

ವಿರಾಜಪೇಟೆ: ಸಮೀಪದ ಬೆಳ್ಳರಿಮಾಡು ಗ್ರಾಮದಲ್ಲಿ ಕಾಡಾನೆಯು ಕಳೆದ ಕೆಲವು ದಿವಸಗಳಿಂದ ಕಾಫಿ ತೋಟಗಳಲ್ಲಿ ಬೀಡು ಬಿಟ್ಟಿದ್ದು ಕಳೆದ ಮೂರು ದಿವಸಗಳ ಕಾಲ ನಿರಂತರವಾಗಿ ಗ್ರಾಮದ ರೇವನ್ ಜೀವನ್ ಪಿಂಟೋ ಎಂಬುವರ ತೋಟದಲ್ಲಿ ಇದ್ದುಕೊಂಡು ಫಸಲು ನಷ್ಟಪಡಿಸಿದೆ.
ಶನಿವಾರ ಮುಂಜಾನೆ ಜೀವನ್ ಪಿಂಟೋ ಅವರ ತೋಟಕ್ಕೆ ಆಗಮಿಸಿದ ಕಾಡಾನೆ ಉತ್ತಮ ಫಸಲು ನೀಡುತ್ತಿದ್ದ ಮೂರು ತೆಂಗಿನ ಮರಗಳು, ಅಡಕೆ ಮರಗಳು, ಬಾಳೆ ಹಾಗೂ ಹದಿಮೂರಕ್ಕೂ ಅಧಿಕ ಕಾಫಿ ಗಿಡಗಳನ್ನು ದ್ವಂಸಗೊಳಿಸಿದೆ.
ಕಾಡಾನೆ ದಾಂಧಲೆ ಕುರಿತು ಮಾಧ್ಯಮದವರೊಂದಿಗೆ ಪ್ರತಿಕ್ರಿಯೆ ನೀಡಿದ ತೋಟದ ಮಾಲೀಕ ಜೀವನ್ ಪಿಂಟೋ, ಹಲವು ವರ್ಷಗಳಿಂದ ಗ್ರಾಮದಲ್ಲಿ ಕಾಡಾನೆಗಳು ಬೀಡು ಬಿಟ್ಟಿವೆ. ಇದೀಗ ಕಾಡಾನೆಯೊಂದು ಕಳೆದ ಮೂರು ದಿವಸಗಳಿಂದ ತನ್ನ ತೋಟಕ್ಕೆ ಆಗಮಿಸಿದ್ದು ಶನಿವಾರ ಮುಂಜಾನೆ ಮತ್ತೆ ಆಗಮಿಸಿ ಫಸಲು ನಾಶಪಡಿಸಿದೆ. ಮನೆಯ ಹಿಂಭಾಗ ನೀರಿನ ಪೈಪ್‌ಅನ್ನು ಒಡೆದು ಹಾಕಿದೆ. ಘಟನೆಯ ಕುರಿತು ಅರಣ್ಯ ಇಲಾಖೆಯವರಿಗೆ ಮಾಹಿತಿ ನೀಡಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ. ನಾನು ಸಾರ್ವಜನಿಕವಾಗಿ ಆಂಬುಲೆನ್ಸ್ ಸೇವೆಯನ್ನು ಒದಗಿಸುತ್ತಿದ್ದು ರಾತ್ರಿ ವೇಳೆಯಲ್ಲಿ ತುರ್ತಾಗಿ ಯಾರಾದರೂ ಕರೆದರೆ ಕಾಡಾನೆ ಭೀತಿಯಿಂದ ತೆರಳಲು ಹಿಂದೇಟು ಹಾಕುವಂತಾಗಿದೆ ಎಂದು ಅಳಲು ತೋಡಿಕೊಂಡರು.
ಶಾಲಾ ವಿದ್ಯಾರ್ಥಿಗಳಿಗೂ ಶಾಲೆಗೆ ತೆರಳಲು ಸಮಸ್ಯೆಯಾಗಿದ್ದು, ಅರಣ್ಯ ಇಲಾಖೆಯವರು ಸೂಕ್ತ ಕ್ರಮ ಕೈಗೊಂಡು ಕಾಡಾನೆ ಸಮಸ್ಯೆಗೆ ಮುಕ್ತಿ ನೀಡಬೇಕು. ನನಗೆ ಬೆಳೆ ನಷ್ಟದ ಸೂಕ್ತ ಪರಿಹಾರವನ್ನು ನೀಡಬೇಕೆಂದು ಪಿಂಟೋ ಒತ್ತಾಯಿಸಿದರು.