ಹೆಚ್ಚುತ್ತಿದೆ ವನ್ಯಜೀವಿಗಳ ಹಾವಳಿ

ಗುಂಡ್ಲುಪೇಟೆ ತಾಲೂಕಿನ ಕರಕಲಮಾದಹಳ್ಳಿ ಗ್ರಾಮದಲ್ಲಿ ಇತ್ತೀಚೆಗೆ ಸೆರೆಸಿಕ್ಕಿದ್ದ ಚಿರತೆ.
ಗುಂಡ್ಲುಪೇಟೆ ತಾಲೂಕಿನ ಕರಕಲಮಾದಹಳ್ಳಿ ಗ್ರಾಮದಲ್ಲಿ ಇತ್ತೀಚೆಗೆ ಸೆರೆಸಿಕ್ಕಿದ್ದ ಚಿರತೆ.
Published on

ಗುಂಡ್ಲುಪೇಟೆ; ಬೇಸಿಗೆಗೂ ಮೊದಲೇ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶವಾಗಿರುವ ತಾಲೂಕಿನ ಕಾಡಂಚಿನ ಗ್ರಾಮಗಳು ಹಾಗೂ ಪಟ್ಟಣದ ಹೊರವಲಯಗಳಲ್ಲಿ ವನ್ಯಜೀವಿಗಳ ಹಾವಳಿ ಹೆಚ್ಚಾಗುತ್ತಿದ್ದು ಜಾನುವಾರುಗಳು ಹಾಗೂ ಬೆಳೆಗಳು ನಾಶವಾಗುತ್ತಿವೆ.

ಹಿಂದೆ ಕಾಡಂಚಿನ ಗ್ರಾಮಗಳಿಗೆ ಸೀಮಿತವಾಗಿದ್ದ ವನ್ಯಜೀವಿಗಳು ಇದೀಗ ಬಫರ್ ವಲಯದಲ್ಲಿಯೂ ದಾಳಿ ಮಾಡುತ್ತಿರುವುದು ಜನರಲ್ಲಿ ಭೀತಿಯನ್ನುಂಟು ಮಾಡಿದೆ. ಹುಲಿ ಸಂರಕ್ಷಿತ ಪ್ರದೇಶದ ಬಫರ್ ವಲಯ, ಓಂಕಾರ್, ಕುಂದಕೆರೆ ಹಾಗೂ ಮದ್ದೂರು ವಲಯಗಳಲ್ಲಿ ಚಿರತೆ, ಹುಲಿ, ಆನೆ, ಕರಡಿ, ಕಾಡೆಮ್ಮೆಗಳ ದಾಳಿ ಪ್ರಕರಣಗಳು ಸಂಭವಿಸುತ್ತಿವೆ. ಕಾಡಿಗಿಂತಲೂ ಹೊರಗಿನ ಜಮೀನುಗಳು, ಹಳ್ಳಕ್ಕೊಳ್ಳಗಳಲ್ಲಿ ನೆಲೆಸಿರುವ ಕಾಡುಹಂದಿಗಳು ರೈತರ ಬೆಳೆ ನಾಶ ಮಾಡುತ್ತಿರುವುದು ಒಂದೆಡೆಯಾದರೆ, ಚಿರತೆಗಳು ಹಾಗೂ ಹುಲಿಗಳಿಗೆ ರೈತರ ಸಾಕುಪ್ರಾಣಿಗಳು ಬಲಿಯಗುತ್ತಿರುವುದು ಮತ್ತೊಂದೆಡೆ. ಈ ನಡುವೆ ಅಲ್ಲಲ್ಲಿ ಕರಡಿ ಹಾಗೂ ಕಾಡೆಮ್ಮೆಗಳು ಹಾಡಹಗಲೇ ರೈತರ ಮೇಲೆ ದಾಳಿ ಮಾಡುತ್ತಿವೆ.

ಬಫರ್ ವಲಯದಲ್ಲಿ ಹೆಚ್ಚಿದ ಪ್ರಕರಣ: ತಾಲೂಕಿನ ಬಫರ್ ವಲಯದ ವ್ಯಾಪ್ತಿಯ ನಾಲ್ಕು ಹೋಬಳಿಗಳಲ್ಲಿಯೂ ವನ್ಯಜೀವಿಗಳ ದಾಳಿ ಪ್ರಕರಣಗಳು ಹೆಚ್ಚಾಗಿವೆ. ಬಂಡೀಪುರದಿಂದ ಹುಂಡೀಪುರ, ಚೌಡಹಳ್ಳಿ, ವಡೆಯನಪುರ, ಕೊಡಸೋಗೆ, ಸೋಮನಪುರ, ಸೆಕ್ಷನ್ 4ಗೆ ಸೇರಿದ ತೆರಕಣಾಂಬಿ ಗುಡ್ಡ, ತ್ರಿಯಂಭಕಪುರ, ಕಗ್ಗಳದಹುಂಡಿ, ಕೆಲಸೂರು, ಪಡಗೂರು, ಕಲ್ಲಹಳ್ಳಿ, ಹಕ್ಕಲಪುರ ಕಬ್ಬಹಳ್ಳಿ ಸುತ್ತಮುತ್ತಲಿನ ಗ್ರಾಮಗಳು, ಓಂಕಾರ್ ವಲಯದ ಕಾಡಂಚಿನ ಬೆಟ್ಟದ ಮಾದಹಳ್ಳಿ, ಆಲತ್ತೂರು ಮುಂತಾದ ಗ್ರಾಮಗಳಲ್ಲಿ ಎರಡು ಹುಲಿಗಳು ಸಂಚರಿಸುತ್ತಿದ್ದು ಒಮ್ಮೆಲೇ ಎರಡರಿಂದ ಮೂರು ಜಾನುವಾರುಗಳ ಮೇಲೆ ದಾಳಿ ನಡೆಸಿ ಕೊಲ್ಲುತ್ತಿದೆ.

ಕಂದಕ ಸೃಷ್ಟಿಸಿದ ವಡೆಯನಪುರ ಘಟನೆ: ಬೊಮ್ಮಲಾಪುರ ಗ್ರಾಮದಲ್ಲಿ ಹಸುವನ್ನು ಕೊಂದ ಹುಲಿ ಸೆರೆಗೆ ಒಂದು ತಿಂಗಳಾದರೂ ಗಂಭೀರ ಪ್ರಯತ್ನ ನಡೆಸದ ಅರಣ್ಯ ಇಲಾಖೆ ವಿರುದ್ಧ ರೊಚ್ಚಿಗೆದ್ದ ಗ್ರಾಮಸ್ಥರು ಅರಣ್ಯ ಸಿಬ್ಬಂದಿಯನ್ನು ಬೋನಿಗೆ ಕೂಡಿಹಾಕಿದ್ದ ಘಟನೆ ನಂತರ ಅರಣ್ಯ ಇಲಾಖೆ ಐವರು ಗ್ರಾಮಸ್ಥರ ವಿರುದ್ಧ ಪೊಲೀಸರಿಗೆ ದೂರು ನೀಡಿತ್ತು. ಇದಕ್ಕೆ ಪ್ರತಿಯಾಗಿ ಗ್ರಾಮದ ಮಹಿಳೆಯೊಬ್ಬರು ಅರಣ್ಯ ಇಲಾಖೆಯ ಅಧಿಕಾರಿ, ಸಿಬ್ಬಂದಿ ಸೇರಿದಂತೆ 15 ಜನರ ವಿರುದ್ಧ ದೂರು ನೀಡಿದ್ದರಿಂದ ಪ್ರಕರಣ ದಾಖಲಾಗಿವೆ. ಇದರಿಂದ ಅರಣ್ಯ ಇಲಾಖೆ ಹಾಗೂ ಕಾಡಂಚಿನ ಗ್ರಾಮಸ್ಥರ ನಡುವೆ ಭಾರಿ ಕಂದಕ ಸೃಷ್ಟಿಯಾಗಿದ್ದು ಮುಂದಿನ ದಿನಗಳಲ್ಲಿ ಮತ್ತಷ್ಟು ಹೆಚ್ಚುವ ಆತಂಕ ಎದುರಾಗಿದೆ.

ಬೀಡುಬಿಟ್ಟ ತಾಯಿ ಹುಲಿ ಮರಿಗಳು: ಗೋಪಾಲಸ್ವಾಮಿ ಬೆಟ್ಟ ವಲದ ಕಾಡಿನಿಂದ ಕಳೆದ ವರ್ಷದಿಂದಲೂ ಹೊರಬರುತ್ತಿರುವ ತಾಯಿ ಹಾಗೂ ಎರಡು ಮರಿ ಹುಲಿಗಳು ಗೋಪಾಲಪುರ ಗ್ರಾಮದ ರೈತ ಜಿ.ಜಿ.ಮಲ್ಲಿಕಾರ್ಜುನಪ್ಪ ಅವರ ಜಮೀನಿನಲ್ಲಿ ಬೀಡು ಬಿಡುತ್ತಿವೆ. ಇವುಗಳನ್ನು ಕಾಡಿಗಟ್ಟಲು ಇಲ್ಲವೇ ಸೆರೆಹಿಡಿಯಲು ಅರಣ್ಯ ಇಲಾಖೆ ಗಂಭೀರ ಪ್ರಯತ್ನ ನಡೆಸದ ಹಿನ್ನೆಲೆಯಲ್ಲಿ ಈ ಭಾಗದ ರೈತರು ತಮ್ಮ ಜಮೀನುಗಳಲ್ಲಿ ಬೆಳೆದಿರುವ ಮರಗಿಡಗಳನ್ನು ಕತ್ತರಿಸಿ ಬಯಲು ಮಾಡಿಕೊಳ್ಳಬೇಕಾಗಿದೆ.

