ಮಾನವ-ವನ್ಯಜೀವಿ ಸಂಘರ್ಷಕ್ಕೆ ಕೊನೆ ಎಂದು ?

wild life
Published on

ಮಡಿಕೇರಿ:

ಪಶ್ಚಿಮ ಘಟ್ಟದ ಸೆರಗಿನಲ್ಲಿ ಇರುವ ಮಲೆನಾಡು ಜಿಲ್ಲೆ ಕೊಡಗಿನಲ್ಲಿ ಮಾನವ-ವನ್ಯಜೀವಿ ಸಂಘರ್ಷ ಹೊಸದಲ್ಲ. ಆದರೆ ಇತ್ತೀಚಿನ ವರ್ಷಗಳಲ್ಲಿ ಜನವಸತಿ ಪ್ರದೇಶಗಳಿಗೆ ಕಾಡುಪ್ರಾಣಿಗಳು ದಾಳಿ ಇರುವ ಪ್ರಕರಣಗಳು ಹೆಚ್ಚಾಗಿ ವರದಿ ಆಗುತ್ತಿದೆ. ಇದನ್ನು ತಡೆಯಲು ಸಾಕಷ್ಟು ಕ್ರಮಗಳನ್ನು ತೆಗೆದುಕೊಂಡಿರುವುದಾಗಿ ಸರ್ಕಾರಿ ಅಂಕಿ ಅಂಶಗಳು ಹೇಳುತ್ತಿದ್ದರೂ ಕಾಡಿನ ಜೀವಿಗಳ ಹಾವಳಿಯಿಂದ ಮಾನವ, ಸಾಕು ಪ್ರಾಣಿ ಪ್ರಾಣ ಹಾನಿ ಮತ್ತು ಬೆಳೆ ನಷ್ಟ ಮಾತ್ರ ಕಡಿಮೆ ಆಗದಿರುವುದು ಆತಂಕಕ್ಕೆ ಕಾರಣವಾಗಿದೆ.

ರಾಜ್ಯದಲ್ಲಿ 2023-24ನೇ ಸಾಲಿನಲ್ಲಿ ವನ್ಯಜೀವಿಗಳಿಂದ ದಾಳಿಗೆ ಒಳಗಾಗಿ ಒಟ್ಟು 65 ಜನರು ಮೃತಪಟ್ಟಿದ್ದಾರೆ. ಇದರಲ್ಲಿ ಅತೀ ಹೆಚ್ಚು ಅಂದರೆ 18 ಪ್ರಾಣ ಹಾನಿ ಚಾಮರಾಜನಗರ ಜಿಲ್ಲೆಯಲ್ಲಿ ಸಂಭವಿಸಿದ್ದರೆ, ಕೊಡಗಿನಲ್ಲಿ 10 ಜನರು ಪ್ರಾಣ ಕಳೆದುಕೊಳ್ಳುವ ಮೂಲಕ ಜಿಲ್ಲೆ 2ನೇ ಸ್ಥಾನದಲ್ಲಿದೆ. 2025ರಲ್ಲೂ ಈ ದುರಂತಗಳು ಮುಂದುವರಿದಿದ್ದು, ರಾಜ್ಯದಲ್ಲಿ ಈತನಕ 42 ಜನರು ವನ್ಯಜೀವಿಗಳಿಂದಾಗಿ ಪ್ರಾಣ ಕಳೆದುಕೊಳ್ಳುವಂತಾಗಿದೆ. ಇಲ್ಲಿ ಕೊಡಗು ಮೊದಲ ಸ್ಥಾನದಲ್ಲಿ ಇದೆ. ಜಿಲ್ಲೆಯಲ್ಲಿ ಈ ತನಕ 9 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಚಾಮರಾಜನಗರ ಜಿಲ್ಲೆ 2ನೇ ಸ್ಥಾನದಲ್ಲಿದ್ದು, 8 ಜನರನ್ನು ವನ್ಯಪ್ರಾಣಿಗಳು ಬಲಿ ತೆಗೆದುಕೊಂಡಿವೆ.

