

ಲಿಂಗದಹಳ್ಳಿ: ಭದ್ರಾ ಅಭಯಾರಣ್ಯದ ಬಿ.ಗುರುಪುರ ಗ್ರಾಮದ ಸಮೀಪ ಆನೆ ದಾಳಿಯಿಂದ ರೈತ ಮೃತಪಟ್ಟಿ ಒಂದೇ ದಿನದ ಅಂತರದಲ್ಲಿ ವಿದ್ಯುತ್ ತಗುಲಿ 35 ವರ್ಷ ಪ್ರಾಯದ ಗಂಡಾನೆಯೊಂದು ಮೃತಪಟ್ಟಿದೆ.
ತಣಿಗೆಬೈಲು ವಲಯಾರಣ್ಯದ ಬದಿಯಲ್ಲಿರುವ ಕಾಫಿ ತೋಟದ ಸರಹದ್ದಿನ ಮೂಲಕ ನಂದಿಗಾವೆ ದಂಡುಬಿಟ್ಟ ಹಾರ ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಅಳವಡಿಸಿದ್ದ ವಿದ್ಯುತ್ ಮಾರ್ಗಕ್ಕೆ ತಗುಲಿ ಮೃತಪಟ್ಟಿದೆ. ಕಾಫಿ ತೋಟದಲ್ಲಿದ್ದ ಹಲಸಿನ ಹಣ್ಣುಗಳನ್ನು ತಿನ್ನಲು ಮರದ ಬಳಿಗೆ ಬಂದಿದೆ. ಕಾಡಾನೆ ಹಲಸಿನ ಮರದ ಬದಿಯಲ್ಲೇ ಇದ್ದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಇದರಿಂದ ವಿದ್ಯುತ್ ಕಂಬ ಮುರಿದು ನೆಲಕ್ಕೆ ಬಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ಕಾಡಾನೆ ಸಾವನ್ನಪ್ಪಿರಬಹುದು ಎಂದು ಅಂದಾಜಿಸಲಾಗಿದೆ.
ಹಲಸಿನ ಹಣ್ಣಿನ ಆಸೆಗಾಗಿ ಬೇಸಿಗೆ ಸಮಯದಲ್ಲಿ ಕಾಡಾನೆಗಳು ಗ್ರಾಮಸ್ಥರು ಮತ್ತು ರೈತರುಗಳ ಜಮೀನುಗಳಿಗೆ ದಾಳಿ ಮಾಡಿ ಹಲಸಿನ ಹಣ್ಣು ಮತ್ತು ಮಾವಿನ ಹಣ್ಣುಗಳನ್ನು ತಿನ್ನುವುದು ಸರ್ವೇ ಸಾಮಾನ್ಯವಾಗಿದೆ. ಹಲಸಿನ ಹಣ್ಣನ್ನು ತಿನ್ನುವ ಬರದಲ್ಲಿ ಪಕ್ಕದಲ್ಲೇ ಇದ್ದ ವಿದ್ಯುತ್ ಮಾರ್ಗಕ್ಕೆ ಬಳಸಿದ್ದ ಕಂಬದ ಮೇಲೆ ಬಿದ್ದ ಕಾರಣ ವಿದ್ಯುತ್ ತಂತಿಗೆ ಸಿಲುಕಿ ಆನೆ ಸಾವನ್ನಪ್ಪಿದೆ.
ವಿಷಯ ತಿಳಿದ ತಕ್ಷಣ ಭದ್ರ ವನ್ಯಜೀವಿ ತಣಿಗೆಬೈಲು ವಿಭಾಗದ ವಲಯ ಅರಣ್ಯಾಧಿಕಾರಿ ಸುಧಾಕರ್ ನಾಯಕ್, ಎಸಿಎಫ್ ಸಂತೋಷ್ ಸಾಗರ್, ಲಿಂಗದಹಳ್ಳಿ ಠಾಣಾಧಿಕಾರಿ ಶಶಿಕುಮಾರ್, ಲಿಂಗದಹಲ್ಳಿ ಮೆಸ್ಕಾಂ ವಿಭಾಗದ ಇಂಜಿನಿಯರ್, ತಿಪ್ಪೇಶ್ ಮತ್ತು ಸಿಬ್ಬಂದಿ ಸ್ಥಳ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ರಾಜಕುಮಾರ್ ದೂಪದಖಾನ್ ಗ್ರಾಮಸ್ಥರು.