ಬಂದ ಹಾದಿಯಲ್ಲೇ ಕಾಡಾನೆಗಳ ಪಯಣ : ಕೊಳ್ತಿಗೆ ಗ್ರಾಮದ ಬೀರ‌್ನಕಜೆ ಪ್ರದೇಶದಲ್ಲಿ ಗಜಪಡೆ ಪ್ರತ್ಯಕ್ಷ

elephant
Published on

ಪುತ್ತೂರು ಗ್ರಾಮಾಂತರ: ಪುತ್ತೂರು ಮತ್ತು ಕಡಬ ತಾಲೂಕಿನ ವಿವಿಧ ಕಡೆಗಳಿಗೆ ತೆರಳಿ ಕೃಷಿ ಹಾನಿ ಮಾಡಿ ಜನರಲ್ಲಿ ಆತಂಕ ಸೃಷ್ಟಿಸಿದ್ದ ಕಾಡಾನೆಗಳೆರಡು ಬೆಳ್ಳಿಪ್ಪಾಡಿ ಗ್ರಾಮದ ಕೊಡಿಮರ-ಕಠಾರ ವ್ಯಾಪ್ತಿಯಿಂದ ಹಿಂತಿರುಗಿ ಬಂದ ಹಾದಿಯಲ್ಲೇ ಕೆಯ್ಯೂರು, ಪಾಲ್ತಾಡು ಗ್ರಾಮ ವ್ಯಾಪ್ತಿಯ ಮೂಲಕವಾಗಿ ಶನಿವಾರ ಕೊಳ್ತಿಗೆ ಗ್ರಾಮದ ಬೀರ‌್ನಕಜೆ ಪ್ರದೇಶ ಸೇರಿಕೊಂಡಿವೆ.

ಬೆಳ್ಳಿಪ್ಪಾಡಿ ಗ್ರಾಮದ ಕೊಡಿಮರ-ಬಾರ್ತೋಳಿ ಜನವಸತಿ ಪ್ರದೇಶಕ್ಕೆ ಬಂದು ಆತಂಕದ ವಾತಾವರಣ ಸೃಷಿಸಿದ್ದ ಕಾಡಾನೆಗಳೆರಡು ಆ ಬಳಿಕ ಬೆಳ್ಳಿಪ್ಪಾಡಿ ಗ್ರಾಮದ ಕಠಾರ ರಕ್ಷಿತಾರಣ್ಯ ಪ್ರದೇಶ ಸೇರಿಕೊಂಡಿದ್ದವು. ಅಲ್ಲಿಂದ ಪಯಣ ಮುಂದುವರಿಸಿದ ಕಾಡಾನೆಗಳು ಶಾಂತಿಗೋಡು ಗ್ರಾಮದ ಪಂಜಿಗ ವ್ಯಾಪ್ತಿಯ ಮೂಲಕವಾಗಿ ಶುಕ್ರವಾರ ಸಂಜೆಯ ವೇಳೆ ಕೆಯ್ಯೂರು ಗ್ರಾಮದ ತೆಗ್ಗು-ಓಲೆಮುಂಡೋವು ವ್ಯಾಪ್ತಿಯ ಅಂಗತ್ತಡ್ಕ ಪ್ರದೇಶಕ್ಕೆ ಕಾಲಿಟ್ಟಿದ್ದವು. ಅಲ್ಲಿನ ರಸ್ತೆಯಲ್ಲಿ ಕಾಡಾನೆಗಳೆರಡು ನಡೆದುಕೊಂಡು ಹೋಗುತ್ತಿರುವ ದೃಶ್ಯವನ್ನು ಸ್ಥಳೀಯರೊಬ್ಬರು ತನ್ನ ಮೊಬೈಲ್ ಮೂಲಕ ಸೆರೆ ಹಿಡಿದು, ಸಾರ್ವಜನಿಕರು ಎಚ್ಚರದಿಂದ ಇರುವಂತೆ ವಿಡಿಯೋ ಸಹಿತ ಸಂದೇಶವನ್ನು ಸಾಮಾಜಿಕ ಜಾಲತಾಣಗಳಲ್ಲಿ ರವಾನಿಸಿದ್ದರು.