ವನ್ಯಜೀವಿಗÀಳ ಪೈಕಿ ಮನುಷ್ಯರಿಗೆ ಹೆಚ್ಚು ಕಂಟಕ ತಂದಿಡುತ್ತಿರುವುದು ಕಾಡಾನೆಗಳು. ಕಾಡಾನೆಗಳಿಂದ ದಾಳಿಗೆ ಒಳಗಾಗಿ 2023-24ನೇ ಸಾಲಿನಲ್ಲಿ ರಾಜ್ಯದಲ್ಲಿ 48 ಅಮಾಯಕರು ಸಾವಿಗೆ ಈಡಾಗಿದ್ದಾರೆ. ಈ ವಿಷಯದಲ್ಲಿ ಕೊಡಗು ಮತ್ತು ಚಾಮರಾಜನಗರ ಪ್ರಥಮ ಸ್ಥಾನ ಹಂಚಿಕೊAಡಿವೆ. 2 ಜಿಲ್ಲೆಗಳಲ್ಲೂ ಕಳೆದ ವರ್ಷ 13 ಮಂದಿ ಆನೆಗಳಿಗೆ ಬಲಿಯಾಗಿದ್ದಾರೆ. ಈ ವರ್ಷದ ಇಲ್ಲಿಯ ತನಕದ ಅಂಕಿ-ಅAಶದ ಪ್ರಕಾರ ರಾಜ್ಯದಲ್ಲಿ ಕಾಡಾನೆ ದಾಳಿಗೆ 32 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಈ ಅವಧಿಯಲ್ಲೂ ಚಾಮರಾಜನಗರ ಮತ್ತು ಕೊಡಗು ಈ ವಿಷಯದಲ್ಲಿ ಮೊದಲನೇ ಸ್ಥಾನದಲ್ಲಿದ್ದು, 2 ಜಿಲ್ಲೆಯಲ್ಲೂ ತಲಾ 8 ಜನರು ಈ ತನಕ ಕಾಡಾನೆ ದಾಳಿಯಿಂದ ಪ್ರಾಣ ಕಳೆದುಕೊಂಡಿದ್ದಾರೆ.

ಮಾನವ-ವನ್ಯಜೀವಿ ಸಂಘರ್ಷಕ್ಕೆ ಕಡಿವಾಣ ಹಾಕಲು ಸರ್ಕಾರವೂ ಸಾಕಷ್ಟು ಕ್ರಮಗಳನ್ನು ತೆಗೆದುಕೊಂಡಿರುವ ಬಗ್ಗೆ ದಾಖಲೆಗಳನ್ನು ಕೊಡುತ್ತದೆ. ಮಾನವ ಪ್ರಾಣ ಹಾನಿ, ಬೆಳೆ ನಷ್ಟಕ್ಕೆ ಪರಿಹಾರವನ್ನು ಕೂಡ ಕೊಡುತ್ತಾ ಬಂದಿದೆ. ಇಷ್ಟಾದರೂ ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಇನ್ನೂ ಯಾಕೆ ಸಾಧ್ಯ ಆಗಿಲ್ಲ ಎನ್ನುವುದು ಪ್ರಜ್ಞಾವಂತರ ಪ್ರಶ್ನೆ. ಭೌತಿಕ ಅಡೆತಡೆಗಳ ನಿರ್ಮಾಣ, ಆನೆ ಕಾರ್ಯಪಡೆಗಳ ಸ್ಥಾಪನೆ, ಚಿರತೆ ಕಾರ್ಯಪಡೆಗಳ ಸ್ಥಾಪನೆ, ಜಲಸಂಪನ್ಮೂಲ ಅಭಿವೃದ್ಧಿ, ಆವಾಸ ಸ್ಥಾನಗಳ ಅಭಿವೃದ್ಧಿ, ತ್ವರಿತ ಕಾರ್ಯಾಚರಣೆ, ತಂತ್ರಜ್ಞಾನಗಳ ಬಳಕೆ, ಅರಿವು ಕಾರ್ಯಕ್ರಮ, ರೈತರಿಗೆ ಸಹಾಯಧನ ಮತ್ತಿತರ ಯೋಜನೆಗಳನ್ನು ಸರ್ಕಾರ ರೂಪಿಸಿ ಅನುಷ್ಠಾನಕ್ಕೆ ತಂದಿದ್ದರೂ ವನ್ಯ ಪ್ರಾಣಿಗಳಿಗೆ ಬಲಿಯಾಗುವವರ ಸಂಖ್ಯೆ ಮಾತ್ರ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇರುವುದು ಅಚ್ಚರಿಗೆ ಕಾರಣವಾಗಿದೆ.

