

ರಮೇಶ ಹಾರ್ಸಿಮನೆ ಸಿದ್ದಾಪುರ
ನಿತ್ಯ ಹರಿದ್ವರ್ಣ ಕಾಡುಗಳ ತಂಪು ತೇವಾಂಶದ ಪ್ರದೇಶಗಳಲ್ಲಿ ಮಾತ್ರ ಬೆಳೆಯುವ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಹು ಬೇಡಿಕೆ ಇರುವ ಉಪ್ಪಾಗೆ ಇಂದು ಅಪರೂಪವಾಗುತ್ತಿದೆ. ಮಾನವನ ದುರಾಸೆಯಿಂದ ಔಷಧ ಗುಣಗಳಿರುವ ಉಪ್ಪಾಗೆ ಎಂಬ ಚಿನ್ನದ ಮೊಟ್ಟೆ ಇಡುವ ಕೋಳಿ ಪಶ್ಚಿಮ ಘಟ್ಟದ ಕಾಡುಗಳಿಂದ ಮಾಯವಾಗುತ್ತಿದೆ.
ಕ್ಲುಸಿಯೇಸಿ ಸಸ್ಯ ಪ್ರಭೇದಕ್ಕೆ ಸೇರಿದ ಗಾರ್ಸಿನಿಯಾ ಗುಮ್ನಿ ಗುಟ್ಟ ಎಂಬ ವೈಜ್ಞಾನಿಕ ಹೆಸರಿರುವ ಈ ಹಣ್ಣನ್ನು ಇಂಗ್ಲಿಷ್‌ನಲ್ಲಿ ಮಲಬಾರ್ ಗಾಂಬುಗೆ ಎಂದು ಕರೆಯಲಾಗುತ್ತದೆ. ಇದರಲ್ಲಿ ಒಟ್ಟು 35 ಪ್ರಭೇದಗಳಿವೆ. ಪಶ್ಚಿಮ ಘಟ್ಟದ ಸಾಲುಗಳಿರುವ ಕರ್ನಾಟಕ, ಕೇರಳ ಹಾಗೂ ತಮಿಳುನಾಡಿನಲ್ಲಿ ಮಾತ್ರ ಕಂಡುಬರುತ್ತದೆ. ಮುಖ್ಯವಾಗಿ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ, ಶಿರಸಿ ಯಲ್ಲಾಪುರ ಭಾಗದ ಅತ್ಯಧಿಕ ಮಳೆ ಬೀಡುವ ಪ್ರದೇಶಗಳಲ್ಲಿ ಇದು ಹೆಜ್ಜಾಗಿ ಕಾಣಿಸುತ್ತದೆ.
ಹೆಚ್ಚು ಅಗಲವಾಗಿ ಹರಡಿಕೊಳ್ಳದೆ ಗರಿಷ್ಠ 30 ಮೀ ಎತ್ತರಕ್ಕೆ ಲಂಬವಾಗಿ ಬೆಳೆಯುವ ಉಪ್ಪಾಗೆ ಮರದಲ್ಲಿ ಮೇ, ಜೂನ್ ತಿಂಗಳಲ್ಲಿ ಹಳದಿ ಹಾಗೂ ಕೆಂಪು ಹೂ ಬಿಟ್ಟರೆ, ಜೂನ್, ಜುಲೈ ತಿಂಗಳಲ್ಲಿ ಕಾಯಿ ಬಿಟ್ಟು ಹಣ್ಣಾಗುತ್ತದೆ. ಮೊಟ್ಟೆಯ ಗಾತ್ರ ಆಕಾರದಲ್ಲಿ, ಸುಂದರ ಪಳಿಗಳ ರೂಪದಲ್ಲಿ ಬೆಳೆಯುವ ಹಣ್ಣುಗಳು ತುಂಬಾ ಆಕರ್ಷಕವಾಗಿರುತ್ತದೆ. ಸಿಪ್ಪೆ ತುಂಬಾ ಅಂಟು, ಅಲ್ಲದೆ, ವಿಪರೀತ ಹುಳಿಯ ಗುಣ ಹೊಂದಿದೆ. ಪ್ರತಿ ಹಣ್ಣಿನಲ್ಲಿ ಗೇರು ಬೀಜದ ಮಾದರಿಯ 6 ರಿಂದ 8 ಬೀಜವಿದ್ದು, ಅವುಗಳನ್ನು ಒಣಗಿಸಿ, ಹಿಂಡಿ ಎಣ್ಣೆ ತೆಗೆಯಲಾಗುತ್ತದೆ . ಅತಿಯಾದ ಹುಳಿ ಹೊಂದಿರುವ ಉಪ್ಪಾಗೆ ಸಿಪ್ಪೆಗೆ ಮೀನು, ಮಾಂಸದ ಅಡುಗೆಗಳಿಗೆ ಪ್ರಶಸ್ತವಾಗಿದೆ. ಹೈಡ್ರಾಕ್ಸಿ ಸಿಟ್ರಿಕ್ ಅಂಶ ಹೊಂದಿರುವ ಉಪ್ಪಾಗೆ ಮನುಷ್ಯನ ದೇಹದ ಕೊಬ್ಬು ಕರಗಿಸಲು ಪ್ರಶಸ್ತ ಎಂದು ಹೇಳಲಾಗುತ್ತದೆ. ಹಣ್ಣಿನ ಸೇವನೆ ಮುಟ್ಟಿನ ತೊಂದರೆ, ಮಲಬದ್ಧತೆ, ಜಂತು ಹುಳ ನಿವಾರಣೆಗೆ ರಾಮಬಾಣವಿದ್ದಂತೆ. ಹಣ್ಣಿನ ಕಷಾಯದಿಂದ ಸಂವಾತ ಗುಣಮುಖವಾಗುತ್ತದೆ. ಹಣ್ಣಿನ ಸಿಪ್ಪೆಯಲ್ಲಿರುವ ಆಮ್ಲದಿಂದ ಕೊಲೆಸ್ಟ್ರಾಲ್ ಮತ್ತು ಬೊಜ್ಜು ನಿಯಂತ್ರಣ, ಕಜ್ಜಿ ತುರಿ, ಕಾಲಿನ ಬಿರುಕುಳಿಗೆ ಇದರ ಎಣ್ಣೆ ಹೆಚ್ಚು ಉಪಯುಕ್ತವಾಗಿದೆ ಎಂಬುದು ಆಯುರ್ವೇದ ವೈದ್ಯರ ಅಭಿಪ್ರಾಯ.
ಅದಕ್ಕಾಗಿ ತುಂಬಾ ಬೇಡಿಕೆ ಇದೆ. ವಿದೇಶಗಳಿಗೂ ರ‌್ತಾಗುತ್ತದೆ. ಅರಣ್ಯ ಉತ್ಪನ್ನವಾಗಿದ್ದರಿಂದ ಇದಕ್ಕೆ ಅಧಿಕೃತ ಮಾರುಕಟ್ಟೆ ಇಲ್ಲ. ಬೀಜವನ್ನು ತೆಗೆದು ಹಳದಿ ಮಿಶ್ರಿತ ತುಪ್ಪ ಮಾಡಿ, ಖಾದ್ಯ ತೈಲವಾಗಿ ಬಳಸಲಾಗುತ್ತದೆ ಎನ್ನುತ್ತಾರೆ.
