

ಗಣೇಶ್ ಮಾವಂಜಿ ಸುಳ್ಯ
ಕಾಡಾನೆ, ಕಾಡುಪ್ರಾಣಿಗಳ ಹಾವಳಿಯಿಂದ ಬೆಳೆ ನಾಶ, ಅದಕ್ಕೆ ಸರ್ಕಾರದ ಪರಿಹಾರ, ಉಪಟಳ ನಿಯಂತ್ರಿಸಲು ಕೈಗೊಳ್ಳುವ ಮಾರ್ಗೋಪಾಯಗಳು ಇವೆಲ್ಲವೂ ನಿರಂತರ ಪ್ರಕ್ರಿಯೆ. ಇದಕ್ಕೆ ಶಾಶ್ವತ ಪರಿಹಾರ ಇನ್ನೂ ಸಿಕ್ಕಿಲ್ಲ. ಸರ್ಕಾರದ ಪರಿಹಾರ ಕಣ್ಣೊರೆಸುವ ತಂತ್ರವಾಗುತ್ತಿದೆಯೇ ಹೊರತು ಇದರಿಂದ ರೈತರಿಗೆ ಸಿಗುವುದು ಅತ್ಯಲ್ಪ.
ಕೃಷಿ ಮಾಡಲು ರೈತರು ಬಸಿದ ಬೆವರ ಹನಿಗೆ ಸಮಾನವಾಗುವಷ್ಟು ಕೂಡ ಈ ಪರಿಹಾರ ಸಾಕಾಗುವುದಿಲ್ಲ.
ಅಡಕೆ, ತೆಂಗು ಹಾಗೂ ಬಾಳೆ ದಕ್ಷಿಣ ಕನ್ನಡ ಜಿಲ್ಲೆಯ ರೈತರ ಪ್ರಧಾನ ಬೆಳೆಗಳು. ಸಾಮಾನ್ಯವಾಗಿ ಅಡಕೆ ಸಸಿ ನೆಟ್ಟು ಫಸಲು ಬರಬೇಕಾದರೆ ಐದಾರು ವರ್ಷಗಳಾದರೂ ಬೇಕು. ಒಂದು ಅಡಕೆ ಸಸಿ ನೆಟ್ಟು ಅದು ಫಸಲು ಕೊಡಬೇಕಾದರೆ ಓರ್ವ ರೈತ ನಾಲ್ಕೈದು ವರ್ಷಗಳಲ್ಲಿ ಕಡಿಮೆ ಎಂದರೂ 5,000 ರೂ. ವ್ಯಯಿಸಬೇಕಾಗುತ್ತದೆ.
ಇದೇ ರೀತಿ ತೆಂಗಿನ ಸಸಿ ಇಳುವರಿ ಕೊಡಬೇಕಾದರೆ ಕನಿಷ್ಠ ಏಳೆಂಟು ವರ್ಷವಾದರೂ ಕಾಯಬೇಕು. ಒಂದು ತೆಂಗಿನ ಸಸಿ ಫಸಲು ಕೊಡಬೇಕಾದರೆ ರೈತ ಏಳೆಂಟು ವರ್ಷಗಳಲ್ಲಿ ಕನಿಷ್ಠ ಎಂಟು ಸಾವಿರ ರೂ. ವ್ಯಯಿಸಬೇಕಾಗುತ್ತದೆ.
ರೈತ ಇಳುವರಿಗಾಗಿ ಕಾದು ಕುಳಿತಿದ್ದಾಗ ಕಾಡಾನೆ, ಕಾಡುಪ್ರಾಣಿಗಳ ದಾಳಿಗೆ ಒಳಗಾದರೆ ಸರ್ಕಾರ ಕೊಡುವ ಪರಿಹಾರ ಭೀಮನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂಬಂತಾಗುತ್ತದೆ. ಒಂದು ತೆಂಗಿನ ಮರ ರೈತನಿಗೆ ವರ್ಷವೊಂದಕ್ಕೆ 5,000 ರೂ. ಆದಾಯ ನೀಡಿದರೆ, 70-80 ವರ್ಷಗಳ ಜೀವಿತಾವಧಿಯಲ್ಲಿ ಕನಿಷ್ಠ 4 ಲಕ್ಷ ರೂ. ಆದಾಯ ನೀಡಬಹುದು.
ಆನೆ ದಾಳಿಯಿಂದ ಅಡಕೆ, ತೆಂಗು ನಾಶವಾದರೆ ಸರ್ಕಾರ ನೀಡುವ ಪರಿಹಾರ ಮೊತ್ತ ಅತ್ಯಲ್ಪ. ಸರ್ಕಾರ ಮೂರು ವಿಧಗಳಲ್ಲಿ ಪರಿಹಾರ ನೀಡುತ್ತದೆ. ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಅಡಕೆ ಗಿಡಗಳಿಗೆ ಪರಿಹಾರವಾಗಿ 200 ರೂ. ನೀಡಿದರೆ ಆರು-ಒಂಬತ್ತು ವರ್ಷಗಳ ಅಡಕೆ ಗಿಡಗಳಿಗೆ ಪರಿಹಾರವಾಗಿ 400 ರೂ. ಹಾಗೂ 10ಕ್ಕಿಂತ ಮೇಲ್ಪಟ್ಟ ಅಡಕೆ ಗಿಡಗಳಿಗೆ 1,000 ರೂ. ನೀಡುತ್ತದೆ. ತೆಂಗಿನ ಸಸಿ ಐದು ವರ್ಷಗಳಿಂದ ಕಡಿಮೆ ವಯಸ್ಸಿನದ್ದಾದರೆ ಪರಿಹಾರವಾಗಿ 400 ರೂ., ಆರು-ಒಂಬತ್ತು ವರ್ಷ ವಯಸ್ಸಿನದ್ದಾದರೆ 800 ರೂ. ಹಾಗೂ ಹತ್ತು ವರ್ಷಗಳಿಗೆ ಮೇಲ್ಪಟ್ಟದ್ದಾದರೆ ಪರಿಹಾರವಾಗಿ 2,000 ರೂ. ನೀಡಲಾಗುತ್ತದೆ.