ಸರ್ಕಾರ ರೂಪಿಸಿರುವ ಬಹುತೇಕ ಯೋಜನೆಗಳು ದಾಖಲೆಗಳಲ್ಲಿ ಮಾತ್ರ ಇರುತ್ತದೆ. ಪರಿಣಾಮಕಾರಿಯಾಗಿ ಅನುಷ್ಠಾನ ಆಗದಿರುವುದರಿಂದ ಸಮಸ್ಯೆ ಹೆಚ್ಚಾಗಿ ಕಂಡು ಬರುತ್ತದೆ ಎನ್ನುವುದು ಕಾಡಂಚಿನ ನಿವಾಸಿಗಳ ಆರೋಪ. ಆನೆ ಕಂದಕಗಳನ್ನು ನಿರ್ವಹಣೆ ಮಾಡುವುದಿಲ್ಲ. ಸೋಲಾರ್ ಬೇಲಿಯಲ್ಲಿ ಬಹುತೇಕ ಕಡೆಗಳಲ್ಲಿ ವಿದ್ಯುತ್ ಹರಿಯುವುದಿಲ್ಲ. ರೈಲ್ವೇ ಹಳಿ ಬ್ಯಾರಿಕೇಡ್ ನಿರ್ಮಾಣ ಕಾಮಗಾರಿ ಕಳಪೆಯಾಗಿದ್ದು, ಆನೆಗಳು ಸುಲಭವಾಗಿ ದಾಟುವಂತೆ ಇರುತ್ತದೆ ಎಂದು ಅರಣ್ಯ ಇಲಾಖೆಯ ಬೇಜವಾಬ್ದಾರಿಯನ್ನು ಸ್ಥಳೀಯರು ಪಟ್ಟಿ ಮಾಡುತ್ತಾರೆ.

ಮಾನವ-ವನ್ಯಜೀವಿ ಸಂಘರ್ಷ ಹೆಚ್ಚಾಗುತ್ತಿರುವುದಕ್ಕೆ ಕಾರಣ, ಇದಕ್ಕೆ ಯಶಸ್ವಿ ಪರಿಹಾರದ ಬಗ್ಗೆ ವೈಜ್ಞಾನಿ ಅಧ್ಯಯನ ನಡೆಸಿದೆ ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತಂದಾಗ ಮಾತ್ರ ಈ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಬಹುದು ಎನ್ನುವುದು ಪ್ರಜ್ಞಾವಂತರ ಅಭಿಪ್ರಾಯ.

