ಬನ್ನೂರು, ಅಂಡವಾನೆಯಲ್ಲಿ ಕಾಡಾನೆ ಹಾವಳಿ

bhr 2 (5)
Published on

ಬಾಳೆಹೊನ್ನೂರು: ಬಾಳೆಹೊನ್ನೂರು ವಲಯ ಅರಣ್ಯ ಇಲಾಖೆ ವ್ಯಾಪ್ತಿಯ ವಿವಿಧೆಡೆ ಕಾಡಾನೆ ಹಾವಳಿ ಮುಂದುವರಿದಿದ್ದು, ರೈತರ ಕೃಷಿ ಭೂಮಿಯನ್ನು ಹಾಳುಗೆಡವುತ್ತಿವೆ. ಹುಯಿಗೆರೆ ಗ್ರಾಪಂ ವ್ಯಾಪ್ತಿಯ ಅಂಡವಾನೆಯ ಕುಂಬ್ರುಗದ್ದೆಯಲ್ಲಿ ಶುಕ್ರವಾರ ಮುಂಜಾನೆ ಎರಡು ಕಾಡಾನೆಗಳು ಹಲವು ರೈತರ ತೋಟಗಳಿಗೆ ಲಗ್ಗೆಯಿಟ್ಟು ಬಾಳೆ, ಕಾಫಿ, ಅಡಕೆ ಗಿಡಗಳನ್ನು ತುಳಿದು ಹಾಳು ಮಾಡಿವೆ. ಬನ್ನೂರು ಗ್ರಾಪಂ ವ್ಯಾಪ್ತಿಯ ಕೊಡಿಗೆ ಕಿಟ್ಟಪ್ಪಗೌಡ ಎಂಬುವರ ಜಮೀನಿಗೆ ಬಂದಿರುವ ಒಂದು ಕಾಡಾನೆ ಭತ್ತದ ನಾಟಿಗೆ ಸಿದ್ಧಗೊಳಿಸಿದ್ದ ಸಸಿಮಡಿಗಳನ್ನು ತುಳಿದು ಹಾಳು ಮಾಡಿದೆ.

ಈ ಭಾಗದಲ್ಲಿ ಹಲವು ಗ್ರಾಮಗಳಲ್ಲಿ ಹತ್ತಾರು ಕಾಡಾನೆಗಳು ಅರಣ್ಯದಲ್ಲಿ ಬೀಡು ಬಿಟ್ಟಿದ್ದು, ರಾತ್ರಿ ವೇಳೆಯಲ್ಲಿ ರೈತರ ಜಮೀನಿಗೆ ನುಗ್ಗಿ ಹಾನಿ ಮಾಡುತ್ತಿವೆ. ಇದೇ ಪರಿಸ್ಥಿತಿ ಮುಂದುವರಿದಲ್ಲಿ ರೈತರು ಜೀವನ ಸಾಗಿಸುವುದೇ ಕಷ್ಟಕರವಾಗಿದೆ. ಜನಪ್ರತಿನಿಧಿಗಳು, ಅರಣ್ಯ ಇಲಾಖೆ ಅಧಿಕಾರಿಗಳು ಈ ಬಗ್ಗೆ ಗಂಭೀರ ಚಿಂತನೆ ನಡೆಸಬೇಕು ಎಂದು ಗ್ರಾಮಸ್ಥರು ಒತ್ತಾಯಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net