ಕಾಡಾನೆ ಹಾವಳಿಗಿಲ್ಲ ಅಂಕುಶ!: ವರ್ಷದಿಂದ ವರ್ಷಕ್ಕೆ ಪ್ರಕರಣಗಳ ಹೆಚ್ಚಳ ಪರಿಹಾರ ಮೊತ್ತಕ್ಕೆ ಗಣನೀಯ ವೆಚ್ಚ

New Project (18)
Published on

ಗಂಗಾಧರ ಕಲ್ಲಪಳ್ಳಿ ಸುಳ್ಯ

ಇತ್ತೀಚೆಗಿನ ವರ್ಷಗಳಲ್ಲಿ ಸುಳ್ಯ ತಾಲೂಕಿನ ಜತೆಗೆ ಇತರೆಡೆಗಳಲ್ಲೂ ಕಾಡಾನೆ ಹಾವಳಿ ಅನಿಯಂತ್ರಿತಗೊಂಡಿದ್ದು, ಕೃಷಿ ಹಾನಿಯಿಂದ ರೈತರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ. ರೈತರಿಗಾದ ನಷ್ಟಕ್ಕೆ ಅರಣ್ಯ ಇಲಾಖೆ ವತಿ ಒಂದಿಷ್ಟು ಪರಿಹಾರ ನೀಡುತ್ತಿದ್ದು, ಕೆಲವು ವರ್ಷಗಳಿಂದ ಪರಿಹಾರ ಮೊತ್ತವನ್ನೂ ಹೆಚ್ಚಿಸಲಾಗಿದೆ.

ಆನೆ ಸಹಿತ ವನ್ಯಪ್ರಾಣಿಗಳ ದಾಳಿಯಿಂದ ಆಗುವ ಕೃಷಿ ಹಾನಿ, ಜೀವ ಹಾನಿಗೆ ಪ್ರತ್ಯೇಕ ಮಾನದಂಡದಂತೆ ಪರಿಹಾರ ನೀಡಲಾಗುತ್ತದೆ. 2025-26ನೇ ಸಾಲಿನಲ್ಲಿ ಸುಳ್ಯ ವಲಯ ಅರಣ್ಯ ವ್ಯಾಪ್ತಿಯಲ್ಲಿ ಕೃಷಿ ಹಾನಿಗೆ ಸಂಬಂಧಿಸಿ 51 ಪ್ರಕರಣಗಳಲ್ಲಿ 17,51,144 ರೂ. ಪರಿಹಾರ ಪಾವತಿಸಲಾಗಿದೆ. 2024-25ನೇ ಸಾಲಿನಲ್ಲಿ 121 ಪ್ರಕರಣಗಳಲ್ಲಿ 33,59,508 ರೂ. ಪರಿಹಾರ ನೀಡಲಾಗಿದೆ. 2023-24ನೇ ಸಾಲಿನಲ್ಲಿ 131 ಪ್ರಕರಣಗಳಲ್ಲಿ 42,16,568 ರೂ. ಕೃಷಿ ಹಾನಿಗೆ ಪರಿಹಾರ ವಿತರಿಸಲಾಗಿತ್ತು. 2008-09ನೇ ಸಾಲಿನಿಂದ 2025ರ ಮೇ 3ರ ತನಕ ಒಟ್ಟು 18 ವರ್ಷಗಳಲ್ಲಿ 880 ಪ್ರಕರಣಗಳಿಗೆ 1.74 ಕೋಟಿ ರೂ. ಪರಿಹಾರ ವಿತರಿಸಲಾಗಿದೆ.

ದಾಳಿ ಪ್ರಕರಣ ಹೆಚ್ಚಳ: ಹಿಂದಿನ ವರ್ಷಗಳಲ್ಲಿ ಆನೆ ದಾಳಿ ಪ್ರಕರಣಗಳು ಕಡಿಮೆ ಸಂಖ್ಯೆಗಳಲ್ಲಿ ದಾಖಲಾಗಿದ್ದು, ಪ್ರಸ್ತುತ ಪ್ರಕರಣಗಳು ಹೆಚ್ಚಾಗುತ್ತಿವೆ. 2008-09ನೇ ಸಾಲಿನಲ್ಲಿ ಕೇವಲ 8 ಪ್ರಕರಣಗಳಲ್ಲಿ 58,540ರೂ., 2009-10ನೇ ಸಾಲಿನಲ್ಲಿ 4 ಪ್ರಕರಣಗಳಲ್ಲಿ 58,980 ರೂ., 2010-11ನೇ ಸಾಲಿನಲ್ಲಿ 3 ಪ್ರಕರಣಕ್ಕೆ 21,330 ರೂ. ಪರಿಹಾರ ನೀಡಲಾಗಿತ್ತು. ಆದರೆ ಇತ್ತೀಚೆಗಿನ ವರ್ಷಗಳಲ್ಲಿ ಭಾರಿ ಹೆಚ್ಚಳವಾಗಿದ್ದು, ಪ್ರತಿ ವರ್ಷ ನೂರಕ್ಕೂ ಅಧಿಕ ಪ್ರಕರಣಗಳಲ್ಲಿ ಲಕ್ಷಾಂತರ ರೂ. ಪರಿಹಾರ ಪಾವತಿಸಲಾಗುತ್ತದೆ.

