

ವಿಜಯವಾಣಿ ಸುದ್ದಿಜಾಲ ಪುತ್ತೂರು ಗ್ರಾಮಾಂತರ
ಕೆಯ್ಯೂರು ಗ್ರಾಮದ ತೆಗ್ಗು, ನೆಲ್ಲಿಗುರಿ, ಎರಬೈಲು, ಓಲೆಮುಂಡೋವು, ಬಲ್ಕಾಡು ಪ್ರದೇಶಗಳಿಗೆ ಒಂಟಿ ಕಾಡಾನೆಯೊಂದು ಲಗ್ಗೆಯಿಟ್ಟು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ. ಬುಧವಾರ ರಾತ್ರಿ ವೇಳೆ ಈ ಪ್ರದೇಶಗಳಲ್ಲಿ ಸುತ್ತಾಡಿ ಕೃಷಿಕರೊಬ್ಬರ ತೋಟದಲ್ಲಿದ್ದ ತೆಂಗಿನ ಗಿಡವೊಂದನ್ನು ಮುರಿದು ತಿಂದಿರುವ ಕಾಡಾನೆ ಗುರುವಾರ ಎರಬೈಲು ಎಂಬಲ್ಲಿನ ಕಾಡು ಪ್ರದೇಶವಿರುವ ಜಾಗ ಸೇರಿಕೊಂಡಿದ್ದು, ಅಲ್ಲಿ ಕಾಡಾನೆ ಇರುವುದನ್ನು ಅರಣ್ಯ ಇಲಾಖೆಯವರು ಪತ್ತೆ ಮಾಡಿದ್ದಾರೆ.
ಕೆಲ ತಿಂಗಳ ಹಿಂದೆ ಒಂಟಿ ಕಾಡಾನೆಯೊಂದು ನೆಟ್ಟಣಿಗೆ ಮುಡ್ನೂರು ಗ್ರಾಮದ ಪೆರ್ನಾಜೆ, ನೂಜಿಬೈಲು ಪ್ರದೇಶಕ್ಕೆ ಎರಡು ಬಾರಿ ಹಾಗೂ ಆ ಬಳಿಕ ಪಕ್ಕದ ಕೊಳ್ತಿಗೆ ಗ್ರಾಮದ ಕೊಂರ್ಬಡ್ಕ ಮತ್ತಿತರ ಪ್ರದೇಶಗಳಿಗೆ ಎರಡು ಬಾರಿ ಲಗ್ಗೆ ಇಟ್ಟು ಅಲ್ಲಿನ ಅಡಕೆ ಮತ್ತು ತೆಂಗಿನ ತೋಟಗಳಿಗೆ ನುಗ್ಗಿ ಕೃಷಿ ಹಾನಿಗೊಳಿಸಿತ್ತು. ಅಲ್ಲಿಂದ ಕಾಡಾನೆಯನ್ನು ಪರಪ್ಪೆ ಕಡೆಯ ರಕ್ಷಿತಾರಣ್ಯಕ್ಕೆ ಓಡಿಸುವ ಕಾರ್ಯಾಚರಣೆ ನಡೆಸಿದ ಬಳಿಕ ಅಲ್ಲಿನ ಗ್ರಾಮಸ್ಥರು ನಿರಾಳರಾಗಿದ್ದರು.
ಬುಧವಾರ ರಾತ್ರಿ ಸವಣೂರು ಸಮೀಪದ ಪುಣ್ಚಪ್ಪಾಡಿ ಪ್ರದೇಶದಲ್ಲಿ ಕಾಣಿಸಿಕೊಂಡಿದ್ದ ಕಾಡಾನೆ ಅಲ್ಲಿಂದ ರಾತ್ರಿ ವೇಳೆ ಗೌರಿ ಹೊಳೆ ದಾಟಿಕೊಂಡು ಕೆಯ್ಯೂರು ಗ್ರಾಮ ವ್ಯಾಪ್ತಿಗೆ ಕಾಲಿಟ್ಟಿದೆ. ರಾತ್ರಿ ವೇಳೆ ಕಾಡಾನೆ ತೆಗ್ಗು ಸಮೀಪದ ನೆಲ್ಲಿಗುರಿ, ಎರಬೈಲು, ಓಲೆಮುಂಡೋವು, ಬಲ್ಕಾಡು ಎಂಬಲ್ಲಿನ ಪ್ರದೇಶಗಳಲ್ಲಿ ಸಂಚರಿಸಿರುವ ಕುರುವುಗಳು ಕಂಡು ಬಂದಿವೆ.
ಅರಣ್ಯ ಇಲಾಖೆಯ ಎಸಿಎಫ್ ಪ್ರವೀಣ್, ಆರ್‌ಎಫ್ ಕಿರಣ್ ಹಾಗೂ ತಂಡ ಈ ಪ್ರದೇಶಕ್ಕೆ ಗುರುವಾರ ಭೇಟಿ ನೀಡಿ ಪತ್ತೆ ಕಾರ್ಯಾಚರಣೆ ನಡೆಸಿ ಎರಬೈಲಿನ ಶುಭಪ್ರಕಾಶ್ ಎಂಬುವರ ಜಮೀನಿನ ಪೊದೆ-ಮರಗಳಿಂದ ಆವೃತ್ತಗೊಂಡ ಕಾಡು ಭಾಗದಲ್ಲಿ ಕಾಡಾನೆ ಇರುವುದನ್ನು ಪತ್ತೆ ಮಾಡಿದ್ದಾರೆ.
