ತುಪ್ಪೂರಿನಲ್ಲಿ ಮುಂದುವರಿದ ಕಾಡಾನೆ ಹಾವಳಿ

bhr 2 (8)
Published on

ಬಾಳೆಹೊನ್ನೂರು: ಸಮೀಪದ ಹಿರೇಗದ್ದೆ ಗ್ರಾಪಂ ವ್ಯಾಪ್ತಿಯ ತುಪ್ಪೂರು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಾಡಾನೆಗಳ ಹಾವಳಿ ಮತ್ತೆ ಮುಂದುವರಿದಿದ್ದು, ರೈತರ ಜಮೀನಿಗಳಿಗೆ ನುಗ್ಗಿ ಬೆಳೆಗಳನ್ನು ಹಾನಿ ಮಾಡುತ್ತಿವೆ.

ಬಾಳೆಹೊನ್ನೂರು ವ್ಯಾಪ್ತಿ ಹಾಗೂ ಶೃಂಗೇರಿ, ಕೊಪ್ಪ ತಾಲೂಕಿನ ವಿವಿಧೆಡೆ ಸಂಚರಿಸಿ ತುಪ್ಪೂರು ಗ್ರಾಮಕ್ಕೆ ಬಂದಿರುವ ಎರಡು ಕಾಡಾನೆಗಳು ಕಳೆದ ಒಂದು ವಾರದಿಂದ ಇದೇ ಗ್ರಾಮದಲ್ಲಿ ಬೀಡು ಬಿಟ್ಟಿದ್ದು, ಹಲವು ರೈತರ ತೋಟ, ಗದ್ದೆಗಳಲ್ಲಿ ಗಳಿಗೆ ದಾಳಿ ಮಾಡಿ ಹಾನಿ ಮಾಡುತ್ತಿವೆ.

ಕಳೆದ ಒಂದು ವಾರದಿಂದ ತುಪ್ಪೂರು ಗ್ರಾಮದಲ್ಲಿ ಎರಡು ಕಾಡಾನೆಗಳು ಮಾತ್ರ ಇದ್ದು, ಇವುಗಳೊಂದಿಗೆ ಕಾಡುಸಿಗಸೆ ಗ್ರಾಮದಿಂದ ಬಂದ ಮತ್ತೊಂದು ಕಾಡಾನೆಯೂ ಸೇರಿಕೊಂಡಿದೆ. ಭಾನುವಾರ ರಾತ್ರಿ ವೇಳೆ ತುಪ್ಪೂರು ಬಳಿ ಮುಖ್ಯರಸ್ತೆಯಲ್ಲಿ ಮೂರೂ ಕಾಡಾನೆಗಳು ಒಟ್ಟಾಗಿ ರಸ್ತೆ ದಾಟುತ್ತಿರುವುದನ್ನು ಸ್ಥಳೀಯರು ಗಮನಿಸಿದ್ದಾರೆ. ಈ ಕಾಡಾನೆಗಳು ರಾತ್ರಿ ವೇಳೆಯಲ್ಲಿ ರೈತರ ತೋಟ, ಗದ್ದೆಗಳಿಗೆ ಬಂದು ಬೆಳೆ ನಾಶ ಮಾಡಿ ಬೆಳಗ್ಗಿನ ವೇಳೆಗೆ ವಾಪಾಸ್ ತುಪ್ಪೂರು ಗ್ರಾಮದ ಕಾಡಿನಲ್ಲಿ ಬಂದು ನಿಲ್ಲುತ್ತಿವೆ. ಸಲಿಗೆ ಬಂದ ಬಾಳೆ, ಕಾಫಿ, ಅಡಕೆ, ನಾಟಿ ಮಾಡಿದ್ದ ಭತ್ತದ ಸಸಿಯನ್ನು ತುಳಿದು ಹಾಳು ಮಾಡುತ್ತಿವೆ.

ತುಪ್ಪೂರು ಹೊಸಮನೆಯ ಮಂಜಪ್ಪಗೌಡ ಎಂಬುವರ ಅಡಕೆ, ಕಾಫಿ ತೋಟ, ಗದ್ದೆಯನ್ನು ನಾಶ ಮಾಡಿರುವ ಕಾಡಾನೆಗಳು ಅಲ್ಲಿಂದ ಅರಳೀಕೊಪ್ಪ ಸಮೀಪದ ಪೂರ್ಣೇಶ್ ನಾಯ್ಕ ಎಂಬುವರ ಅಡಕೆ ತೋಟಕ್ಕೆ ತೆರಳಿ ನೂರಕ್ಕೂ ಅಧಿಕ ಅಡಕೆ ಮರಗಳನ್ನು ಕೆಡವಿ ತುಳಿದು ಪುಡಿ ಮಾಡಿವೆ. ಫಸಲಿಗೆ ಬಂದಿದ್ದ 30 ವರ್ಷಕ್ಕೂ ಹಳೆಯ ಅಡಕೆ ಮರಗಳು ಸಾಕಷ್ಟು ನಷ್ಟ ಉಂಟಾಗಿದೆ.

ಖಾಂಡ್ಯ ಹೋಬಳಿಯ ಹುಯಿಗೆರೆ ಗ್ರಾಮದ ಬಿಕ್ಕರಣೆಯಲ್ಲಿಯೂ ಕಾಡಾನೆ ಹಾವಳಿ ಮುಂದುವರಿದಿದ್ದು, ಎರಡು ದಿನಗಳ ಹಿಂದೆ ಸಮೀಪದ ಅಂಡವಾನೆಯಲ್ಲಿದ್ದ ಕಾಡಾನೆ ಬಿಕ್ಕರಣೆಯ ಹಲವು ರೈತರ ತೋಟಗಳಿಗೆ ನುಗ್ಗಿ ಹಾನಿ ಮಾಡಿದೆ. ಬಿಕ್ಕರಣೆಯ ಜಗದೀಶ್ ಎಂಬುವರ ತೋಟಕ್ಕೆ ನುಗ್ಗಿರುವ ಕಾಡಾನೆ ತೆಂಗು, ಅಡಕೆ, ಕಾಫಿ, ಬಾಳೆ ಮುಂತಾದ ಗಿಡಗಳನ್ನು ಬುಡ ಸಮೇತ ನೆಲಕ್ಕುರುಳಿಸಿ ತುಳಿದು ಹಾನಿ ಮಾಡಿದೆ. ಸುತ್ತಮುತ್ತಲಿನ ಎಲ್ಲ ಪ್ರದೇಶಗಳಲ್ಲೂ ಕಾಡಾನೆ ಹಾವಳಿ ಮಿತಿ ಮೀರಿದ್ದು ಬೆಳೆಗಾರರು, ಕೂಲಿ ಕಾರ್ಮಿಕರು ಜೀವ ಭಯದಲ್ಲಿ ತೋಟಗಳಿಗೆ ಹೋಗುವಂತಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net