ಅನುದಾನದ ಕೊರತೆ, ಪರಿಹಾರ ವಿಳಂಬ; ಬಫರ್ ವಲಯದಲ್ಲಿ ಪ್ರತಿ ವರ್ಷವೂ ತಮ್ಮ ಸಂತತಿ ಹೆಚ್ಚಿಸಿಕೊಂಡಿರುವ ಕಾಡುಹಂದಿಗಳು ಹಾಗೂ ಚಿರತೆಗಳು ಎಲ್ಲ ಗ್ರಾಮಗಳ ಹಳ್ಳಕೊಳ್ಳಗಳಲ್ಲಿ ನೆಲೆನಿಲ್ಲುತ್ತಿವೆ. ಕಳೆದ ಎರಡು ವರ್ಷದಲ್ಲಿ ಪಡಗೂರು ಸುತ್ತಮುತ್ತಲಿನ ಗ್ರಾಮಗಳಲ್ಲಿ ಚಿರತೆ ಹಾಗೂ ಹುಲಿ ದಾಳಿಯಿಂದ ನೂರಾರು ಜಾನುವಾರುಗಳು ಬಲಿಯಾಗಿವೆ. ಆದರೂ ಅರಣ್ಯ ಇಲಾಖೆ ಅನುದಾನದ ಕೊರತೆಯಿಂದ ರೈತರಿಗೆ ಪರಿಹಾರ ನೀಡದಿರುವುದು ರೈತರನ್ನು ಕಂಗೆಡಿಸುತ್ತಿದೆ. 2024-25 ನೇ ಸಾಲಿನಲ್ಲಿ ಬಫರ್ ವಲಯವೊಂದರಲ್ಲಿಯೇ 120 ವನ್ಯಜೀವಿ ದಾಳಿ ಪ್ರಕರಣಗಳು ಸಂಭವಿಸಿವೆ. ಇದರಲ್ಲಿ ಸಂತ್ರಸ್ಥ ರೈತರಿಗೆ 9 ಲಕ್ಷ 30 ಸಾವಿರ ರೂಪಾಯಿಗಳಷ್ಟು ಪರಿಹಾರ ನೀಡಬೇಕಾಗಿದೆ. ಆದರೆ ಅನುದಾನದ ಕೊರತೆಯಿಂದ ಅರಣ್ಯ ಇಲಾಖೆ ಪರಿಹಾರ ನೀಡಲು ಸಾಧ್ಯವಾಗದಂತಾಗಿದ್ದು ರೈತರ ಆಕ್ರೋಶ ಎದುರಿಸುವಂತಾಗಿದೆ.

ಬೇಸಿಗೆಗೂ ಮೊದಲೇ ಕಾಡಂಚಿನ ಗ್ರಾಮಗಳಲ್ಲಿ ವನ್ಯಜೀವಿಗಳ ದಾಳಿ ಪ್ರಕರಣಗಳು ಹೆಚ್ಚಾಗುತ್ತಿವೆ. ಕಾಡಿನಿಂದ ಹೊರಗೆ ಬಂದು ಜಮೀನುಗಳಿಗೆ ಬರುವ ಹುಲಿ, ಚಿರತೆಗಳನ್ನು ಸೆರೆಹಿಡಿಯುವ ಬದಲು ಅರಣ್ಯ ಇಲಾಖೆ ಮತ್ತೆ ಕಾಡಿಗಟ್ಟುತ್ತಿದೆ. ಇದರಿಂದ ಮತ್ತೆ ಮತ್ತೆ ಅವು ಗ್ರಾಮಗಳತ್ತ ಆಗಮಿಸುವ ಪರಿಪಾಠ ಬೆಳೆಸಿಕೊಳ್ಳುತ್ತಿವೆ. ಕಾಡಂಚಿನ ಗ್ರಾಮಗಳ ರೈತರು ಹಾಗೂ ಕಾರ್ಮಿಕರು ಜಮೀನುಗಳಿಗೆ ಹೋಗಲು ಭಯಪಡುವಂತಾಗಿದೆ. ಆದ್ದರಿಂದ ಇನ್ನಾದರೂ ಅರಣ್ಯ ಇಲಾಖೆ ಶಾಶ್ವತ ಕ್ರಮಕೈಗೊಳ್ಳಬೇಕು.

ಜಿ.ಜಿ.ಮಲ್ಲಿಕಾರ್ಜುನಪ್ಪ ಗೋಪಾಲಪುರ ಗ್ರಾಮಸ್ಥ

ಫೆಬ್ರವರಿವರೆಗೆ ರೈತರ ಬೆಳೆ ಹಾಗೂ ಜಾನುವಾರು ನಷ್ಟಕ್ಕೆ ಪರಿಹಾರ ನೀಡಲಾಗಿದ್ದು, ಉಳಿದ ಅರ್ಜಿಗಳಿಗೆ ಅನುದಾನ ಬಂದ ಕೂಡಲೇ ಪರಿಹಾರ ನೀಡಲು ಕ್ರಮಕೈಗೊಳ್ಳಲಾಗುವುದು. ವಡೆಯನಪುರ ಸಮೀಪ ಕಾಣಿಸಿಕೊಳ್ಳುತ್ತಿದ್ದ ಹುಲಿ ಸೆರೆಗೆ ಅನುಮತಿ ಕೋರಲಾಗಿದೆ.

ಶಿವಕುಮಾರ್ ಪ್ರಭಾರ ಆರ್‌ಎಫ್‌ಒ, ಬಫರ್ ವಲಯ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net