ವಿದ್ಯುನ್​ಗೆ 'ವೈಲ್ಡ್​ ಲೈಫ್​ ಫೋಟೋಗ್ರಾಫರ್​' ಪ್ರಶಸ್ತಿ

UDP-1-8-Vidhyun
Published on

ವಿಶ್ವದ ಗಮನ ಸೆಳೆದ ಉಡುಪಿಯ ಪೋರ

ಅದ್ವೀತಿಯ ಸಾಧನೆ ಮಾಡಿದ ಹೆಬ್ಬಾರ

ವಿಜಯವಾಣಿ ಸುದ್ದಿಜಾಲ ಉಡುಪಿ
ವನ್ಯಜಿವಿ ಛಾಯಾಗ್ರಹಣ ದೊಡ್ಡವರಿಗೂ ಕಷ್ಟದ ಕೆಲಸ. ಹೀಗಿರುವಾಗ ಕೇವಲ 10 ವರ್ಷದವನಾಗಿದ್ದಾಗ ಅದ್ವೀತಿಯ ಸಾಧನೆ ಮಾಡಿದ್ದ ಉಡುಪಿಯ ವಿದ್ಯುನ್​ ಆರ್​. ಹೆಬ್ಬಾರ್​ಗೆ ಇದೀಗ ಲಂಡನ್​ನಿಂದ ವಿಶೇಷ ಆಹ್ವಾನ ಬಂದಿದೆ.

2021ರ ವೈಲ್ಡ್​ ಲೈಫ್​ ಫೋಟೋಗ್ರಾಫರ್​ ಆಫ್​ ದ ಇಯರ್​ ಎಂಬ ಲಂಡನ್​ನಲ್ಲಿ ನಡೆದ ಅಂತಾರಾಷ್ಟ್ರೀಯ ಛಾಯಾಚಿತ್ರ ಪ್ರಶಸ್ತಿಯ 18 ವರ್ಷದೊಳಗಿನ ವಿಭಾಗದಲ್ಲಿ ವಿದ್ಯುನ್​ ಗ್ರ್ಯಾಂಡ್ ಟೈಟಲ್​ ಪ್ರಶಸ್ತಿ ಗೆದ್ದಿದ್ದನು. ಈ ಪ್ರಶಸ್ತಿಯನ್ನು ವೈಲ್ಡ್​ ಲೈಫ್​ ಫೋಟೋಗ್ರಾಫಿಯ ಆಸ್ಕರ್ಸ್​ ಎಂದೇ ಕರೆಯಲಾಗುತ್ತದೆ.

ಅ.8ಕ್ಕೆ ಕಾರ್ಯಕ್ರಮ

ಕರೊನಾ ವೈರಸ್​ ಕಾರಣದಿಂದಾಗಿ ಆನ್​ಲೈನ್​ ಕಾರ್ಯಕ್ರಮದ ಮೂಲಕ ಆತನಿಗೆ ಅಂದು ಪ್ರಶಸ್ತಿ ಪ್ರದಾನ ಮಾಡಲಾಗಿತ್ತು. ಇದೀಗ 2021ರ ಆ ಪ್ರಶಸ್ತಿ ಪ್ರದಾನ ಕಾರ್ಯಕ್ರಮದ 60ನೇ ವರ್ಷದ ಸಂಭ್ರಮೋತ್ಸವ ಲಂಡನ್​ ನಡೆಯಲಿದ್ದು, ವಿದ್ಯುನ್​ಗೆ ವಿಶೇಷ ಆಹ್ವಾನ ಬಂದಿದೆ. ಅ.8ರಂದು ನಡೆಯುವ ಕಾರ್ಯಕ್ರಮದಲ್ಲಿ ಆತ ಪಾಲ್ಗೊಳ್ಳಲಿದ್ದಾನೆ.

ತಂದೆಯ ಹಾದಿಯಲ್ಲಿ ಸುಪುತ್ರ

ಪ್ರಸ್ತುತ 13 ವರ್ಷದ ವಿದ್ಯುನ್​ ಹೆಬ್ಬಾರ್​ ಹುಳಿಮಾವು ಗ್ರಾಮದ ಬಿಜಿಎಸ್​ ಎನ್​ಪಿಎಸ್​ ಶಾಲೆಯ 8ನೇ ತರಗತಿ ವಿದ್ಯಾರ್ಥಿಯಾಗಿದ್ದು, ರವಿಪ್ರಕಾಶ್​ ಮತ್ತು ನಮಿತಾ ದಂಪತಿಯ ಪುತ್ರ. ತಂದೆಯೂ ಸಹ ಛಾಯಾಗ್ರಾಹಕರಾಗಿದ್ದು, 2014ರಲ್ಲಿ ಅವರೂ ಸಹ ಅದೇ ಪ್ರಶಸ್ತಿಗೆ ಭಾಜನರಾಗಿದ್ದರು. ಚಿಕ್ಕಂದಿನಿಂದಲೂ ವನ್ಯಜಿವಿ ಛಾಯಾಗ್ರಹಣದಲ್ಲಿ ಆಸಕ್ತಿ ಹೊಂದಿದ್ದ ಆತ, 3 ವರ್ಷದವನಾಗಿದ್ದಾಗಲೇ ತಂದೆಯ ಡಿಎಸ್​ಎಲ್​ಆರ್​ ಕ್ಯಾಮರಾದಿಂದ ಛಾಯಾಗ್ರಹಣ ಮಾಡುವುದನ್ನು ಕಲಿತಿದ್ದು, ಆ ಕಲೆ ರಕ್ತಗತವಾಗಿ ಬಂದಿದೆ. ಅಂತಾರಾಷ್ಟ್ರೀಯ ಪ್ರಶಸ್ತಿಯೊಂದಿಗೆ ಛಾಯಾಗ್ರಹಣ ಕೌಶಲ ಮೆರೆದಿರುವ ಬಾಲಕ, ಯಕ್ಷಗಾನ ಕಲಾವಿದ ಹರಿದಾಸ ಮಲ್ಪೆ ರಾಮದಾಸ ಸಾಮಗ ಹಾಗೂ ನಾಗರತ್ನಾ ಸಾಮಗ ದಂಪತಿಯ ಮರಿಮಗ, ಸಾಹಿತಿ ಅಂಬುಜಾ ಅವರ ಮೊಮ್ಮಗನಾಗಿದ್ದಾನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net