ಕೆಯ್ಯೂರು ಗ್ರಾಮ ವ್ಯಾಪ್ತಿಯಲ್ಲಿ ಕಾಡಾನೆ ಹಾವಳಿ

Ism_Wild
Published on

ಪುತ್ತೂರು ಗ್ರಾಮಾಂತರ: ಕೆಯ್ಯೂರು ಗ್ರಾಮದ ವಿವಿಧ ಕಡೆಗಳಿಗೆ ಕಾಡಾನೆಯೊಂದು ಲಗ್ಗೆ ಇಟ್ಟು ಕೃಷಿ ಹಾನಿ ಮಾಡಿದ್ದು, ಕೆಯ್ಯೂರಿನ ದುರ್ಗಾಪರಮೇಶ್ವರಿ-ಮಹಿಷಮರ್ದಿನಿ ದೇವಸ್ಥಾನದ ಬಳಿ ಕಾಡಾನೆಯೊಂದು ಬುಧವಾರ ಮುಂಜಾನೆ ಸಂಚರಿಸುತ್ತಿರುವುದನ್ನು ಸ್ಥಳೀಯರು ಕಂಡಿದ್ದಾರೆ.

ಕೆಯ್ಯೂರು ಕೊರಗರ ಮಜಲಿನ ಕೃಷಿಕ ಮೋಹನ್ ರೈ ಸೂತ್ರಬೆಟ್ಟು ಅವರ ಜಾಗದಲ್ಲಿದ್ದ ಕಲ್ಲು-ಮಣ್ಣಿನ ಆವರಣ ಗೋಡೆಯನ್ನು ಮೂರು ಕಡೆ ಕೆಡವಿ ಹಾಕಿರುವ ಕಾಡಾನೆ 4 ತೆಂಗಿನಮರಗಳನ್ನು ಮುರಿದು ಹಾಕಿದೆ. ಕೆಯ್ಯೂರು ದೇವಸ್ಥಾನ ಸಮೀಪ ಕೆಯ್ಯೂರು-ಇಳಂತಾಜೆ ರಸ್ತೆ ಪಕ್ಕದಲ್ಲಿರುವ ವಿಠಲ ರೈ ಪೊಯ್ಯೋಲೆ ಅವರ ತೋಟಕ್ಕೆ ನುಗ್ಗಿ 5 ತೆಂಗಿನಮರ ಹಾಗೂ ಇತರ ಕೃಷಿ ನಾಶಗೊಳಿಸಿರುವ ಕಾಡಾನೆ ಜಾಗದ ಆವರಣ ಗೋಡೆಯನ್ನು ಒಂದು ಕಡೆಯಲ್ಲಿ ಕೆಡವಿ ಹಾಕಿದೆ. ಶ್ರೀನಿವಾಸ ಭಟ್ ಅವರ ತೋಟಕ್ಕೆ ಅಳವಡಿಸಲಾಗಿದ್ದ ಬೇಲಿ ಮತ್ತು ಆವರಣ ಗೋಡೆಯನ್ನು ಹಾನಿಗೊಳಿಸಿದೆ. ಗುಲಾಬಿ ರೈ ಪೊಯ್ಯೋಳೆ ಅವರ ತೋಟದಲ್ಲಿ ಬಾಳೆ ಕೃಷಿಯನ್ನು ನಾಶ ಮಾಡಿರುವ ಕಾಡಾನೆ ದೀವಿ ಮರಗಳ ಸಿಪ್ಪಿಗಳನ್ನು ತೆಗೆದು ತಿಂದಿದೆ.

ಕೆಯ್ಯೂರು ಗ್ರಾಮದ ಕೊರಗರ ಮಜಲು, ಇಳಂತಾಜೆ, ಎಟ್ಯಡ್ಕ ವ್ಯಾಪ್ತಿಯ ಕೃಷಿ ತೋಟಗಳಿಗೆ ಕಾಡಾನೆ ನುಗ್ಗಿ ತೆಂಗು, ಅಡಕೆ, ಬಾಳೆ ಕೃಷಿಗಳನ್ನು ಹಾನಿ ಮಾಡಿರುವ ಕಾಡಾನೆ ಹಗಲು ವೇಳೆ ಕೆಯ್ಯೂರು ಗ್ರಾಮ ವ್ಯಾಪ್ತಿಯಲ್ಲಿರುವ ಉರಿಕಿ ಕಾಡು ಮತ್ತು ಕಣಿಯಾರುಮಲೆ ರಕ್ಷಿತಾರಣ್ಯ ಪ್ರದೇಶ ಸೇರಿಕೊಳ್ಳುತ್ತಿದ್ದು ಸಂಜೆಯಾಗುತ್ತಿದ್ದಂತೆಯೇ ಕೃಷಿ ಪ್ರದೇಶಗಳಿಗೆ ಇಳಿದು ಬರುತ್ತಿದೆ. ಮಂಗಳವಾರ ಇಳಂತಾಜೆ ಕೋಡಿಮಜಲು ವ್ಯಾಪ್ತಿಯಲ್ಲಿ ಕಾಡಾನೆಗಳು ತಿರುಗಾಡಿದ್ದರೂ ಹೆಚ್ಚಿನ ಕೃಷಿ ಹಾನಿ ಮಾಡಿಲ್ಲ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

