

ಹನೂರು: ತಾಲೂಕಿನ ಮಲೆ ಮಹದೇಶ್ವರ ಬೆಟ್ಟದ ತಾಳುಬೆಟ್ಟ ಮಾರ್ಗದಲ್ಲಿ ಭಾನುವಾರ ಕಾಡಾನೆಯೊಂದು ಕಾಣಿಸಿಕೊಂಡು ಭಕ್ತರಲ್ಲಿ ಆತಂಕವನ್ನು ಉಂಟು ಮಾಡಿತು. ಈ ಮಾರ್ಗದಲ್ಲಿ ಆಗಾಗ್ಗೆ ಕಾಣಿಸಿಕೊಳ್ಳುತ್ತಿರುವ ಕಾಡಾನೆಯಿಂದ ಭಕ್ತರು ಭೀತಿಗೊಂಡಿದ್ದಾರೆ.
ಈ ಮಾರ್ಗವು ಮಲೆಮಹದೇಶ್ವರ ವನ್ಯಜೀವಿ ವಿಭಾಗಕ್ಕೆ ಸೇರಿದ್ದು, ಅರಣ್ಯ ಪ್ರದೇಶದ ನಡುವೆ ಹಾದು ಹೋಗಿದೆ. ಕಳೆದ ನಾಲ್ಕೈದು ತಿಂಗಳಿನಿಂದ ಹನೂರಿನಿಂದ ಮಲೆ ಮಹದೇಶ್ವರ ಬೆಟ್ಟದ ಮಾರ್ಗದಲ್ಲಿ ಕಾಡಾನೆಗಳು ಕಾಣಿಸಿಕೊಳ್ಳುತ್ತಿದ್ದು, ಸಾರ್ವಜನಿಕರು ಹಾಗೂ ಭಕ್ತರು ಆತಂಕಗೊಂಡಿದ್ದಾರೆ. ಅಲ್ಲದೆ ಕಳೆದ ಒಂದು ತಿಂಗಳಿದಿಂಚೇಗೆ ತಾಳುಬೆಟ್ಟ-ಮ.ಬೆಟ್ಟ ಮಾರ್ಗದ ಅಲ್ಲಲ್ಲಿ ಕಾಡಾನೆಯೊಂದು ಕಾಣಿಸಿಕೊಳ್ಳುತ್ತಿದೆ. ಭಾನುವಾರ ಸಂಜೆ ಇದೇ ಕಾಡಾನೆ ರಸ್ತೆ ಬದಿಯಲ್ಲಿ ಕಾಣಿಕೊಂಡು ಆತಂಕವನ್ನು ಸೃಷ್ಠಿ ಮಾಡಿತು. ಇದರ ದೃಶ್ಯವನ್ನು ಭಕ್ತರೊಬ್ಬರೂ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.
ಮ.ಬೆಟ್ಟಕ್ಕೆ ರಾಜ್ಯದ ವಿವಿಧೆಡೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ತೆರಳುತ್ತಾರೆ. ಆದರೆ ಈ ಮಾರ್ಗದ ರಸ್ತೆಯಲ್ಲಿ ಆಗಾಗ್ಗೆ ಕಾಡಾನೆಗಳು ಕಾಣಿಸಿಕೊಳ್ಳುತ್ತಿವೆ. ಇದರಿಂದ ಭಕ್ತರಲ್ಲಿ ಆತಂಕಕ್ಕೆ ಕಾರಣವಾಗಿದೆ. ಆದ್ದರಿಂದ ಅರಣ್ಯ ಇಲಾಖೆಯ ಅಧಿಕಾರಿಗಳು ಇನ್ನಾದರೂ ಇತ್ತ ಗಮನಹರಿಸಿ ಪ್ರಾಣಾಪಾಯ ಸಂಭವಿಸುವ ಮುನ್ನಾ ಎಚ್ಚೆತ್ತು ಕಾಡಾನೆಗಳು ರಸ್ತೆ ಬದಿಗೆ ಬಾರದಂತೆ ಕಡಿವಾಣ ಹಾಕುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.