ಇಂದಿನಿಂದ ವೈಲ್ಡ್ ಮಾಸ್ಟರ್ಸ್‌ ಸೀಸನ್-೩ ಕ್ರಿಕೆಟ್ ಪಂದ್ಯಾಟ

images
Published on

ಮಡಿಕೇರಿ: ಜಿಲ್ಲೆಯಲ್ಲಿಯೇ ಮೊದಲ ಬಾರಿಗೆ ಟಿ-೧೦(೧೦ ಓವರ್‌ಗಳ) ಮಾದರಿಯ ಲೆದರ್‌ಬಾಲ್ ಕ್ರಿಕೆಟ್ ಪಂದ್ಯಾಟ ಇಂದಿನಿಂದ ನಗರದ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಪ್ರಾರಂಭವಾಗಲಿದೆ ಎಂದು ವೈಲ್ಡ್ ಮಾಸ್ಟರ್ಸ್‌ನ ರಿಷಿತ್ ಮಾದಯ್ಯ ತಿಳಿಸಿದ್ದಾರೆ.


ವೈಲ್ಡ್ ಮಾಸ್ಟರ್ಸ್‌ ಕೊಡಗು ಆಯೋಜಿತ ಲೆದರ್ ಬಾಲ್ ಟೂರ್ನಿಯು ೩ನೇ ಆವೃತ್ತಿಯಲ್ಲಿ ಮೊದಲ ಬಾರಿಗೆ ೧೦ ಓವರ್‌ಗಳಿಗೆ ಸೀಮಿತವಾಗಿರುವ ಟೂರ್ನಿ ಇದಾಗಲಿದೆ. ಈ ಹಿಂದಿನ ೨ ಆವೃತ್ತಿಗಳೂ ೨೦ ಓವರ್‌ಗಳಿಗೆ ಸೀಮಿತವಾಗಿದ್ದವು. ಇದೀಗ ಹೆಚ್ಚಿನ ಕ್ರೀಡಾಭಿಮಾನಿಗಳನ್ನು ಆಕರ್ಷಿಸಲು ಪಂದ್ಯಾಟ ೧೦ ಓವರ್‌ಗಳಿಗೆ ಸೀಮಿತ ಮಾಡಲಾಗಿದ್ದು, ಕ್ರಿಕೆಟ್ ಪ್ರೇಮಿಗಳಿಗೆ ಮನರಂಜನೆ ನೀಡಲಿದೆ.


ಜ.೧೮ ರಿಂದ(ಇಂದಿನಿಂದ) ಜ೨೨ ರವರೆಗೆ ಲೀಗ್ ಮಾದರಿಯಲ್ಲಿ ಪಂದ್ಯಾಟ ನಡೆಯಲಿದ್ದು, ೬ ತಂಡಗಳು ಪಾಲ್ಗೊಳ್ಳಲಿವೆ. ಪ್ರತಿನಿತ್ಯ ೩ ಪಂದ್ಯಾಟಗಳು ನಡೆಯಲಿವೆ. ಹರಾಜು ಪ್ರಕ್ರಿಯೆ ಮೂಲಕ ಆಟಗಾರರ ಬಿಡ್ಡಿಂಗ್ ಪ್ರಕ್ರಿಯೆ ನಡೆದಿದ್ದು, ೬ ತಂಡಗಳಾದ ಕರವಲೆ ಭಗವತಿ-ಮಡಿಕೇರಿ, ಶ್ರೀ ಕೋಟೆ ಮಹಾಗಣಪತಿ-ಮಡಿಕೇರಿ, ಮ್ಯಾಕ್ಸ್‌ವೆಲ್ ಕೊಡಗು, ಕಿಂಬರ್ಲಿ ಕೂರ್ಗ್, ಟೀಂ ಧಾರ್ಮಿಕ್ ಮಡಿಕೇರಿ ಹಾಗೂ ಸ್ಪೋರ್ಟ್ಸ್ ವರ್ಲ್ಡ್-ಮಡಿಕೇರಿ ತಂಡಗಳು ಟೂರ್ನಿಯಲ್ಲಿ ಪಾಲ್ಗೊಳ್ಳಲಿವೆ ಎಂದು ರಿಷಿತ್ ಮಾದಯ್ಯ ಮಾಹಿತಿ ನೀಡಿದ್ದಾರೆ.


ಉದ್ಘಾಟನೆ: ಟೂರ್ನಿಯ ಉದ್ಘಾಟನೆ ಜ೧೮ರ(ಇಂದು) ಬೆಳಿಗ್ಗೆ ನಗರದ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ವೈಲ್ಡ್ ಮಾಸ್ಟರ್ಸ್‌ನ ಎನ್.ರವಿಕಿರಣ್ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶಕ್ತಿ ಪತ್ರಿಕೆಯ ಸಲಹಾ ಸಂಪಾದಕ ಬಿ.ಜಿ.ಅನಂತಶಯನ ಹಾಗೂ ಎಮ್ ಆ್ಯಂಡ್ ಎಮ್ ಗ್ರೂಪ್ಸ್‌ನ ನಾಪಂಡ ಮುತ್ತಪ್ಪ ಭಾಗವಹಿಸಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net