ಆನೆ ಸೇರಿದಂತೆ ವನ್ಯಪ್ರಾಣಿ ದಾಳಿಯಿಂದ ಉಂಟಾದ ಮಾನವ ಪ್ರಾಣ ಹಾನಿ ಪ್ರಕರಣಕ್ಕೆ 2022ರ ಡಿ.15ರ ಸರ್ಕಾರಿ ಆದೇಶದ ಪ್ರಕಾರ 15 ಲಕ್ಷ ರೂ.ಗಳ ದಯಾತ್ಮಕ ಧನ ಪಾವತಿಸಲಾಗುತ್ತಿದೆ. ಮೃತಪಟ್ಟ ವ್ಯಕ್ತಿಯ ವಾರಸುದಾರರಿಗೆ ಈ ದಯಾತ್ಮಕ ಧನ ನೀಡುವುದರ ಜತೆಗೆ ತಿಂಗಳಿಗೆ 4 ಸಾವಿರ ರೂ.ಗಳಂತೆ 5 ವರ್ಷಗಳ ಅವಧಿಗೆ ಮಾಸಾಶನ ಪಾವತಿಸುವ ಅವಕಾಶವೂ ಇದೆ. ಗಾಯಾಳುಗಳಿಗೆ ಪ್ರತ್ಯೇಕ ದಯಾತ್ಮಕ ಧನ ಕೊಡಲಾಗುತ್ತದೆ. ಸಾಕುಪ್ರಾಣಿ ಜೀವ ಹಾನಿಗೂ ಪರಿಹಾರ ಇದೆ. 2023ರ ಜ. 18ರ ಸರ್ಕಾರಿ ಆದೇಶದ ಪ್ರಕಾರ ವನ್ಯಪ್ರಾಣಿಗಳ ದಾಳಿಯಿಂದ ಉಂಟಾದ ಬೆಳೆ ನಾಶ ಪ್ರಕರಣಗಳಿಗೆ ಪ್ರಸ್ತುತ ದರಗಳನ್ನು ಮರು ನಿಗಧಿಪಡಿಸಿ ಹಿಂದಿನ ಸರ್ಕಾರಿ ಆದೇಶದಲ್ಲಿ ನೀಡಲಾಗುತ್ತಿದ್ದ ಬೆಳೆಗಳ ದರಗಳನ್ನು ದ್ವಿಗುಣಗೊಳಿಸಿ ದಯಾತ್ಮಕ ಧನ ಪಾವತಿಸಲಾಗುತ್ತಿದೆ.

ಸಮಸ್ಯೆಗಳು ಎದುರಾದಾಗ ಮನುಷ್ಯರಿಗೆ ಅಪಾಯಕಾರಿಯಾದ ಪ್ರಾಣಿಗಳನ್ನು ಸೆರೆ ಹಿಡಿಯಲು ಒತ್ತಾಯ ಕೇಳಿಬರುತ್ತದೆ. ಆದರೆ ಇದು ಅಷ್ಟು ಸುಲಭದ ಪ್ರಕ್ರಿಯೆ ಅಲ್ಲ. ಆರ್ಥಿಕವಾಗಿಯೂ ಹೆಚ್ಚು ವೆಚ್ಚದಾಯಕವಾಗಿರುತ್ತದೆ. ಮಾನವ-ವನ್ಯಜೀವಿ ಸಂಘರ್ಷಕ್ಕೆ ಕಾರಣವಾಗುವ ಕಾಡಾನೆ ಅಥವಾ ಹುಲಿಗಳನ್ನು ಸ್ಪಷ್ಟವಾಗಿ ಗುರುತಿಸಿ, ಮುಖ್ಯ ವನ್ಯಜೀವಿ ಪರಿಪಾಲಕರಿಂದ ಅನುಮತಿ ಪಡೆದ ನಂತರ ಅರಣ್ಯ ಇಲಾಖೆಯ ಸಾಕಾನೆಗಳನ್ನು ಒಳಗೊಂಡAತೆ ಅಧಿಕಾರಿ, ಸಿಬ್ಬಂದಿ ಹಾಗೂ ಪಶುವೈದ್ಯಾಧಿಕಾರಿಗಳ ತಂಡ ರಚಿಸಿಕೊಂಡು ಸೆರೆಹಿಡಿಯುವ ಕಾರ್ಯಾಚರಣೆ ನಡೆಸಲಾಗುತ್ತದೆ. ಈ ಪ್ರಕ್ರಿಯೆಯಲ್ಲಿ ಯಶಸ್ವಿಯಾಗಿ ಸೆರೆ ಹಿಡಿಯುವ ಕಾರ್ಯ ಪೂರ್ಣಗೊಳ್ಳುವವರೆಗೆ ಕಾರ್ಯಾಚರಣೆ ನಿರಂತರವಾಗಿ ನಡೆಯಬೇಕಾಗುತ್ತದೆ. ಹಾಗಾಗಿ ಒಂದು ಕಾರ್ಯಾಚರಣೆಗೆ ಇಷ್ಟೇ ವೆಚ್ಚ ಆಗುತ್ತದೆ ಎಂದು ನಿಖರವಾಗಿ ಹೇಳುವುದು ಕಷ್ಟ ಎನ್ನುತ್ತಾರೆ ಅರಣ್ಯ ಇಲಾಖೆ ಅಧಿಕಾರಿಗಳು.