ತಗ್ಗು ಪ್ರದೇಶದಿಂದ ಹಿಂತಿರುಗಿದ ಕಾಡಾನೆಗಳು ಕೆಯ್ಯೂರು ಗ್ರಾಮದ ಸಣಂಗಳ, ಬೊಳಿಕ್ಕಲ,ಅಂಕತ್ತಡ್ಕ ಮೂಲಕವಾಗಿ ಪಾಲ್ತಾಡು ವ್ಯಾಪ್ತಿಗೆ ತೆರಳಿ ಶನಿವಾರ ಕೊಳ್ತಿಗೆ ಗ್ರಾಮಕ್ಕೆ ಮತ್ತೆ ಕಾಲಿಟ್ಟಿವೆ. ಪಾಲ್ತಾಡು ಮಾಲೆತ್ತೋಡಿ, ಕಳಾಯಿ ಮೂಲಕವಾಗಿ ಬೀರ‌್ನಕಜೆ ಪ್ರದೇಶಕ್ಕೆ ಕಾಡಾನೆಗಳು ಬಂದಿವೆ. ಕೊಳ್ತಿಗೆ ಗ್ರಾಮ ಪಂಚಾಯಿತಿ ಸಿಬ್ಬಂದಿಯೊಬ್ಬರ ಮನೆಯ ಸಮೀಪದಲ್ಲಿ ಕಾಡಾನೆಗಳು ಶನಿವಾರ ಮಧ್ಯಾಹ್ನ ವೇಳೆ ಕಾಣಿಸಿಕೊಂಡಿವೆ. ಇಲ್ಲಿನ ಪೊದೆ -ಮರಗಳಿಂದ ಆವೃತ್ತಗೊಂಡಿರುವ ಕಾಡು ಪ್ರದೇಶದಲ್ಲಿರುವ ಆನೆಗಳು ಕಣಿಯಾರುಮಲೆ ರಕ್ಷಿತಾರಣ್ಯಕ್ಕೆ ತೆರಳುವ ಸಾಧ್ಯತೆ ಇದೆ ಎಂದು ಅಲ್ಲಿನ ಸ್ಥಳೀಯರು ಮಾಹಿತಿ ನೀಡಿದ್ದಾರೆ.

ಕಾಡಾನೆಗಳು ತೆರಳಿದ ಹಾದಿಯ ಭಾಗದಲ್ಲಿದ್ದ ಕೆಲವರ ಕೃಷಿ ತೋಟಗಳಿಗೆ ನುಗ್ಗಿ ಬಾಳೆಗಿಡಗಳನ್ನು ನಾಶ ಮಾಡಿದ್ದು ಬಿಟ್ಟರೆ ಬೇರೇನೂ ಹೆಚ್ಚಿನ ಹಾನಿ ಮಾಡಿಲ್ಲ. ಪ್ರಸ್ತುತ ಕೊಳ್ತಿಗೆ ಗ್ರಾಮದ ಬೀರ‌್ನಕಜೆ ಪ್ರದೇಶ ಸೇರಿಕೊಂಡಿರುವ ಕಾಡಾನೆಗಳನ್ನು ಬಂದ ಹಾದಿಯಲ್ಲೇ ಅಮ್ಚಿನಡ್ಕ-ನೆಟ್ಟಾರು ರಸ್ತೆ ದಾಟಿಸಿ ಕೊಳ್ತಿಗೆ ರಕ್ಷಿತಾರಣ್ಯದ ಮೂಲಕ ಆನೆಗುಂಡಿ ರಕ್ಷಿತಾರಣ್ಯಕ್ಕೆ ಹಿಂತಿರುಗಿಸುವ ಕಾರ್ಯಾಚರಣೆ ಅರಣ್ಯ ಇಲಾಖೆಯ ಮೂಲಕ ನಡೆಯಲಿದೆ ಎಂದು ಪುತ್ತೂರು ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುಬ್ಬಯ್ಯ ನಾಯ್ಕ ಅವರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net