ಇಲಾಖೆ ಸಿಬ್ಬಂದಿ ಹೇಗೆಲ್ಲ ಕಷ್ಟಪಡುತ್ತಿದ್ದಾರೆ, ಇಲಾಖೆಯ ಗಾರ್ಡ್‌ಗಳು ಎಷ್ಟೆಲ್ಲ ಕಷ್ಟಪಟ್ಟು ಅರಣ್ಯ ಕಾಯುತ್ತಿದ್ದಾರೆ, ಮರಗಳ್ಳರು ಹಾಗೂ ಕಳ್ಳ ಬೇಟೆಗಾರರಿಂದ ಕಾಡು ಮತ್ತು ಕಾಡಿನಪ್ರಾಣಿಗಳನ್ನು ಸಿಬ್ಬಂದಿ ರಕ್ಷಿಸುತ್ತಿರುವ ಪರಿಯನ್ನು ತೋರಿಸಿದ್ದಾರೆ. ಜತೆಗೆ, ಕಾಡಿನ ಸಫಾರಿಯ ಮಾದರಿಯನ್ನೂ ತಿಳಿಸಲಾಗಿದೆ.

ಅಪಾರ ಮಾಹಿತಿ:
ಮಾನವ ಮತ್ತು ವನ್ಯಜೀವಿ ಸಂಘರ್ಷ ತಗ್ಗಿಸಲು ಅರಣ್ಯ ಇಲಾಖೆ ಕೈಗೊಂಡಿರುವ ಕ್ರಮಗಳು, ಕಾಡಿನೊಳಗಿನ ರಸ್ತೆಯಲ್ಲಿ ಸಂಚಾರ ನಿಯಮಗಳು, ಕಾಡನ್ನು ಬೆಂಕಿಯಿಂದ ರಕ್ಷಿಸುವ ಪರಿ, ಕಾಡುಪ್ರಾಣಿಗಳ ರಕ್ಷಣೆ, ವನ್ಯಜೀವಿ ಸಂರಕ್ಷಣಾ ಕಾಯೆ-1972ರ ನಿಯಮಗಳು ಸೇರಿದಂತೆ ಅನೇಕ ಮಾಹಿತಿಯನ್ನು ಫಲಕಗಳ ಮೂಲಕ ಪ್ರದರ್ಶಿಸಲಾಗಿದೆ. ದೇಶದಲ್ಲಿ ಅಭಿವೃದ್ಧಿ ಮತ್ತು ಕಾಡು ಸಂರಕ್ಷಣೆ ಎರಡೂ ಒಟ್ಟಿಗೆ ನಡೆಯಬೇಕು ಎಂಬ ಸಂದೇಶವನ್ನು ಮಳಿಗೆಯಲ್ಲಿ ಸಾರಾಲಾಗುತ್ತಿದೆ.
ಕಾಡಿನೊಳಗಿನ ರಸ್ತೆಯಲ್ಲಿ ವಾಹನ ಚಾಲನೆ ಮಾಡುವಾಗ ನಿಧಾನವಾಗಿ ಹಾಗೂ ಜಾಗರೂಕತೆಯಿಂದ ಚಾಲನೆ ಮಾಡುವಂತೆ ಅರಿವು ಮೂಡಿಸಲಾಗಿದೆ. ಕಾಡಿನಲ್ಲಿ ಹೇಗೆ ನಡೆದುಕೊಳ್ಳಬೇಕು, ಬೆಂಕಿ ನೋಡಿದ ತಕ್ಷಣ ಏನು ಮಾಡಬೇಕು ಎಂದು ತಿಳಿಸಲಾಗಿದೆ. ವನ್ಯಪ್ರಾಣಿಗಳ ಬೇಟೆ, ಫೆನ್ಸಿಂಗ್‌ಗೆ ವಿದ್ಯುತ್ ಸಂಪರ್ಕ ನೀಡಿದರೆ ಏನೆಲ್ಲ ಶಿಕ್ಷೆ ಎದುರಿಸಬೇಕಾಗುತ್ತದೆ ಎಂದು ವಿವರಿಸಲಾಗಿದೆ. ರೈಲು ಕಂಬಿಗಳ ಬೇಲಿ, ಲಂಟಾನಾ, ಯುಪಟೋರಿಯಂ ಕಳೆಗಳ ನಿರ್ಮೂಲನೆಗೆ ಕ್ರಮ, ಸೋಲಾರ್ ಬೋರ್‌ವೆಲ್‌ಗಳು, ವಿಶೇಷವಾಗಿ ಭಾರತದಲ್ಲಿ ಕಂಡುಬರುವ ಅತಿ ದೊಡ್ಡ ಮಂಗಟ್ಟೆಯಾದ ದೊಡ್ಡದಾಸ ಮಂಗಟ್ಟೆ ಹಕ್ಕಿ ಬಗ್ಗೆ ವಿವರವಾಗಿ ತಿಳಿಸಲಾಗಿದೆ. ಹುಲಿ ಯೋಜನೆ, ಹುಲಿಗಳನ್ನು ಏಕೆ ಸಂರಕ್ಷಿಸಬೇಕು ಎಂಬ ವಿಷಯಗಳನ್ನು ವಿವರವಾಗಿ ತಿಳಿಸಲಾಗಿದೆ. ಸೋಲಾರ್ ತಂತಿಗಳು ಸೇರಿದಂತೆ ಅರಣ್ಯ ಹಾಗೂ ಅರಣ್ಯ ಇಲಾಖೆಗೆ ಸಂಬಂಧಪಟ್ಟ ಅನೇಕ ಮಾಹಿತಿ ನೀಡಲಾಗಿದೆ.

ಈ ಬಾರಿ ನಮ್ಮ ಇಲಾಖೆಯ ಮಳಿಗೆಯಲ್ಲಿ ಕಾಡುಪ್ರಾಣಿಗಳು ಹಾಗೂ ಅರಣ್ಯ ಸಂಪತ್ತಿನ ರಕ್ಷಣೆಯ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ಮಳಿಗೆಯನ್ನು ಶೀಘ್ರದಲ್ಲೇ ಅಧಿಕೃತವಾಗಿ ಉದ್ಘಾಟಿಸಲಾಗುತ್ತದೆ. ಮಳಿಗೆಗೆ ಭೇಟಿ ನೀಡುವ ಸಾರ್ವಜನಿಕರಿಗೆ ಅರಣ್ಯ ಇಲಾಖೆ ಯೋಜನೆಗಳ ಮಾಹಿತಿ ನೀಡುವ ಕೆಲಸ ಮಾಡಲಾಗುತ್ತದೆ.ಕಮಲಾ ಕರಿಕಾಳನ್, ಡಿಸಿಎಫ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net