ಎಮ್ಮೆಗುಂಡಿ ತೋಟಕ್ಕೆ ಕಾಡಾನೆಗಳ ದಾಳಿ

22sunti03
Published on

ಸುಂಟಿಕೊಪ್ಪ: ನಾಕೂರು ಶಿರಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಮ್ಮೆಗುಂಡಿ ತೋಟಕ್ಕೆ ಕಾಡಾನೆಗಳ ಹಿಂಡು ದಾಳಿ ಮಾಡಿ ಅಪಾರ ಪ್ರಮಾಣದ ಬೆಳೆ ನಷ್ಟ ಮಾಡಿವೆ.

ಶನಿವಾರ ರಾತ್ರಿ ಈ ಭಾಗದಲ್ಲಿ ಕಾಡಾನೆಗಳು ತೋಟಗಳಲ್ಲಿ ಬೀಡುಬಿಟ್ಟಿದ್ದು, ಕಾಫಿ, ಕರಿಮೆಣಸು ಬಾಳೆ ಗಿಡಗಳನ್ನು ದ್ವಂಸಗೊಳಿಸಿ ಭಾರಿ ಪ್ರಮಾಣದಲ್ಲಿ ನಷ್ಟಪಡಿಸಿವೆ. ನಾಕೂರು ಶಿರಂಗಾಲ ಗ್ರಾಮ ಪಂಚಾಯಿತಿಯ ಎಮ್ಮೆಗುಂಡಿ ಗ್ರಾಮದ ಲೈನ್ ಮನೆ ಸಮೀಪ ಬೆಳೆದಿದ್ದ ಬಾಳೆ ಗಿಡಗಳನ್ನು ದ್ವಂಸಗೊಳಿಸಿವೆ. ಇದರಿಂದ ಈ ಭಾಗದ ನಿವಾಸಿಗಳಲ್ಲಿ ಅತಂಕ ಎದುರಾಗಿದೆ. ಕಾಡಾನೆ ದಾಳಿಯಿಂದ 4 ವರ್ಷದ ರೊಬಸ್ಟಾ ಮತ್ತು ಅರೇಬಿಕಾ ಕಾಫಿ ಗಿಡಗಳನ್ನು ಧ್ವಂಸಗೊಳಿಸಿದೆ. ಈ ಭಾಗದಲ್ಲಿ ನಿರಂತರವಾಗಿ ಸುತ್ತಮುತ್ತಲಿನ ತೋಟಗಳಲ್ಲಿ ಹಗಲು ವೇಳೆಯಲ್ಲಿಯೇ ಆನೆಗಳು ಕಂಡುಬರುತ್ತಿವೆ ಎಂದು ಗ್ರಾಮಸ್ಥರು ಅತಂಕ ವ್ಯಕ್ತಪಡಿಸಿದ್ದಾರೆ.

ಕೂಲಿ ಕಾರ್ಮಿಕರು ತೋಟದ ಕೆಲಸಕ್ಕೆ ಹೋಗಲು ಹಿಂಜರಿಯುವಂತಾಗಿದೆ. ರಾತ್ರಿ ವೇಳೆ ಸುಂಟಿಕೊಪ್ಪದಿಂದ ಎಮ್ಮೆ ಗುಂಡಿ ನಾಕೂರು, ಶಿರಂಗಾಲ, ಮಳೂರು, ಕಾನ್‌ಬೈಲ್, ಅಂದಗೋವೆ ಗ್ರಾಮಗಳಿಗೆ ಓಡಾಡುವುದೇ ಸವಾಲಾಗಿದೆ. ಖಾಸಗಿ ವಾಹನಗಳು, ಬಾಡಿಗೆ ವಾಹನಗಳು ಸಂಚರಿಸಲು ಹಿಂದೇಟಾಕುತ್ತಿದ್ದಾರೆ. ಮಳೆಗಾಲದಲ್ಲಿ ಆಹಾರ ಅರಸುತ್ತಾ ಆನೆಗಳು ಈ ಭಾಗಕ್ಕೆ ಆಗಮಿಸುತ್ತಿದ್ದು, ಶಾಲಾ ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು ಜೀವ ಭಯದಿಂದ ಸುಂಟಿಕೊಪ್ಪ ಪಟ್ಟಣಕ್ಕೆ ತೆರಳುವಂತಾಗಿದೆ. ಕೂಡಲೇ ಅರಣ್ಯ ಅಧಿಕಾರಿಗಳು ಆನೆಗಳನ್ನು ಅರಣ್ಯಗಳಿಗೆ ಹಿಮ್ಮಟ್ಟಿಸುವಂತೆ ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net