ಅರಂಬೂರಲ್ಲಿ ಮತ್ತೆ ಕಾಣಿಸಿಕೊಂಡ ಕಾಡಾನೆಗಳ ಹಿಂಡು: ಅರಣ್ಯ ಡಿಪೋ ಕಾಂಪೌಂಡ್ ಪುಡಿಗಟ್ಟಿದ ಗಜ ಪಡೆ

Published on

ವಿಜಯವಾಣಿ ಸುದ್ದಿಜಾಲ ಸುಳ್ಯ

ಸುಳ್ಯ ನಗರ ಸಮೀಪದ ಅರಂಬೂರಿನಲ್ಲಿ ಕಾಡಾನೆಗಳ ಹಿಂಡು ಶುಕ್ರವಾರ ರಾತ್ರಿ ಮತ್ತೆ ಕಾಣಿಸಿಕೊಂಡಿದೆ.

ಶುಕ್ರವಾರ ಬೆಳಗ್ಗಿನ ಜಾವ 6-7 ಆನೆಗಳ ಹಿಂಡು ರಸ್ತೆ ದಾಟಿ ಪೂಮಲೆ ಕಾಡಿನತ್ತ ಸಾಗಿತ್ತು. ಈ ದೃಶ್ಯ ವಾಹನ ಸವಾರರು ಸೆರೆ ಹಿಡಿದಿದ್ದು ವೈರಲ್ ಆಗಿತ್ತು. ಅದೇ ದಿನ ರಾತ್ರಿ ಮತ್ತೆ ಮರಳಿ ಬಂದ ಗಜಪಡೆ ಅರಂಬೂರು ಸಮೀಪದ ಅರಣ್ಯ ಇಲಾಖೆಯ ಡಿಪೋದ(ನಾಟಾ ಸಂಗ್ರಹಾಲಯ) ಕಾಂಪೌಂಡ್ ಪುಡಿಗೆಟ್ಟಿದೆ. ಕಾಂಪೌಂಡ್ ಪುಡಿ ಮಾಡಿ ಒಳಗೆ ನುಗ್ಗಿದ ಆನೆಗಳು ಡಿಪೋದ ಒಳಗೆ ಸುತ್ತಾಟ ನಡೆಸಿವೆ.

ಮರಿಗಳು ಸೇರಿ 6-7 ಆನೆಗಳ ಹಿಂಡು ಅರಂಬೂರು, ಪರಿವಾರಕಾನ ಸೇರಿದಂತೆ ಆಲೆಟ್ಟಿ ಗ್ರಾಮದ ವಿವಿಧ ಭಾಗಗಳಲ್ಲಿ ಕಳೆದ ಹಲವು ದಿನಗಳಿಂದ ಕೃಷಿಗೆ ಹಾನಿ ಮಾಡುತ್ತಿವೆ. ತೆಂಗು, ಬಾಳೆ, ಅಡಕೆ ಸೇರಿ ವಿವಿಧ ಕೃಷಿಯನ್ನು ನಾಶಪಡಿಸಿದೆ. ಆನೆಗಳ ಹಿಂಡು ಪೂಮಲೆ ಕಾಡಿನತ್ತ ಸಾಗಿದೆ. ಸಣ್ಣ ಮರಿಗಳು ಇರುವ ಕಾರಣ ಆನೆ ಹಿಂಡು ದೂರ ಸರಿಯುತ್ತಿಲ್ಲ ಎಂದು ವಲಯ ಅರಣ್ಯಾಧಿಕಾರಿ ಎನ್.ಮಂಜುನಾಥ್ ತಿಳಿಸಿದ್ದಾರೆ.

ಶುಕ್ರವಾರ ರಾತ್ರಿ ವಿಪರೀತ ಮಳೆ ಸುರಿಯುತ್ತಿದ್ದಂತೆ ಕಾಡಾನೆಗಳ ಹಿಂಡು ಅರಂಬೂರು ಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಮತ್ತು ಜನವಸತಿ ಪ್ರದೇಶದ ಸಮೀಪದಲ್ಲಿ ಬೀಡು ಬಿಟ್ಟ ಕಾರಣ ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಯಾಗಿತ್ತು. ತಡರಾತ್ರಿ ತನಕ ಪ್ರದೇಶದಲ್ಲಿ ಕಾಡಾನೆಗಳ ಹಿಂಡು ಬೀಡು ಬಿಟ್ಟಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ.

ಪೂವಂದೂರಲ್ಲಿ ಮತ್ತೆ ಒಂಟಿ ಸಲಗ ಉಪಟಳ

 ಅರಿಯಡ್ಕ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾಡನ್ನೂರು ಗ್ರಾಮದ ಪೂವಂದೂರು ಪರಿಸರಕ್ಕೆ ಒಂಟಿ ಸಲಗವೊಂದು 6 ತಿಂಗಳ ಬಳಿಕ ಮತ್ತೆ ಕಾಲಿಟ್ಟು ಕೃಷಿ ಹಾನಿ ಮಾಡುವ ಜತೆಗೆ ಜನತೆಯಲ್ಲಿ ಆತಂಕ ಸೃಷ್ಟಿಸಿದೆ.

ಪೂವಂದೂರು ನಿವಾಸಿ ಕಮಲಾಕ್ಷ ಬೋರ್ಕರ್ ಎಂಬುವರ ತೋಟಕ್ಕೆ ಶುಕ್ರವಾರ ರಾತ್ರಿ ಕಾಡಾನೆ ಬಂದು ಬಾಳೆ ಗಿಡ, ಅಡಕೆ ಮತ್ತು ತೆಂಗಿನ ಸಸಿಗಳನ್ನು ನಾಶ ಮಾಡಿದೆ. ತೋಟಕ್ಕೆ ಅಳವಡಿಸಿದ್ದ ಮುಳ್ಳು ತಂತಿ ಬೇಲಿ ಮುರಿದು ತೋಟದೊಳಗೆ ಪ್ರವೇಶಿಸಿ ಅಪಾರ ಪ್ರಮಾಣದ ಕೃಷಿ ನಾಶ ಮಾಡಿರುವುದಾಗಿ ತಿಳಿದು ಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net