

ಹನೂರು: ತಾಲೂಕಿನ ಮಲೆಮಹದೇಶ್ವರ ಬೆಟ್ಟ ತಾಳುಬೆಟ್ಟದ ಮಾರ್ಗದ ತಿರುವೊಂದರಲ್ಲಿ ಶುಕ್ರವಾರ ರಾತ್ರಿ ಕಾಡಾನೆ ಕಾಣಿಸಿಕೊಂಡು ಆತಂಕ ಮೂಡಿಸಿದೆ.
ಹನೂರು ಮ.ಬೆಟ್ಟದ ಮಾರ್ಗದ ಕೌದಳ್ಳಿ ಬಳಿಯ ಸಂತೇಖಾನೆ, ಹನೂರು ಸಮೀಪದ ಎಲ್ಲೇಮಾಳ, ಶ್ರೀ ಆಂಜನೇಯಸ್ವಾಮಿ ದೇವಾಲಯ ಹಾಗೂ ಕೋಣನಕೆರೆ ಸಮೀಪದಲ್ಲಿ ಕಳೆದ 3-4 ತಿಂಗಳಿದೀಚೆಗೆ ಆಗಾಗ್ಗೆ ಕಾಡಾನೆಗಳು ರಸ್ತೆ ಬದಿಯಲ್ಲಿ ಕಾಣಿಸಿಕೊಂಡು ಮ.ಬೆಟ್ಟಕ್ಕೆ ತೆರಳುವ ಭಕ್ತರು ಹಾಗೂ ಸಾರ್ವಜನಿಕರಲ್ಲಿ ಆತಂಕವನ್ನು ಉಂಟು ಮಾಡುತ್ತಿವೆ. ಕಳೆದ ವಾರದ ಹಿಂದೆಯಷ್ಟೇ ಮ.ಬೆಟ್ಟದ ಜನತಾ ಕಾಲನಿ ಬಳಿ ಆಗಮಿಸಿದ ಕಾಡಾನೆ ಸ್ಥಳೀಯರಲ್ಲಿ ಆತಂಕವನ್ನು ಸೃಷ್ಟಿಸಿತು. ಅಲ್ಲದೆ ಮೇ 13 ರಂದು ತಾಳುಬೆಟ್ಟದ 3ನೇ ತಿರುವಿನ ಮೇಲ್ಭಾಗದಲ್ಲಿ ಕಾಣಿಸಿಕೊಂಡ ಕಾಡಾನೆಯಿಂದ ಭಕ್ತರು ಭಯಭೀತರಾಗಿದ್ದರು. ಇದರ ದೃಶ್ಯವನ್ನು ಸಾಮಾಜಿಕ ಜಾಲ ತಾಣದಲ್ಲಿ ಹರಿಬಿಟ್ಟಿದ್ದರು.
ಶುಕ್ರವಾರ ರಾತ್ರಿ ತಾಳುಬೆಟ್ಟ ಮ.ಬೆಟ್ಟ ಮಾರ್ಗದ ತಿರುವೊಂದರಲ್ಲಿ ಆನೆ ಕಾಣಿಸಿಕೊಂಡಿದೆ. ಇದರಿಂದ ಸವಾರರು ವಾಹನವನ್ನು ಕೆಲಕಾಲ ನಿಲ್ಲಿಸುವಂತಾಯಿತು. ಕಾಡಾನೆ ರಸ್ತೆಯಲ್ಲೇ ತುಸು ದೂರ ನಡೆದು ಕಾಡಿನತ್ತ ತೆರಳಿದ ಬಳಿಕ ಭಕ್ತರು ಸಾಗಿದರು. ಈ ದೃಶ್ಯವನ್ನು ಕಾರಿನಲ್ಲಿದ್ದ ಭಕ್ತರೊಬ್ಬರೂ ಮೊಬೈಲ್‌ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.
ರಸ್ತೆಗೆ ಬಾರದಂತೆ ಕಡಿವಾಣ ಹಾಕಿ: ಈ ಮಾರ್ಗದ ರಸ್ತೆಯು ಮಲೆಮಹದೇಶ್ವರ ವನ್ಯಜೀವಿ ವಿಭಾಗದಲ್ಲಿ ಹಾದು ಹೋಗಿದೆ. ಈ ಮಾರ್ಗದಲ್ಲಿ ಕಾಡಾನೆಯೊಂದು ಆಗಾಗ್ಗೆ ಕಾಣಿಸಿಕೊಳ್ಳುತ್ತಿದ್ದು, ದಾಳಿ ನಡೆಸುವ ಸಾಧ್ಯತೆ ಇದೆ. ಆದ್ದರಿಂದ ಅರಣ್ಯ ಇಲಾಖೆಯ ಅಧಿಕಾರಿಗಳು ಇತ್ತ ಗಮನಹರಿಸಿ ಕಾಡಾನೆ ರಸ್ತೆ ಬದಿಗೆ ಬಾರದಂತೆ ಕಡಿವಾಣ ಹಾಕುವಂತೆ ಭಕ್ತರು ಹಾಗೂ ಸಾರ್ವಜನಿಕರು ಒತ್ತಾಯಿಸಿದ್ದಾರೆ.