ಸುಳ್ಯ ವಲಯದಲ್ಲಿ ವರ್ಷದಿಂದ ವರ್ಷಕ್ಕೆ ಆನೆಗಳ ಹಾವಳಿಯಿಂದ ಬೆಳೆ ನಾಶಗೊಂಡ ಪ್ರಕರಣಗಳು ಹೆಚ್ಚುತ್ತಲೇ ಇವೆ. ಈ ವರ್ಷ 40 ಪ್ರಕರಣ ದಾಖಲಾಗಿದ್ದು ಇದರಲ್ಲಿ 56 ಪ್ರಕರಣಗಳಿಗೆ ನೀಡಬೇಕಾದ ಪರಿಹಾರ ಮೊತ್ತ 6,85,430 ರೂ. ಕೊಡಲು ಬಾಕಿ ಇದೆ. ಕೆಲವು ರೈತರು ಪರಿಹಾರ ಪಡೆಯುವ ಕ್ಲಿಷ್ಟ ಪ್ರಕ್ರಿಯೆಗಳಿಗೆ ಹೆದರಿ ಅರ್ಜಿಯನ್ನೇ ಹಾಕಲು ಹೋಗುವುದಿಲ್ಲ. ಕೆಲವರಿಗೆ ಅರ್ಜಿ ಹಾಕಿದರೂ ಪರಿಹಾರ ಸಿಗದಂತಹ ಪರಿಸ್ಥಿತಿ ಇದೆ.
ಮಾನವ ಹಾಗೂ ಕಾಡುಪ್ರಾಣಿಗಳ ನಡುವಿನ ಸಂಘರ್ಷ ಅನಾದಿ ಕಾಲದಿಂದಲೂ ಇದೆ. ಬೆಳೆನಾಶಕ್ಕೆ ಪರಿಹಾರ ಎಂಬುದು ಕೇವಲ ಮಾನವೀಯ ನೆಲೆಯಲ್ಲಿ ನೀಡುವ ಪರಿಹಾರವೇ ಹೊರತು ರೈತನ ಶ್ರಮಕ್ಕಾಗಲೀ, ಬೆಳೆಯ ಬೆಲೆ ನಿರ್ಧರಿಸಿ ನೀಡುವ ಮೊತ್ತವಲ್ಲ. ಈಗ ನೀಡುತ್ತಿರುವ ಪರಿಹಾರ ಧನ ಐದಾರು ವರ್ಷಗಳ ಹಿಂದೆ ನಿರ್ಧರಿಸಿದ್ದು ಅದನ್ನು ಪರಿಷ್ಕರಿಸುವ ಅಗತ್ಯವಿದೆ. ಬಾಕಿ ಉಳಿದ ಪರಿಹಾರದ ಮೊತ್ತವನ್ನು ಆದಷ್ಟು ಬೇಗ ವಿತರಿಸಲಾಗುವುದು. -ಗಿರೀಶ್ ಆರ್., ರೇಂಜರ್, ಸುಳ್ಯ ವಲಯ ತಿಂಗಳಿಗೊಮ್ಮೆಯಾದರೂ ಆನೆಗಳು ತೋಟಕ್ಕೆ ದಾಳಿ ಮಾಡುತ್ತವೆ. ಆನೆಗಳು ನಮ್ಮ ತೋಟದ ಸನಿಹ ಬಂದಿವೆಯೆಂದಾದರೆ ಆ ರಾತ್ರಿ ನಮಗೆ ನಿದ್ದೆ ಇಲ್ಲವೆಂದೇ ಅರ್ಥ. ರಾತ್ರಿಯಿಡೀ ಎಚ್ಚರವಾಗಿದ್ದು ಶಬ್ದ ಮಾಡುತ್ತ ತೋಟ ಕಾಯಬೇಕು. ಕೆಲವೊಮ್ಮೆ ಸುಳಿವು ನೀಡದೆ ಆನೆಗಳು ದಾಳಿ ಮಾಡುವುದೂ ಇದೆ. ಎರಡು ವರ್ಷಗಳ ಹಿಂದೆ ಹಾಕಿದ ಅರ್ಜಿಯದ್ದೇ ಪರಿಹಾರ ದೊರೆತಿಲ್ಲ. ಹಾಗಾಗಿ ಆನೆ ದಾಳಿ ನಡೆಸಿ ಕೃಷಿ ನಾಶವಾದಾಗ ಅರ್ಜಿ ಹಾಕುವುದೇ ವ್ಯರ್ಥ ಎನಿಸುತ್ತದೆ. ಕೃಷಿ ನಾಶವಾದಾಗ ಇಲಾಖೆಯೇ ಖುದ್ದು ರೈತರ ಸಹಾಯಕ್ಕೆ ಬಂದು ಯೋಗ್ಯ ಪರಿಹಾರ ನೀಡುವಂತಾಗಬೇಕು. -ದಿನಕರ್ ಪಡ್ಪು, ಕೃಷಿಕ