ಟೀ ಅಂಗಡಿ ಮೇಲೆ ಮರಿಯೊಂದಿಗಿದ್ದ ಕಾಡಾನೆ ದಾಳಿ

elephat attack 1
ನೆಲ್ಯಹುದಿಕೇರಿ ಸಮೀಪದ ಅತ್ತಿಮಂಗಲದಲ್ಲಿ ಟೀ ಅಂಗಡಿ ಮೇಲೆ ಕಾಡಾನೆ ದಾಳಿ ಮಾಡಿದ್ದರಿಂದ ವಸ್ತುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿರುವುದು.
Published on

ಸಿದ್ದಾಪುರ: ನೆಲ್ಯಹುದಿಕೇರಿಯಲ್ಲಿ ಮಂಗಳವಾರ ಬೆಳಗ್ಗೆ ಮರಿಯೊಂದಿಗಿದ್ದ ಕಾಡಾನೆಯೊಂದು ಟೀ ಅಂಗಡಿ ಮೇಲೆ ದಾಳಿ ಮಾಡಿದೆ.

ದಾಳಿ ವೇಳೆ ಟೀ ಅಂಗಡಿ ನಡೆಸುತ್ತಿದ್ದ ದಂಪತಿ ಅದೃಷ್ಟವಶಾತ್ ಓಡಿಹೋಗಿ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ.

ನೆಲ್ಯಹುದಿಕೇರಿ ಸಮೀಪದ ಅತ್ತಿಮಂಗಲ ತೋಟದಿಂದ ಮರಿಯೊಂದಿಗೆ ರಸ್ತೆ ದಾಟುತ್ತಿದ್ದ ಕಾಡಾನೆ ಏಕಾಏಕಿ ಪಕ್ಕದಲ್ಲಿದ್ದ ಟೀ ಅಂಗಡಿ ಮೇಲೆ ದಾಳಿ ಮಾಡಿದೆ. ಅಂಗಡಿಯಲ್ಲಿದ್ದ ವಸ್ತುಗಳು, ಪೀಠೋಪಕರಣಗಳು ಮತ್ತು ತಿಂಡಿ ತನಿಸುಗಳನ್ನು ಎಳೆದು ಬಿಸಾಡಿದ ಕಾಡಾನೆ ಪಕ್ಕದ ಬಸ್ ತಂಗುದಾಣದಲ್ಲಿದ್ದ ಗ್ರಾಮಸ್ಥರ ಕಿರುಚಾಟ ಕೇಳಿ ಅಲ್ಲಿಂದ ಕಾಲ್ಕಿತ್ತಿದೆ. ಅಂಗಡಿಯಲ್ಲಿದ್ದ ಜಬ್ಬಾರ್ ಹಾಗೂ ಅವರ ಪತ್ನಿ ಕಾಡಾನೆ ದಾಳಿಯಿಂದ ತಪ್ಪಿಸಿಕೊಂಡಿದ್ದಾರೆ.

ನಂತರ ನಲ್ವತ್ತೆಕ್ಕರೆ ಗ್ರಾಮದ ಮಾರ್ಗವಾಗಿ ಸಂಚಾರ ಬೆಳೆಸಿದ ಕಾಡಾನೆ ಕಾರೊಂದರ ಮೇಲೂ ದಾಳಿ ನಡೆಸಲು ಯತ್ನಿಸಿದೆ ಎನ್ನಲಾಗಿದೆ. ಬೆಳ್ಳಂಬೆಳಗ್ಗೆ ಕಾಡಾನೆ ದಾಳಿ ನಡೆಸಿದ ಪರಿಣಾಮ ಗ್ರಾಮಸ್ಥರು, ವಿದ್ಯಾರ್ಥಿಗಳು ಹಾಗೂ ಕಾರ್ಮಿಕರು ಆತಂಕಗೊಂಡರು. ಅರಣ್ಯ ಇಲಾಖೆ ತಕ್ಷಣ ಕಾಡಾನೆಗಳನ್ನು ಕಾಡಿಗಟ್ಟುವ ಕಾರ್ಯಾಚರಣೆ ಕೈಗೊಳ್ಳಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net