ಕಾಡು, ವನ್ಯಜೀವಿ ಸಂರಕ್ಷಣೆ ನಮ್ಮೆಲ್ಲರ ಹೊಣೆ

14adarshkdga2
Published on

ಮಡಿಕೇರಿ: ವೈಲ್ಡ್ ಲೈಫ್ ಫಸ್ಟ್, ಸಂತ ಮೈಕಲರ ಪ್ರೌಢಶಾಲೆ ಮತ್ತು ಭಾರತಿ ವಿದ್ಯಾಭವನ್, ಕೊಡಗು ವಿದ್ಯಾಲಯ ಸಂಯುಕ್ತ ಆಶ್ರಯದಲ್ಲಿ ಕಾಳ್ಗಿಚ್ಚು ಜಾಗೃತಿ ಮೆರವಣಿಗೆ ಕಾರ್ಯಕ್ರಮ ಶುಕ್ರವಾರ ನಗರದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಮಡಿಕೇರಿ ಜನರಲ್ ಕೆ.ಎಸ್.ತಿಮ್ಮಯ್ಯ ವೃತ್ತದಲ್ಲಿ ಡಿವೈಎಸ್ಪಿ ದಿನೇಶ್‌ಕುಮಾರ್ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿ, ಕಾಡು ಮತ್ತು ವನ್ಯಜೀವಿ ಸಂರಕ್ಷಣೆ ನಮ್ಮೆಲ್ಲರ ಹೊಣೆ. ನಾಡಿನ ಜನತೆ, ಪ್ರಮುಖರು ಮುಖ್ಯವಾಗಿ ಕಾಡಿಗೆ ಬೆಂಕಿ ಬೀಳದಂತೆ ಜಾಗ್ರತೆ ವಹಿಸಬೇಕಾಗಿದೆ. ಕಾಡಿನ ಬೆಂಕಿ ಅನಾಹುತ ಮನುಕುಲವನ್ನು ವಿನಾಶದತ್ತ ಕೊಂಡೊಯ್ಯಲಿದೆ ಎಂದು ಹೇಳಿದರು.

ವೈಲ್ಡ್ ಲೈಫ್ ಫಸ್ಟ್ ಅಧ್ಯಕ್ಷ ಕೆ.ಎಂ.ಚಿಣ್ಣಪ್ಪ ಮಾತನಾಡಿ, ಕಾಡಿಗೆ ನಿರಂತರ ಬೆಂಕಿ ಬೀಳುವುದರಿಂದ ವನ್ಯಜೀವಿಗಳ ನಾಶ, ಹಳ್ಳ ಕೊಳ್ಳಗಳೆಲ್ಲಾ ಬರಿದಾಗಿ ನೀರಿಗೆ ಹಾಹಾಕಾರ ಉಂಟಾಗಲಿದೆ. ಮುಂದೆ ಕುಡಿಯುವ ನೀರಿಗಾಗಿ ಯುದ್ದ ನಡೆಯಲಿದೆ, ಮುಂದಿನ ಪೀಳಿಗೆಗೆ ಅಮೂಲ್ಯ ಸಸ್ಯ ಭಂಡಾರವನ್ನು ಉಳಿಸುವುದರೊಂದಿಗೆ, ಕಾಳ್ಗಿಚ್ಚು ಸಂಭವಿಸದಂತೆ ಎಲ್ಲರೂ ಎಚ್ವರ ವಹಿಸುವಂತೆ ಸಲಹೆ ನೀಡಿದರು.

ಮೆರವಣಿಗೆಯಲ್ಲಿ ವನ್ಯಪ್ರೇಮಿ ತಮ್ಮು ಪೂವಯ್ಯ, ಮಂದಪಂಡ ಕೆ.ಅಪ್ಪಚ್ಚು(ಸತೀಶ್), ತೇಲಪಂಡ ಪ್ರಮೋದ್ ಸೋಮಯ್ಯ, ಸಂತ ಮೈಕಲ್ ಪ್ರೌಢಶಾಲಾ ಮುಖ್ಯ ಶಿಕ್ಷಕ ಕೆ.ಎ.ಜಾನ್ ಸನ್, ಶಿಕ್ಷಕಿ ಜಾನಕಿ ಐ, ಕೊಡಗು ವಿದ್ಯಾಲಯದ ದೈಹಿಕ ಶಿಕ್ಷಣ ಶಿಕ್ಷಕ ದಾಮೋದರ್, ನಗರ ಠಾಣಾ ಎಎಸ್‌ಐ ಮಹಮ್ಮದ್ ಅಕ್ಮಲ್, ಕಾರ್ಯಕ್ರಮ ಸಂಯೋಜಕ ಟಿ.ಎಲ್.ಶ್ರೀನಿವಾಸ್, ಕೆ.ಪೊನ್ನಪ್ಪ, ಸಂಚಾರಿ ಎಸ್.ಐ.ಬೆಳ್ಳಿಯಪ್ಪ, ಬಲ್ಲಚಂಡ ರಂಜನ್, ವಿ.ಟಿ.ಮದನ್, ಪದ್ಮನಾಭ, ಎಚ್.ಎಸ್.ಶ್ರೀನಿವಾಸ್, ಪ್ರದೀಪ್ ಇತರರಿದ್ದರು.

ಮಡಿಕೇರಿ ಮುಖ್ಯರಸ್ತೆಯಲ್ಲಿ ಕಾಳ್ಗಿಚ್ಚು ಜಾಗೃತಿ ಮೆರವಣಿಗೆ ಸಾಗಿ, ಇಂದಿರಾಗಾಂಧಿ ವೃತ್ತ, ಹಿಲ್ ರಸ್ತೆ, ಮಹದೇವಪೇಟೆ ಮಾರುಕಟ್ಟೆ ಪ್ರದೇಶದಲ್ಲಿ ಸಂಚರಿಸಿ ಸುಮಾರು 3500ಕ್ಕೂ ಆಧಿಕ ಕರಪತ್ರ ವಿತರಿಸಲಾಯಿತು.

ಎಸ್‌ಪಿಗೆ ಪುಸ್ತಕ: ವನ್ಯಪ್ರೇಮಿ ಕೆ.ಎಂ.ಚಿಣ್ಣಪ್ಪ ಮತ್ತು ತಮ್ಮು ಪೂವಯ್ಯ ಅವರು ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಡಿ.ಪನ್ನೇಕರ್ ಅವರನ್ನು ಭೇಟಿ ಮಾಡಿ ‘ಕಾಡಿನೊಳಗೊಂದು ಜೀವ’ ಪುಸ್ತಕ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net