ಪರಿಹಾರ ಪಡೆಯುವ ವಿಧಾನ

ಪಹಣಿ ಪತ್ರ, ಕೃಷಿ ಹಾನಿಯ ಚಿತ್ರ, ಬ್ಯಾಂಕ್ ಖಾತೆ ವಿವರ, ಆಧಾರ್ ಸಹಿತ ಪ್ರಮುಖ ದಾಖಲೆಗಳೊಂದಿಗೆ ಅರಣ್ಯ ಇಲಾಖೆೆ ಕಚೇರಿಗೆ ಅರ್ಜಿ ಸಲ್ಲಿಸಬೇಕು. ಆನ್‌ಲೈನ್ ಮೂಲಕ ಮಂಜೂರಾದ ಆದೇಶ ಪತ್ರದ ಪ್ರತಿಯು ವಲಯ ಅರಣ್ಯಾಧಿಕಾರಿ ಹಾಗೂ ಫಲಾನುಭವಿಗಳಿಗೆ ರವಾನೆಯಾಗುತ್ತದೆ. ಜತೆಗೆ ಆನ್‌ಲೈನ್ ಮೂಲಕವೇ ಫಲಾನುಭವಿಗಳ ಖಾತೆಗೆ ಪರಿಹಾರ ಹಣ ಜಮೆಯಾಗುತ್ತದೆ.

ತಡೆಗೆ ಕ್ರಮಗಳು ಏನೇನು?

ಅರಣ್ಯದ ಅಂಚಿನಲ್ಲಿ ಸೋಲಾರ್ ಬೇಲಿಗಳನ್ನು ಅಳವಡಿಸಲಾಗುತ್ತದೆ. ನೇತಾಡುವ ಸೋಲಾರ್ ತೂಗುಬೇಲಿ ಇವುಗಳಲ್ಲಿ ಪ್ರಮುಖವಾದುದ್ದು. ಸುಳ್ಯ ವಲಯ ವ್ಯಾಪ್ತಿಯಲ್ಲಿ 11ಕಿ.ಮಿ. ಉದ್ದಕ್ಕೆ ಹ್ಯಾಂಗಿಂಗ್ ಸೋಲಾರ್ ಫೆನ್ಸಿಂಗ್ ಅಳವಡಿಸಿದ್ದು, ಆನೆಗಳಿಗೆ ಸುಲಭವಾಗಿ ನಾಶಪಡಿಸಲಾಗುವುದಿಲ್ಲ. ಅಜ್ಜಾವರ, ಆಲೆಟ್ಟಿ, ಮಂಡೆಕೋಲು ಮತ್ತಿತರ ಭಾಗಗಳಲ್ಲಿ ಈ ಸೋಲಾರ್ ತೂಗು ಬೇಲಿ ನಿರ್ಮಿಸಿದೆ. ಸುಳ್ಯ ವಲಯದಲ್ಲಿ ಕಳೆದ 5 ವರ್ಷದಲ್ಲಿ 17 ಕಿ.ಮಿ. ಕಂದಕ ನಿರ್ಮಿಸಲಾಗಿದ್ದು, 560 ಮೀ. ಕಾಂಕ್ರೀಟ್ ಸ್ತಂಭ ನಿರ್ಮಿಸಲಾಗಿದೆ. ರೈತರ ತೋಟದ ಸುತ್ತ ಸೋಲಾರ್ ಬೇಲಿ ನಿರ್ಮಾಣಕ್ಕೆ ಸ್ವತಃ ಇಲಾಖೆಯೇ ಶೇ.50 ಸಹಾಯಧನ ನೀಡುತ್ತಿದೆ. ಜತೆಗೆ ಅರಣ್ಯದ ಐದು ಕಡೆಗಳಲ್ಲಿ ಕೆರೆಗಳನ್ನು ನಿರ್ಮಿಸಲಾಗಿದೆ.

ಸುಳ್ಯ ತಾಲೂಕಿನ ಸುತ್ತಲೂ ಇರುವ ದಟ್ಟಕಾಡಿನಿಂದ ಆನೆಗಳು ಹಾಗೂ ಇತರ ವನ್ಯಪ್ರಾಣಿಗಳು ನಾಡಿಗೆ ಬರುತ್ತವೆ. ಆನೆಗಳು ನಾಡಿಗೆ ಬರುವುದನ್ನು ತಡೆಯಲು ಅರಣ್ಯ ಇಲಾಖೆ ಸಾಕಷ್ಟು ಕ್ರಮಗಳನ್ನು ಕೈಗೊಂಡರೂ ಪೂರ್ತಿಯಾಗಿ ತಡೆಯಲು ಸಾಧ್ಯವಾಗಿಲ್ಲ. ಕೃಷಿ ನಾಶದಿಂದ ನಷ್ಟಕ್ಕೊಳಗಾದ ಕೃಷಿಕರಿಗೆ ಪರಿಹಾರಧನ ನೀಡುತ್ತಿದೆ. ನಷ್ಟಕ್ಕೊಳಗಾದ ಕೃಷಿಕರು ಅರ್ಜಿ ಸಲ್ಲಿಸಬಹುದು. ಎನ್.ಮಂಜುನಾಥ್ ಸುಳ್ಯ ವಲಯ ಅರಣ್ಯಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net