

ಆನೇಕಲ್ : ಪಟ್ಟಣ ಸಮೀಪದ ತಮಿಳುನಾಡಿನ ಗುಮ್ಮಳಾಪುರ ಸುತ್ತಮುತ್ತ ಕಾಡಾನೆಗಳು ಓಡಾಡಿರುವುದು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಗಡಿ ಗ್ರಾಮದ ಜನರಲ್ಲಿ ಆತಂಕ ಶುರುವಾಗಿದೆ. ತಾಲೂಕಿನ ಮುತ್ಯಾಲಮಡುವು, ಮೆಣಸಿಗನಹಳ್ಳಿ, ಸೋಲೂರು ಆಸುಪಾಸಿನಲ್ಲಿಯೂ ಕಾಡಾನೆಗಳ ಹಿಂಡು ಸಂಚರಿಸುತ್ತಿವೆ. ಆದರೆ, ಸೋಲೂರು ಸುತ್ತಮುತ್ತ 10&15 ದಿನಗಳಿಂದಲೂ ಒಂಟಿ ಸಲಗವೊಂದು ಓಡಾಡುತ್ತಿದ್ದು, ಮೂರು ಕಾಡಾನೆಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿವೆ. ಆನೇಕಲ್ ಗಡಿಗೆ ಹೊಂದಿಕೊಂಡಿರುವ ಗುಮ್ಮಳಾಪುರ ಹಾಗೂ ಸೋಲೂರು ಮಾರ್ಗವಾಗಿ ಪ್ರತಿದಿನ ಪಟ್ಟಣಕ್ಕೆ ಸಾಕಷ್ಟು ಜನ ಸಂಚರಿಸುತ್ತಾರೆ. ಸಂಜೆ ವೇಳೆ ಆನೆಗಳು ರಸ್ತೆ ದಾಟುವುದು ಹಾಗೂ ರಸ್ತೆಯ ಅಕ್ಕಪಕ್ಕದಲ್ಲಿ ಇರುವುದು ಗೊತ್ತಾಗದೆ ಇದ್ದರೆ ತೊಂದರೆ ಎದುರಾಗುವ ಆತಂಕವಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಪ್ರತಿದಿನ ಕಾರ್ಯಾಚರಣೆ ನಡೆಸಿದರೂ ಆನೆಗಳು ಆಹಾರ ಅರಸಿ ಹೊಲಗದ್ದೆಗಳಿಗೆ ಬರುತ್ತಿರುವುದರಿಂದ ಜನ ಎಚ್ಚರಿಕೆಯಿಂದ ಇರಬೇಕು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.