ಈ ಹಿಂದೆ ಗಡಿಪ್ರದೇಶದಲ್ಲಿರುವ ಕೇರಳದ ಪರಪ್ಪೆ ರಕ್ಷಿತಾರಣ್ಯದಿಂದ ಗುಂಪಿನಿಂದ ಬೇರ್ಪಟ್ಟು ಪೆರ್ನಾಜೆ ಮತ್ತು ಕೊಂರ್ಬಡ್ಕ ಸೇರಿದಂತೆ ಕೆಲವು ಪ್ರದೇಶಗಳಿಗೆ ಬಂದು ಕೃಷಿ ಹಾನಿಗೊಳಿಸಿದ್ದ ಒಂಟಿ ಕಾಡಾನೆಯೇ ಇದೀಗ ಕೊಳ್ತಿಗೆ ಗ್ರಾಮ ಪಾಲ್ತಾಡಿ ಮೂಲಕವಾಗಿ ಪುಣ್ಚಪ್ಪಾಡಿ ಕಡೆಗೆ ಸಾಗಿ ಅಲ್ಲಿಂದ ತೆಗ್ಗು ಕಡೆಗೆ ಬಂದಿರುವ ಸಾಧ್ಯತೆ ಇದೆ ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಗುರುವಾರ ಎರಬೈಲಿನ ಶುಭಪ್ರಕಾಶ್ ಅವರ ಮನೆಗೆ ಹಾಗೂ ಎರಬೈಲು ಪ್ರದೇಶಕ್ಕೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡರು. ಬಿಜೆಪಿ ಮುಖಂಡರಾದ ರಾಕೇಶ್ ರೈ ಕೆಡೆಂಜಿ, ಇಂದಿರಾ ಬಿ.ಕೆ, ಗಣೇಶ್ ನಿಡ್ವಣ್ಣಾಯ ಮತ್ತಿತರರು ಶಾಸಕಿ ಜತೆಗಿದ್ದರು.
ಎರಬೈಲು ಪ್ರದೇಶದಲ್ಲಿ ಕಾಡಾನೆ ಇರುವುದನ್ನು ಖಚಿತವಾದ ಬಳಿಕ ಅರಣ್ಯಾಧಿಕಾರಿ ಕಿರಣ್ ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ಸಂಪರ್ಕಿಸಿ ಸ್ಥಳೀಯ ಶಾಲೆಗಳಿಗೆ ರಜೆ ನೀಡುವಂತೆ ಮನವಿ ಮಾಡಿಕೊಂಡ ಪ್ರಕಾರ ತೆಗ್ಗು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ರಜೆ ನೀಡಲಾಯಿತು. ಶಾಲೆ ಬಳಿಯೇ ಇರುವ ಅಂಗನವಾಡಿಗೂ ರಜೆ ನೀಡಲಾಯಿತು.
ಎರಬೈಲಿಗೆ ಬಂದಿರುವ ಕಾಡಾನೆಯನ್ನು ಮರಳಿ ಕಾಡಿಗಟ್ಟುವ ಪ್ರಕ್ರಿಯೆ ಅರಣ್ಯ ಇಲಾಖೆಯಿಂದ ನಡೆಯಲಿದ್ದು, ಜನತೆ ಆತಂಕ ಪಡಬೇಕಾಗಿಲ್ಲ. ಕಾಡಾನೆ ದಾರಿ ತಪ್ಪಿ ಬಂದಿರುವ ಸಾಧ್ಯತೆ ಇದ್ದು, ಇದುವರೆಗೆ ಯಾರಿಗೂ ತೊಂದರೆ ನೀಡಿಲ್ಲ. ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಕರೆ ಮಾಡಿ ಯಾವುದೇ ಅನಾಹುತಗಳು ನಡೆಯದಂತೆ ಎಚ್ಚರ ವಹಿಸುವಂತೆ ಹಾಗೂ ಕಾಡಾನೆಯನ್ನು ಸುರಕ್ಷಿತವಾಗಿ ಕಾಡಿಗಟ್ಟುವ ಕೆಲಸ ಮಾಡುವಂತೆ ಸೂಚನೆ ನೀಡಿದ್ದೇನೆ.- ಅಶೋಕ್‌ಕುಮಾರ್ ರೈ, ಶಾಸಕ ತೆಗ್ಗು ಪ್ರದೇಶದ ಎರಬೈಲು ಎಂಬಲ್ಲಿನ ಕೃಷಿಕರೊಬ್ಬರ ಜಮೀನಿನ ಕಾಡು ಭಾಗದಲ್ಲಿ ಕಾಡಾನೆ ಇರುವುದನ್ನು ಗುರುವಾರ ಕಣ್ಣಾರೆ ಕಂಡಿದ್ದೇನೆ. ಗುರುವಾರ ರಾತ್ರಿ ವೇಳೆ ಈ ಕಾಡಾನೆಯನ್ನು ಕಣಿಯಾರು ಮಲೆ ರಕ್ಷಿತಾರಣ್ಯಕ್ಕೆ ಓಡಿಸಿ ಬಳಿಕ ಅಲ್ಲಿಂದ ಸುರಕ್ಷಿತವಾಗಿ ರಕ್ಷಿತಾರಣ್ಯಕ್ಕೆ ಅಟ್ಟುವ ಕಾರ್ಯಾಚರಣೆ ನಡೆಸಲಾಗುವುದು.- ಕಿರಣ್, ಆರ್.ಎಫ್.ಒ, ಪುತ್ತೂರು https://www.vijayavani.net/world-environment-day-celebration-6 https://www.vijayavani.net/10-lakhs-prize-for-excel-neet-topper-prajwal