ಆಂಜನೇಯಸ್ವಾಮಿ ದೇಗುಲ ಬಳಿ ಕಾಡಾನೆಗಳು ಪ್ರತ್ಯಕ್ಷ

02 HANUR 1
ಎಲ್ಲೇಮಾಳ ಮಾರ್ಗದ ಶ್ರೀ ಆಂಜನೇಯಸ್ವಾಮಿ ದೇಗುಲ ಸಮೀಪ ಕಾಣಿಸಿಕೊಂಡ ಕಾಡಾನೆಗಳ ಹಿಂಡು.
Published on

ಹನೂರು: ಪಟ್ಟಣದ ಮೂಲಕ ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳುವ ಎಲ್ಲೇಮಾಳ ಮಾರ್ಗದ ಶ್ರೀ ಆಂಜನೇಯ ಸ್ವಾಮಿ ದೇಗುಲ ಬಳಿ ಗುರುವಾರ ಕಾಡಾನೆಗಳ ಹಿಂಡು ಕಾಣಿಸಿಕೊಂಡಿದ್ದು, ಭಕ್ತರ ಆತಂಕ ಹೆಚ್ಚಾಗಿದೆ.

ವಿವಿಧ ಜಿಲ್ಲೆಯ ಭಕ್ತರು ಹನೂರಿನ ಮೂಲಕ ಮ.ಬೆಟ್ಟಕ್ಕೆ ತೆರಳುವುದು ಸಾಮಾನ್ಯ. ಈ ಮಾರ್ಗ ಅರಣ್ಯ ಪ್ರದೇಶದೊಳಗೆ ಹಾದು ಹೋಗಿದ್ದು, ಕಾಡು ಪ್ರಾಣಿಗಳಿವೆ. ಈ ಹಿಂದೆ ಕಾಡು ಪ್ರಾಣಿಗಳು ಅದರಲ್ಲೂ ಕಾಡಾನೆಗಳು ಹೆಚ್ಚಾಗಿ ರಸ್ತೆ ಬದಿ ಕಾಣಿಸಿಕೊಳ್ಳುತ್ತಿರಲಿಲ್ಲ. ಇದರಿಂದ ಭಕ್ತರು ಯಾವುದೇ ಆತಂಕವಿಲ್ಲದೆ ಮ.ಬೆಟ್ಟಕ್ಕೆ ತೆರಳುತ್ತಿದ್ದರು. ಆದರೆ ಕಳೆದ 2 ತಿಂಗಳಿನಿಂದೀಚೆಗೆ ಬೇಸಿಗೆ ಹಿನ್ನೆಲೆಯಲ್ಲಿ ಕಾಡಾನೆಗಳು ರಸ್ತೆ ಬದಿ ಹಾಗೂ ಹಳ್ಳಕೊಳ್ಳಗಳಲ್ಲಿ ಕಾಣ ಸಿಗುತ್ತಿವೆ.

ಕೌದಳ್ಳಿ ಸಮೀಪದ ಸಂತೇಖಾನೆ ಬಳಿ ಆಗಾಗ್ಗೆ ಕಾಡಾನೆಗಳ ಹಿಂಡು ಕಾಣಿಸಿಕೊಳ್ಳುತ್ತಿದ್ದರೆ, ಹನೂರು ಸಮೀಪದ ಅರಣ್ಯ ಇಲಾಖೆಯ ಹಳೇ ನರ್ಸರಿ ಸಮೀಪ, ಕೋಣನಕೆರೆ ಗ್ರಾಮ ಸಮೀಪದ ತಿರುವು ಹಾಗೂ ಈ ಮಾರ್ಗದ ಅಲ್ಲಲ್ಲಿ ಕಾಡಾನೆಗಳು ಕಾಣಿಸಿಕೊಳ್ಳುತ್ತಿದ್ದು, ಭಕ್ತರು ಭಯಭೀತರಾಗಿದ್ದಾರೆ. ಈ ಹಿಂದೆ ರಸ್ತೆ ಬದಿಯಲ್ಲಿನ ಆಂಜನೇಯ ಸ್ವಾಮಿ ದೇಗುಲ ಸಮೀಪ ಕುಡಿಯುವ ನೀರಿನ ತೊಂಬೆಯನ್ನು ಉರುಳಿಸಿದ್ದ ಕಾಡಾನೆಗಳ ಹಿಂಡು ಗುರುವಾರ ಮತ್ತೆ ಆಗಮಿಸಿ ಕೆಲಕಾಲ ಆಸುಪಾಸಲ್ಲಿ ಸಂಚರಿಸಿವೆ.

ಬಳಿಕ ಕಾಡಾನೆಗಳು ಕಾಡಿನತ್ತ ತೆರಳಿದ್ದು, ಇದರ ದೃಶ್ಯವನ್ನು ಸಾರ್ವಜನಿಕರು ಸೆರೆ ಹಿಡಿದು ಸಾಮಾಜಿಕ ಜಾಲ ತಾಣದಲ್ಲಿ ಹರಿ ಬಿಟ್ಟಿದ್ದಾರೆ.

ಅರಣ್ಯ ಇಲಾಖೆ ಅಧಿಕಾರಿಗಳು ಇನ್ನಾದರೂ ಇತ್ತ ಗಮನಹರಿಸಿ ಅಗತ್ಯವಿರುವೆಡೆ ಸಿಬ್ಬಂದಿ ನಿಯೋಜಿಸಿ ಪ್ರಾಣಾಪಾಯ ಸಂಭವಿಸುವ ಮುನ್ನ ಎಚ್ಚೆತ್ತುಕೊಳ್ಳಬೇಕು ಎಂದು ಭಕ್ತರು ಹಾಗೂ ಸಾರ್ವಜನಿಕರು ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net