ಸೋಮವಾರ ಸಂಜೆ ಇಳಂತಾಜೆ ವ್ಯಾಪ್ತಿಯ ರಸ್ತೆ ಸಮೀಪದ ಕಾಡುಭಾಗದಲ್ಲಿ ಸಂಚರಿಸುತ್ತಿದ್ದ ಕಾಡಾನೆಯೊಂದನ್ನು ಕೆಯ್ಯೂರು ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಸುರೇಂದ್ರ ರೈ ಇಳಂತಾಜೆ ತಮ್ಮ ಮೊಬೈಲಿನಲ್ಲಿ ಚಿತ್ರೀಕರಿಸಿ, ಆ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿ ಎಚ್ಚರಿಸಿದ್ದರು. ಕೆಯ್ಯೂರು-ಕಣಿಯಾರು ರಸ್ತೆಯಲ್ಲಿ ಸಂಚರಿಸುತ್ತಿದ್ದ ರಿಕ್ಷಾ ಚಾಲಕರೊಬ್ಬರು ಆ ಗುಂಪಿನಲ್ಲಿ 3 ಕಾಡಾನೆಗಳಿದ್ದುದ್ದನ್ನು ಕಂಡಿದ್ದರು. ಕೆಯ್ಯೂರು ವ್ಯಾಪ್ತಿಯಲ್ಲಿ ಕೃಷಿ ಹಾನಿ ಮಾಡುತ್ತಿರುವ ಕಾಡಾನೆಗಳ ಒಂದು ಗುಂಪಿನಲ್ಲಿ 3 ಕಾಡಾನೆಗಳಿದ್ದು, ಕೆಯ್ಯೂರು ದೇವಸ್ಥಾನ ಹಾಗೂ ಕೊರಗರ ಮಜಲು ವ್ಯಾಪ್ತಿಯಲ್ಲಿ ತಿರುಗಾಡುತ್ತಿರುವುದು ಒಂಟಿ ಕಾಡಾನೆಯಾಗಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

ಅರಣ್ಯ ಇಲಾಖೆಯ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದಾರೆ. ಸರ್ಕಾರ ಮತ್ತು ಅರಣ್ಯ ಇಲಾಖೆ ಕಾಡಾನೆಗಳನ್ನು ಕೂಡಲೇ ಸೆರೆ ಹಿಡಿದು ಅರಣ್ಯ ಪ್ರದೇಶಕ್ಕೆ ಬಿಡುವ ಕೆಲಸ ಮಾಡಬೇಕು ಎಂಬ ಆಗ್ರಹ ಜನತೆಯಿಂದ ವ್ಯಕ್ತವಾಗುತ್ತಿದೆ.

ಅರಣ್ಯ ಭಾಗದ ಮಂದಿಯಲ್ಲಿ ಆವರಿಸಿದ ಭಯ

ಕೆಯ್ಯೂರು ಗ್ರಾಮ ವ್ಯಾಪ್ತಿಯ ಇಳಂತಾಜೆ, ದೇರ್ಲ, ಎಟ್ಯಡ್ಕ ಪ್ರದೇಶಗಳು ಕಣಿಯಾರುಮಲೆ ರಕ್ಷಿತಾರಣ್ಯದ ಬದಿಯಲ್ಲಿದ್ದು, ಈ ಪ್ರದೇಶ ವಾಹನ ಸಂಚಾರ ಅತಿ ಕಡಿಮೆ ಇರುವ ನಿರ್ಜನ ಪ್ರದೇಶಗಳಾಗಿವೆ. ಈ ಭಾಗದಲ್ಲಿ ಪ್ರತ್ಯೇಕವಾಗಿ ಎರಡು ಭಾಗಗಳಲ್ಲಿ ಕಾಡಾನೆಗಳು ಸಂಚರಿಸುತ್ತಾ ಕೃಷಿ ಹಾನಿ ಮಾಡುತ್ತಿದ್ದು, ವಾಹನ ಸಂಚಾರವಿಲ್ಲದ ಈ ಭಾಗದಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳು ಬೆಳಗ್ಗೆ ಮತ್ತು ಸಂಜೆ ನಡೆದುಕೊಂಡೇ ಶಾಲೆಗೆ ಹೋಗುತ್ತಿದ್ದಾರೆ. ಅಲ್ಲದೆ ಈ ಭಾಗದ ಹೆಚ್ಚಿನ ಗ್ರಾಮಸ್ಥರು ಬೆಳಗ್ಗೆ ಪೇಟೆಗೆ ಮತ್ತು ಸಂಜೆ ಮನೆಗೆ ನಡೆದುಕೊಂಡೇ ಹೋಗುತ್ತಿದ್ದಾರೆ. ಕಾಡಾನೆಗಳು ಸಂಜೆ ಮತ್ತು ಬೆಳಗ್ಗೆ ದಾಂಧಲೆ ಮಾಡುತ್ತಿರುವುದರಿಂದ ಭಯ ಮಡುಗಟ್ಟಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net