ಚಿನ್ನದ ಕೋಳಿ: ಕೋಳಿ ಚಿನ್ನದ ಮೊಟ್ಟೆ ಇಡುತ್ತದೆ ಎಂದು ಹೊಟ್ಟೆಯನ್ನೇ ಕೊಯ್ದ ಕತೆ ಉಪ್ಪಾಗೆ ವಿಷಯದಲ್ಲೂ ಅನ್ವಯವಾಗುತ್ತದೆ. ಉಪ್ಪಾಗೆ ಹಣ್ಣುಗಳು ಶತಮಾನಗಳ ಹಿಂದೆ ಪ್ರಾಣಿ-ಪಕ್ಷಿಗಳಿಗೆ ಆಹಾರವಾಗುತ್ತಿತ್ತು ಅಥವಾ ಮರಗಳ ಬುಡದಲ್ಲಿಯೇ ಬಿದ್ದು, ಕೊಳೆತುಹೋಗುತ್ತಿದ್ದವು. ಮರಗಳು ಯಥೇಚ್ಚವಾಗಿ ಎಲ್ಲಿ ಬೇಕೆಂದರಲ್ಲಿ ಬೆಳೆದುಕೊಂಡಿದ್ದವು. ನಿಧಾನವಾಗಿ ಉಪ್ಪಾಗೆಗೆ ಮಾರುಕಟ್ಟೆ ಬೆಳೆಯಲಾರಂಬಿಸಿತು. ಮಲೆನಾಡಿಗರ ಕಾಡಿನಿಂಚಿನ ವಾಸಿಗಳಿಗೆ ಪ್ರಮುಖ ಉಪ ಉತ್ಪನ್ನವಾಯಿತು. ಪ್ರತಿ ಕೆಜಿಗೆ 125 ರೂ.ವರೆಗೂ ಸ್ಥಳೀಯರಿಗೆ ಬೆಲೆ ಸಿಕ್ಕಿತು. ಬೇಡಿಕೆ ಹೆಚ್ಚಿದ ನಂತರ ಬಿದ್ದ ಹಣ್ಣು ಹೆಕ್ಕಿ ಸಂಸ್ಕರಿಸಿ ಮಾರಲಾರಂಭಿಸಿದರು. ನಂತರ ಮರ ಹತ್ತಿ ದೋಟಿಗಳ ಮೂಲಕ ಉದುರಿಸಿ ಕೊಯ್ದು ಮಾರಲಾರಂಭಿಸಿದರು. ಬೆಲೆ ಇನ್ನಷ್ಟು ಹೆಚ್ಚಿದ್ದು, ಗೊತ್ತಾದ ತಕ್ಷಣ ಹಣ್ಣಾಗುವುದಕ್ಕೂ ಮೊದಲೇ ಕಾಯಿಯನ್ನು ಕೊಯ್ಯಲಾರಂಭಿಸಿದರು. ಇನ್ನೂ ಕೆಲವರು ಗಿಡವನ್ನೇ ಕಡಿದರು. ಪರಿಣಾಮ ಈಗ ಮರಗಳೇ ನಾಶವಾಗಿವೆ. ಹಣ್ಣುಗಳು ನೆಲಕ್ಕೆ ಬೀಳದ ಕಾರಣ, ಕಾಡು ಪ್ರಾಣಿಗಳಿಗೆ ಆಹಾರವಾಗದ ಕಾರಣ ಬೀಜ ಪ್ರಸಾರ ಕಡಿಮೆಯಾಗಿದೆ. ಕಳೆದ ಎರಡು ದಶಕಗಳಲ್ಲಿ ಹುಟ್ಟಿದ ಹೊಸ ಸಸಿಗಳು ಹುಟ್ಟಿಲ್ಲ. ಇದರಿಂದ ಉಪ್ಪಾಗೆ ಈಗ ಅಪರೂಪವಾಗಿದೆ.
ಅಪಾರ ಕಾಡು ನಾಶ: ಉಪ್ಪಾಗೆ ಮಳೆಗಾಲದಲ್ಲಿ ಹಣ್ಣಾಗುವುದರಿಂದ ಬಿಸಿಲಲ್ಲಿ ಅದನ್ನು ಒಣಗಿಸಲು ಸಾಧ್ಯವಿಲ್ಲ. ಇದರಿಂದ ಅದನ್ನು ಒಣಗಿಸಲು ಬೆಂಕಿಯನ್ನು ಬಳಸಲಾಗುತ್ತದೆ. ಒಂದು ಕ್ವಿಂಟಾಲ್ ಒಣಗಿದ ಉಪ್ಪಾಗೆ ತಯಾರಿಸಲು 20ರಿಂದ 25ಕ್ವಿಂಟಾಲ್ ಒಣ ಕಟ್ಟಿಗೆ ಬೇಕಾಗುತ್ತದೆ. ಇದರಿಂದ ದೊಡ್ಡ ಪ್ರಮಾಣದಲ್ಲಿ ಕಾಡು ನಾಶವಾಗುತ್ತದೆ ಎಂಬ ಕೂಗೂ ಇದೆ.