ಸಾಕಾನೆಗಳನ್ನು ಆನೆ ಶಿಬಿರಗಳಿಂದ ಸೆರೆ ಹಿಡಿಯಲು ನಿರ್ಧರಿಸಿರುವ ಪ್ರದೇಶಕ್ಕೆ ಸ್ಥಳಾಂತರಿಸಲು ಉಪಯೋಗಿಸುವ ಲಾರಿಗಳ ಬಾಡಿಗೆ, ಅವುಗಳ ಊಟ, ಸಿಬ್ಬಂದಿ ಹಾಗೂ ಸೆರೆ ಹಿಡಿಯುವ ಕಾರ್ಯಾಚರಣೆಯಲ್ಲಿ ಪಾಲ್ಗೊಳ್ಳುವ ಆನೆ ಮಾವುತ, ಕಾವಾಡಿಗಳು, ವಾಹನ ಚಾಲಕರುಗಳ ಊಟದ ವ್ಯವಸ್ಥೆ, ತಾತ್ಕಾಲಿಕ ಶಿಬಿರಗಳ ನಿರ್ಮಾಣ, ಕ್ರೇನ್‌ಗಳ ಬಳಕೆ ಹೀಗೆ ವಿವಿಧ ರೀತಿಯ ಕೆಲಸಗಳಿಗಾಗಿ ಒಂದು ಕಾಡಾನೆ ಸೆರೆಹಿಡಿಯಲು ಅಂದಾಜು 10 ರಿಂದ 12 ಲಕ್ಷ ರೂ. ಮತ್ತು ಒಂದು ಹುಲಿ ಸೆರೆಹಿಡಿಯಲು 4 ರಿಂದ 5 ಲಕ್ಷ ರೂ. ವೆಚ್ಚ ತಗಲಬಹುದು ಎಂದು ಅಂದಾಜಿಸಲಾಗಿದೆ.

ಹುಲಿ ಸೆರೆ ಹಿಡಿಯುವ ಕಾರ್ಯಾಚರಣೆ ಸಂದರ್ಭದಲ್ಲಿ ಸಾಕಾನೆ ಮತ್ತು ಅರಣ್ಯ ಇಲಾಖೆ ಕ್ಷೇತ್ರ ಸಿಬ್ಬಂದಿ ಹಾಗೂ ಸ್ಥಳೀಯ ಜನರಿಗೆ ಯಾವುದೇ ಅಪಾಯವಾಗದಂತೆ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ನವದೆಹಲಿಯ ರಾಷ್ಟಿçÃಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಮಾರ್ಗಸೂಚಿಗಳನ್ವಯ ಕಟ್ಟುನಿಟ್ಟಿನ ಅಗತ್ಯ ಕ್ರಮವನ್ನು ತೆಗೆದುಕೊಳ್ಳಲಾಗುತ್ತದೆ. ಆನೆ ಸೆರೆ ಹಿಡಿಯುವ ಕಾರ್ಯಾಚರಣೆ ವೇಳೆ ಕರ್ನಾಟಕ ಸರ್ಕಾರದಿಂದ ಅನುಮೋದಿತವಾಗಿರುವ ಕಾಡಾನೆ ಸೆರಹಿಡಿಯುವ ಪ್ರಮಾಣಿತ ಕಾರ್ಯಾಚರಣೆ ಕೈಪಿಡಿಯನ್ವಯ ಕ್ರಮ ಕೈಗೊಳ್ಳಲಾಗುತ್ತದೆ.

ಕಾಡಂಚಿನ ಗ್ರಾಮಗಳಲ್ಲಿ ವಾಸ ಮಾಡುವ ನಮ್ಮಂಥವರಿಗೆ ಮಾನವ-ವನ್ಯಜೀವಿ ಸಂಘರ್ಷ ಹೊಸದಲ್ಲ. ಆದರೆ ಇತ್ತೀಚಿನ ವರ್ಷಗಳಲ್ಲಿ ಇದು ಹೆಚ್ಚಾಗುತ್ತಿದೆ. ವನ್ಯಜೀವಿ ಹಾವಳಿ ತಡೆಗಟ್ಟಲು ಸರ್ಕಾರ ತೆಗೆದುಕೊಳ್ಳುತ್ತಿರುವ ಕ್ರಮಗಳು ಪರಿಣಾಮಕಾರಿಯಾಗಿಲ್ಲ. ವನ್ಯಜೀವಿ ದಾಳಿಯಿಂದ ಮೃತಪಟ್ಟ ಸಂಬAಧ ವಾರಸುದಾರರಿಗೆ ಪರಿಹಾರವೇನೋ ಕೊಡುತ್ತಾರೆ. ಆದರೆ ಹೋದ ಜೀವ ಮರಳಿ ಬರುತ್ತದಾ? ಮಾನವ-ವನ್ಯಜೀವಿ ಸಂಘರ್ಷಕ್ಕೆ ಕಾರಣ ಮತ್ತು ಪರಿಹಾರೋಪಾಯಗಳ ಬಗ್ಗೆ ವೈಜ್ಞಾನಿಕ ಅಧ್ಯಯನ ನಡೆಯಬೇಕಿದೆ.

ಹೇಮಂತ್ ಪಾರೇರ, ಕೃಷಿಕ ಯಡವನಾಡು ಗ್ರಾಮ

ಕಾಡಾನೆಗಳು ಸೇರಿದಂತೆ ವನ್ಯ ಪ್ರಾಣಿಗಳು ಅರಣ್ಯ ಪ್ರದೇಶದಿಂದ ಹೊರಗೆ ಬಾರದಂತೆ ತಡೆಗಟ್ಟಲು ಅರಣ್ಯದಂಚಿನಲ್ಲಿ ಸೌರಶಕ್ತಿ ಬೇಲಿ ನಿರ್ಮಾಣ,ನಿರ್ವಹಣೆ, ಆನೆತಡೆ ಕಂದಕ ನಿರ್ಮಾಣ, ನಿರ್ವಹಣೆ ಮಾಡಲಾಗುತ್ತಿದೆ. ರೈಲ್ವೇ ಹಳಿಗಳನ್ನು ಉಪಯೋಗಿಸಿ ಬ್ಯಾರಿಕೇಡ್ ನಿರ್ಮಿಸುವ ಕಾಮಗಾರಿ ನಡೆದಿದೆ. 391.832 ಕಿ.ಮೀ. ರೈಲ್ವೆ ಬ್ಯಾರಿಕೇಡ್ ನಿರ್ಮಿಸಲಾಗಿದೆ. ಇದರ ಜತೆಗೆ ಆನೆ ಕಾರ್ಯಪಡೆಗಳ ಸ್ಥಾಪನೆ, ಚಿರತೆ ಕಾರ್ಯಪಡೆಗಳ ಸ್ಥಾಪನೆ, ಜಲಸಂಪನ್ಮೂಲ ಅಭಿವೃದ್ಧಿ, ಆವಾಸ ಸ್ಥಾನಗಳ ಅಭಿವೃದ್ಧಿ, ತ್ವರಿತ ಕಾರ್ಯಾಚರಣೆ, ತಂತ್ರಜ್ಞಾನಗಳ ಬಳಕೆ, ಅರಿವು ಕಾರ್ಯಕ್ರಮ, ರೈತರಿಗೆ ಸಹಾಯಧನ ಮತ್ತಿತರ ಯೋಜನೆಗಳನ್ನು

ರೂಪಿಸಲಾಗಿದೆ.

ಈಶ್ವರ ಬಿ. ಖಂಡ್ರೆ, ಅರಣ್ಯ, ಜೀವಿಶಾಸ್ತç ಮತ್ತು ಪರಿಸರ ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net